ಮಕ್ಕಳಿಗೆ ಡಿ.ವಿ.ಡಿ ಗುರು ಮಕ್ಕಳಿಗೆ ಆಟ ಆಡಲು ಕಂಪ್ಯೂಟರ್ ಬೇಕು ಎನ್ನುವುದು ಹಳೆಯ ಮಾತು. ಆದರೆ ಕಂಪ್ಯೂಟರ್ ಈಗ ಪಾಠ ಮಾಡುವ ಗುರು ಕೂಡ ಆಗಿದೆ ಎನ್ನುವುದು ವಿಶೇಷ. ಪುಸ್ತಕ ಹಿಡಿದರೆ ನಿದ್ರೆಗೆ ಜಾರುವ ಮಕ್ಕಳು ಎಷ್ಟೋ. ಅಂತಹವರ ಆಸಕ್ತಿ ಕೆರಳಿಸಿ, ಅಭಿರುಚಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪ್ಯೂಟರ್ ಮೂಲಕ ಮಕ್ಕಳಿಗೆ ಪಾಠ ಮಾಡಲು ಹೊರಟಿದ್ದಾರೆ ಎಸ್.ವಿಶ್ವನಾಥ್. ಸುಮಾರು 37 ವರ್ಷಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಸಿದ ವಿಶ್ವನಾಥ್ ಅವರಿಗೆ ಮಕ್ಕಳ ಕಲಿಕಾ ಸಮಸ್ಯೆಯ ಅರಿವಿದೆ. ಮಕ್ಕಳು ಖುಷಿಯಿಂದ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ನಿಟ್ಟಿನಲ್ಲಿ ಡಿ.ವಿ.ಡಿ ಪಾಠಗಳ ಹೊಸ ಸಂಸ್ಕೃತಿಯನ್ನು ಹುಟ್ಟು ಹಾಕಿದ್ದಾರೆ. ಇಂಗ್ಲಿಷ್ ವಿಷಯದ ಬಗ್ಗೆ ಈಗಾಗಲೇ ಕೆಲವು ಡಿ.ವಿ.ಡಿ.ಗಳು ಸಿದ್ಧಗೊಂಡಿವೆ. ಆದರೆ ಕನ್ನಡದಲ್ಲಿ ಉತ್ತಮ ಗುಣಮಟ್ಟದ ಡಿ.ವಿ.ಡಿ ತಯಾರಿಸುವ ಪ್ರಯತ್ನಕ್ಕೆ 2011ರಲ್ಲಿ ಚಾಲನೆ ನೀಡಿದವರು ಅವರು. ನಕ್ಷೆ, ಚಿತ್ರಗಳು, ಶಬ್ದ, ಗ್ರಾಫಿಕ್ ಬಳಸಿ ಸಮಾಜ ವಿಜ್ಞಾನ ವಿಷಯದ ಸುಮಾರು ಎರಡೂವರೆ ಗಂಟೆಗಳ ಡಿ.ವಿ.ಡಿ ಬಿಡುಗಡೆ ಮಾಡಿದ್ದಾರೆ. ಇದೀಗ ಅದೇ ತಂತ್ರಜ್ನಾನ ಬಳಸಿ ಭೂಗೋಳ ವಿಷಯವನ್ನು (ರಾಜ್ಯ ಸರ್ಕಾರದ 10ನೇ ತರಗತಿಯ ಪಠ್ಯವನ್ನು ಆಧರಿಸಿ) ರೂಪಿಸಿದ್ದಾರೆ. `ಶಾಲೆಯಲ್ಲಿ ಆರಂಭವಾಗುವ ಮುನ್ನ ಆ ಪಾಠವನ್ನು ಮನೆಯಲ್ಲೇ ಒಂದು ಬಾರಿ ಕಂಪ್ಯೂಟರ್ ಸಹಾಯದಿಂದ ನೋಡಿಕೊಂಡು ಹೋದರೆ, ತರಗತಿಯಲ್ಲಿ ಹೇಳುವುದೆಲ್ಲ ಸುಲಭವಾಗಿ ಅರ್ಥವಾಗುತ್ತದೆ. ಇದರಿಂದ ಮಕ್ಕಳು ಹೆಚ್ಚು ಖುಷಿಯಿಂದ ಪಾಠ ಆಲಿಸುತ್ತಾರೆ ಮತ್ತು ಪ್ರತಿಕ್ರಿಯಿಸುತ್ತಾರೆ. ಅದೇ ರೀತಿ ಶಾಲೆಯಲ್ಲಿ ನಡೆದ ಪಾಠವನ್ನು ಮತ್ತೊಮ್ಮೆ ಮನೆಯಲ್ಲಿ ಬಂದು ನೋಡಿದರೆ, ಸುಲಭವಾಗಿ ವಿಷಯ ಮನನ ಮಾಡಿಕೊಳ್ಳಲು ಸಹಾಯವಾಗುತ್ತದೆ' ಎನ್ನುತ್ತಾರೆ ವಿಶ್ವನಾಥ್. ಶಾಲೆಯಲ್ಲಿ ಮಾಡುವ ಪಾಠಗಳನ್ನು ಕೇಳುವಾಗ ಮಕ್ಕಳು ತಮ್ಮ ಸಾಮರ್ಥಕ್ಕೆ ಅನುಸಾರವಾಗಿ ದೃಶ್ಯಗಳ ಕಲ್ಪನೆ ಮಾಡಿಕೊಳ್ಳಬೇಕಾಗುತ್ತದೆ. ಆದರೆ ವಿಶ್ವನಾಥ್ ಅವರು ರೂಪಿಸಿರುವ ಈ ಪಾಠಗಳ ಡಿ.ವಿ.ಡಿ.ಯಲ್ಲಿ ದೃಶ್ಯ, ಶಬ್ದ ಮತ್ತು ಧ್ವನಿಯ ಸಮ್ಮಿಲನ ಇರುವುದರಿಂದ ವಿಷಯ ಹೆಚ್ಚು ಶೀಘ್ರವಾಗಿ ಮತ್ತು ಪರಿಣಾಮಕಾರಿಯಾಗಿ ಮೆದುಳಿನಲ್ಲಿ ನೆಲೆಗೊಳ್ಳಬಲ್ಲದು. ಕೇವಲ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸುವುದು ಮಾತ್ರವಲ್ಲದೆ, ವಿಷಯದ ಗ್ರಹಿಕೆಗೆ ಪೂರಕವಾಗಿ ಪಠ್ಯವನ್ನು ತಯಾರಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.