ದಂಡಂ ದಶಗುಣಂ ನಾನು ಬಹಳ ವರ್ಷ ಸೇವೆ ಸಲ್ಲಿಸಿದ, ಆ ಸಂದರ್ಭದಲ್ಲಿ ಜಿಲ್ಲೆಯಲ್ಲೇ ಶಿಸ್ತು ಮತ್ತು ಗುಣಮಟ್ಟಕ್ಕೆ ಹೆಸರಾಗಿದ್ದ ಶಾಲೆಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ಘಟನೆ ಒಂದನ್ನು ನಾನು ಇಲ್ಲಿ ಪ್ರಸ್ತಾಪಿಸುತ್ತೇನೆ. ಒಂದು ಮಧ್ಯಾಹ್ನ ಶಾಲೆಯ ಕೆಲವು ಪುಂಡ ವಿದ್ಯಾರ್ಥಿಗಳ ಗುಂಪು, ಇತರ ಎಲ್ಲ ಮಕ್ಕಳನ್ನೂ ಪ್ರಚೋದಿಸಿ ಶಿಕ್ಷಕರೊಬ್ಬರನ್ನು ಕೊಠಡಿಯಲ್ಲಿ ಬಂಧಿಸಿತು. ಡೆಸ್ಕುಗಳನ್ನು ತರಗತಿಯ ಕೋಣೆಯೊಂದರಲ್ಲಿ ಸೇರಿಸಿ, ಬೆಂಕಿ ಇಟ್ಟು ಜೈಕಾರ ಹಾಕಿಬಿಟ್ಟಿತು. ಪ್ರಾಂಶುಪಾಲರಾದಿಯಾಗಿ ಎಲ್ಲ ಶಿಕ್ಷಕ ವರ್ಗದವರೂ ಮೂಕ ಪ್ರೇಕ್ಷಕರಾದರೇ ಹೊರತು, ಆ ಮಕ್ಕಳ ಹತ್ತಿರಕ್ಕೂ ಹೋಗುವ ಸಾಹಸ ಮಾಡಲಿಲ್ಲ. ಹತ್ತಿರದಲ್ಲಿದ್ದ ಹಳ್ಳಿಯ ಜನ ಸ್ಥಳಕ್ಕೆ ಧಾವಿಸಿ, ಮಕ್ಕಳಿಗೆ ಪೆಟ್ಟು ಕೊಟ್ಟು ಬೆಂಕಿಯನ್ನು ನಂದಿಸಿದರು. ಮಕ್ಕಳ ಇಂತಹ ಪುಂಡಾಟಕ್ಕೆ ಯಾವ ಕಾರಣವೂ ಇರಲಿಲ್ಲ. ಮಕ್ಕಳಿಗೆ ಶಿಕ್ಷಕರ ಭಯ ಇಲ್ಲವಾದರೆ, ಅಶಿಸ್ತು ಮಿತಿಮೀರಿದರೆ ಏನೆಲ್ಲ ನಡೆದೀತು ಎಂಬುದಕ್ಕೆ, ಒಂದು ವಿದ್ಯಾಸಂಸ್ಥೆಯೇ ಹೇಗೆ ಹಾಳಾಗಿ ಹೋಗುತ್ತದೆ ಎಂಬುದಕ್ಕೆ ಇದು ಒಂದು ನಿದರ್ಶನ. ಶಿಕ್ಷೆ ಬೇಡ ಎಂದು ವಾದಿಸುವವರು, ಕೆಲವು ವಿಷಯಗಳನ್ನು ಅವಶ್ಯವಾಗಿ ಗಮನಿಸಬೇಕು. ವಿದ್ಯಾರ್ಥಿ ಹಾಗೂ ಜನಸಮುದಾಯದಲ್ಲಿ ಬರಿಯ `ಸಾತ್ವಿಕ' ಗುಣ ಸ್ವಭಾವದವರು ಮಾತ್ರ ಇರುವುದಿಲ್ಲ. ವಿವಿಧ ಮನೋಧರ್ಮದ ಜನರಿರುವ ಕಾರಣದಿಂದಾಗಿಯೇ ಸರ್ಕಾರ, ಸಂವಿಧಾನ, ಪೊಲೀಸ್, ಕಾನೂನು ನ್ಯಾಯಾಂಗ ಮುಂತಾದ ವ್ಯವಸ್ಥೆಗಳಿವೆ. ಎಲ್ಲ ಜನರೂ ಅವರವರೇ ತಿಳಿದುಕೊಂಡು ಒಳ್ಳೆಯ ನಡತೆಯವರಾಗಿರಲು ಸಾಧ್ಯವಿಲ್ಲ. ಹಾಗಿದ್ದ ಪಕ್ಷದಲ್ಲಿ ದೇಶದಲ್ಲಿ ಕಾನೂನು, ರಕ್ಷಣೆ ಮತ್ತು ನ್ಯಾಯಾಂಗ ವ್ಯವಸ್ಥೆಗಳಾದರೂ ಏಕೆ ಬೇಕು? ಬಹುಸಂಖ್ಯಾತರು ಶಿಕ್ಷೆಯ ಭಯ, ದೈವ ಭಯದ ಕಾರಣದಿಂದ ಸಭ್ಯರಾಗಿ ನಡೆದುಕೊಳ್ಳುತ್ತಾರೆ ಎಂಬುದನ್ನು ನಾವು ಅರಿಯಬೇಕು. ಶಿಕ್ಷೆಯ ಭಯ ಇಲ್ಲದ್ದರಿಂದಲೇ ಇಂದು ದೇಶದ ಉದ್ದಗಲಕ್ಕೂ ಅತ್ಯಾಚಾರ, ಅನಾಚಾರಗಳು ಅವ್ಯಾಹತವಾಗಿ ನಡೆಯುತ್ತಿವೆ. ವಿದ್ಯಾರ್ಥಿಗಳಿಂದ ಹಿಡಿದು ಮಂತ್ರಿಗಳವರೆಗೂ ಭಯ ಎಂಬುದಿಲ್ಲ. ವಿದ್ಯಾರ್ಥಿ ಸಮೂಹವೂ ಸಮಾಜದ ಒಂದು ಭಾಗ. ನಾಲ್ಕಾರು ಪುಂಡ ವಿದ್ಯಾರ್ಥಿಗಳು ಇಡೀ ಶಾಲೆಯ ಇತರ ಒಳ್ಳೆಯ ವಿದ್ಯಾರ್ಥಿಗಳನ್ನು ಬೆದರಿಸಿ, ಮನಸೋ ಇಚ್ಛೆ ವರ್ತಿಸಿದರೆ ಅಂತಹವರಿಗೆ ದಂಡನೆ ಬೇಡವೇ? ಕೆಲವೇ ವಿದ್ಯಾರ್ಥಿಗಳ ಪುಂಡಾಟಿಕೆಯಿಂದ ಇತರ ಉತ್ತಮ ವಿದ್ಯಾರ್ಥಿಗಳು ಹಾಗೂ ಸಮಗ್ರ ವಿದ್ಯಾಸಂಸ್ಥೆಯೇ ಹಾಳಾಗುವುದನ್ನು ಮೂಕ ಪ್ರೇಕ್ಷಕರಾಗಿ ನೋಡುತ್ತಾ ಕೂರಬೇಕೇ? ಒಂದು ವಿದ್ಯಾಸಂಸ್ಥೆಯನ್ನು ವ್ಯವಸ್ಥಿತವಾಗಿ ಶಿಸ್ತುಬದ್ಧವಾಗಿ ನಡೆಸಬೇಕೆಂದರೆ, ಒಳ್ಳೆಯ ವಿದ್ಯಾರ್ಥಿಗಳು ನಿರ್ಭಯ ವಾತಾವರಣದಲ್ಲಿ ಕಲಿಯಬೇಕೆಂದರೆ, ಹೆಣ್ಣು ಮಕ್ಕಳು ಸುರಕ್ಷಿತವಾಗಿ ಇರುವಂತೆ ನೋಡಿಕೊಳ್ಳಬೇಕೆಂದರೆ ಕೆಲವು ವಿದ್ಯಾರ್ಥಿಗಳಿಗೆ `ದಂಡ'ನೆಯ ಭಯ ಬೇಕೇ ಬೇಕು. `ವಿದ್ಯಾರ್ಥಿಗಳು ಶಿಕ್ಷಕನ ಕೈಯಿಂದ ಬೆತ್ತ ಕಸಿದುಕೊಂಡ ಕ್ಷಣದಿಂದ ಶಾಲೆಯ ಶಿಸ್ತು ಕ್ರಮೇಣ ನಶಿಸಲಾರಂಭಿಸುತ್ತದೆ' ಎಂಬ ಶಿಕ್ಷಣ ತಜ್ಞ ಹಾಗೂ ಕನ್ನಡ ಸಾಹಿತಿ ದಿವಂಗತ ಬಿ.ಎಚ್.ಶ್ರೀಧರ್ ಅವರ ಮಾತಿನಲ್ಲಿ ಹುರುಳಿದೆ. ಬುದ್ಧಿ ಮಾತು ನಾಟದು ಇನ್ನು ಶಿಕ್ಷೆ ಯಾರಿಗೆ ಬೇಕು, ಶಿಕ್ಷೆಯ ವಿಧಾನ ಹೇಗಿರಬೇಕು ಎಂಬುದನ್ನು ಆಯಾಯ ಶಿಕ್ಷಕರು ಪೂರ್ವಗ್ರಹ ಪೀಡಿತರಾಗದೇ ನಿರ್ಧರಿಸಬೇಕು. ಮಕ್ಕಳ ಮನೋಧರ್ಮವನ್ನು ಅರಿತು ಶಿಕ್ಷೆ ನೀಡಬೇಕು. ಬಹುತೇಕ ಮಕ್ಕಳು ಸೂಕ್ಷ್ಮ ಮನೋಭಾವದವರು. ಅಂತಹ ಸಂವೇದನಾಶೀಲರಿಗೆ ಒಂದು ಗದರಿಕೆ ಸಹ ಬೇಕಾಗುವುದಿಲ್ಲ. ಒಂದು ದೊಡ್ಡ ಮಾತನ್ನೂ ಹೇಳಿಸಿಕೊಳ್ಳದೆ ನಿಯತ್ತಿನ ವಿದ್ಯಾರ್ಥಿಗಳಾಗಿ ಕಲಿತುಹೋದ ಸಾವಿರಾರು ವಿದ್ಯಾರ್ಥಿಗಳನ್ನು ನಾನು ಕಂಡಿದ್ದೇನೆ, ಹೆಮ್ಮೆ ಪಟ್ಟಿದ್ದೇನೆ. ಆದರೆ ಇದೇ ನೀತಿ ಎಲ್ಲರಿಗೂ ಅನ್ವಯವಾಗದು. ಕೆಲವರಿಗೆ ಬುದ್ಧಿ ಮಾತುಗಳು ತಾಗುವುದೇ ಇಲ್ಲ. ಅವರು `ಎಮ್ಮೆ' ಚರ್ಮದವರು. ಅಂತಹವರನ್ನು ನಾವು ಉದಾಸೀನ ಮಾಡಿದ್ದೇ ಆದರೆ ತಾವು ಹಾಳಾಗುವುದಲ್ಲದೆ ಇತರರನ್ನೂ ಹಾಳು ಮಾಡಿ, ಒಂದು ಸಂಸ್ಥೆಯನ್ನೇ ನಾಶ ಮಾಡಿಯಾರು. ಇಂತಹವರಿಗೆ `ದಂಡಂ ದಶಗುಣಂ' ಅನಿವಾರ್ಯ. ಶಿಕ್ಷೆಯ ಭಯ ತಪ್ಪಿತಸ್ಥನನ್ನು ತಿದ್ದುವುದು ಮಾತ್ರವಲ್ಲದೆ ಉಳಿದವರಲ್ಲಿ ತಪ್ಪು ಮಾಡದಂತೆ ಭೀತಿ, ಎಚ್ಚರವನ್ನು ಮೂಡಿಸೀತು. ಆದರೆ ಶಾಲಾ ಕಾಲೇಜುಗಳು ಪೊಲೀಸ್ ಠಾಣೆಗಳಾಗಬಾರದು. ತಪ್ಪನ್ನು ತಿದ್ದಲು ಎಷ್ಟು ಶಿಕ್ಷೆ ಬೇಕೋ ಅಷ್ಟೆ. ಒಂದು ಸಣ್ಣ ಭಯ ಹುಟ್ಟಿಸುವುದಕ್ಕೆ ಮಾತ್ರ ಶಿಕ್ಷೆ ಸೀಮಿತ ಆಗಿರಬೇಕು. ಬಹುತೇಕ ವಿದ್ಯಾರ್ಥಿಗಳನ್ನು ಹಿತವಚನದ ಮೂಲಕವೇ ತಿದ್ದಬಹುದು. ಹೀಗಾಗಿ ವಿದ್ಯಾರ್ಥಿಗಳೇ ಆಗಲಿ ಸಮಾಜದ ವಿವಿಧ ಸ್ತರಗಳಲ್ಲಿರುವ ವ್ಯಕ್ತಿಗಳಾಗಲಿ, ಆಕ್ರಮಣಕಾರಿ ಧೋರಣೆಯಿಂದ ಬೀಗುವವರಿಗೆ, ಅಪರಾಧಗಳ ತಡೆಗೆ ಶಿಕ್ಷೆ ಬೇಕು. ಶಿಕ್ಷೆಯ ಭಯದಿಂದ ಉಳಿದವರು ಅಪರಾಧಗಳನ್ನು ಎಸಗದಿರಲಿ ಎಂಬುದೇ ಶಿಕ್ಷೆಯ ಉದ್ದೇಶ. ತಪ್ಪಿಗೆ, ಅಪರಾಧಕ್ಕೆ, ಅಪರಾಧಗಳನ್ನು ತಡೆಯುವುದಕ್ಕೆ ಶಿಕ್ಷೆ ಅತ್ಯಗತ್ಯ. ಅಂಥವರಿಗೆ ಶಿಕ್ಷೆ ಕೊಡದಿದ್ದರೆ ಅದೇ ಅಪರಾಧ. ಅವರಲ್ಲಿ ಮುಂದೆ ಅದೇ ಪ್ರವೃತ್ತಿ ಬೆಳೆದು ಸಮಾಜದ ಅಶಾಂತಿಗೆ, ದೇಶದ ಅರಾಜಕತೆಗೆ ಕಾರಣವಾಗಬಹುದು ಎಂಬುದನ್ನು ನಾವು ಮನವರಿಕೆ ಮಾಡಿಕೊಳ್ಳಬೇಕು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.