ಅರ್ಹತಾ ಪರೀಕ್ಷೆ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯವಾಗಿ ಶಿಕ್ಷಣ ನೀಡುವ ಹಕ್ಕನ್ನು ಜಾರಿಗೆ ತರುವ ನಿಟ್ಟಿನಲ್ಲಿ ಶಿಕ್ಷಣ ರಂಗದಲ್ಲಿ ಹಲವಾರು ಹೊಸ ಕ್ರಮಗಳನ್ನು ಅಳವಡಿಸಿಕೊಳ್ಳಲಾಗುತ್ತಿದೆ. ಈ ಪ್ರಕ್ರಿಯೆಯ ಭಾಗವಾಗಿ ಶಿಕ್ಷಕರ ಅರ್ಹತೆ (ಅಭಿಕ್ಷಮತೆ) ಮತ್ತು ಬೋಧನಾ ಸಾಮರ್ಥ್ಯವನ್ನು ಖಚಿತಪಡಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು ಜಾರಿಗೆ ತರಲಾಗಿದೆ. ಈಗಾಗಲೇ ಈ ಪರೀಕ್ಷೆಯನ್ನು ಕೇಂದ್ರ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ನಡೆಸಲಾಗುತ್ತಿದೆ. ಶಿಕ್ಷಣದ ರಾಷ್ಟ್ರೀಯ ಮಾದರಿಗೆ ಇದೀಗ ತೆರೆದುಕೊಳ್ಳುತ್ತಿರುವ ಕರ್ನಾಟಕ ಸರ್ಕಾರ, ಈ ಬಾರಿಯ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಗೆ ಈ ಅರ್ಹತಾ ಪರೀಕ್ಷೆಯನ್ನೇ ಪ್ರಮುಖ ಮಾನದಂಡವಾಗಿ ಪರಿಗಣಿಸಲಿದೆ. ಏನಿದು ಶಿಕ್ಷಕರ ಅರ್ಹತಾ ಪರೀಕ್ಷೆ? ಶಿಕ್ಷಕ ವೃತ್ತಿ ಒಂದು ವಿಶಿಷ್ಟ ವೃತ್ತಿಯಾಗಿದ್ದು ಅದಕ್ಕೆ ಸೇರುವ ವ್ಯಕ್ತಿ ವೃತ್ತಿಪರವಾದ ಶೈಕ್ಷಣಿಕ ಅರ್ಹತೆಯನ್ನು ಗಳಿಸುವುದು ಅತ್ಯವಶ್ಯ. ಹೀಗಾಗಿಯೇ ಕರ್ನಾಟಕವನ್ನೂ ಒಳಗೊಂಡು ರಾಷ್ಟ್ರದಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರಾಗಲು ಶಿಕ್ಷಣದಲ್ಲಿ ಡಿಪ್ಲೊಮಾ ಹಾಗೂ ಪ್ರೌಢಶಾಲಾ ಹಂತಕ್ಕೆ ಶಿಕ್ಷಕರಾಗಲು ಸಾಮಾನ್ಯ ಪದವಿಯೊಂದಿಗೆ ಶಿಕ್ಷಣದ ಪದವಿಯನ್ನು ಕಡ್ಡಾಯ ಅರ್ಹತೆಯಾಗಿ ನಿಗದಿ ಮಾಡಲಾಗಿದೆ. ನಮ್ಮ ರಾಜ್ಯದಲ್ಲಿ ಮೊದಲು ಈ ಸಾಮಾನ್ಯ ಅರ್ಹತಾ ಪರೀಕ್ಷೆಗಳಲ್ಲಿ ಗಳಿಸಿದ ಅಂಕಗಳನ್ನು ಮಾನದಂಡವಾಗಿ ಇರಿಸಿಕೊಂಡು ಶಿಕ್ಷಕ ಹುದ್ದೆಗೆ ನೇಮಕಾತಿ ನಡೆಸಲಾಗುತ್ತಿತ್ತು. 2003ರಿಂದ ಇಲ್ಲಿಯವರೆಗೆ ಸಂಯುಕ್ತ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ, ಅದರಲ್ಲಿ ಅಭ್ಯರ್ಥಿ ಗಳಿಸಿದ ಅಂಕಗಳನ್ನು ಪರಿಗಣಿಸಿ ನೇಮಕಾತಿ ಮಾಡುವ ಪದ್ಧತಿ ಜಾರಿಯಲ್ಲಿತ್ತು. ಆದರೆ ರಾಷ್ಟ್ರೀಯ ಮಟ್ಟದ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರುತ್ತಿರುವ ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದ ಮನ್ವಂತರದ ಕಾಲಘಟ್ಟ ಇದು. ಹೀಗಾಗಿ, ಇಲ್ಲಿಯವರೆಗೆ ರೂಢಿಯಲ್ಲಿದ್ದ 1ರಿಂದ 7ನೇ ತರಗತಿಯ ಪ್ರಾಥಮಿಕ ಶಿಕ್ಷಣ, 8ರಿಂದ 10ರವರೆಗಿನ ಪ್ರೌಢ ಶಿಕ್ಷಣ ಮತ್ತು ನಂತರದ ಎರಡು ವರ್ಷದ ಪದವಿ ಪೂರ್ವ ಶಿಕ್ಷಣದ ಬದಲಾಗಿ 1ರಿಂದ 5ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ, 6ರಿಂದ 8ನೇ ತರಗತಿವರೆಗೆ ಮಾಧ್ಯಮಿಕ ಶಿಕ್ಷಣ ಮತ್ತು 9ರಿಂದ 12ನೇ ತರಗತಿವರೆಗೆ ಹಿರಿಯ ಮಾಧ್ಯಮಿಕ ಶಿಕ್ಷಣ ಎಂದು ಪರಿಗಣಿಸಲಾಗುತ್ತದೆ. ಈ ಉದ್ದೇಶದಿಂದಲೇ ರಾಜ್ಯ ಸರ್ಕಾರ ಹಂತಹಂತವಾಗಿ ಎಲ್ಲ ತರಗತಿಗಳ ಪಠ್ಯಕ್ರಮವನ್ನೂ ರಾಷ್ಟೀಯ ಪಠ್ಯಕ್ರಮಕ್ಕೆ ಅನುಗುಣವಾಗಿ ಪರಿವರ್ತಿಸುತ್ತಿದೆ. ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಅಧಿನಿಯಮ- 2009ರ ಕಲಂ 23ರ ಉಪಕಲಂ 1ರ ಪ್ರಕಾರ, ಶಿಕ್ಷಕ ವೃತ್ತಿ ಕೈಗೊಳ್ಳಲು ಈಗ ಕಡ್ಡಾಯ ಅರ್ಹತೆಯಾಗಿ ಅರ್ಹತಾ ಪರೀಕ್ಷೆಯನ್ನು ಪರಿಗಣಿಸಲಾಗಿದೆ. ಈ ಪರೀಕ್ಷೆಗೆ ಕನಿಷ್ಠ ಅಂಕ ಗಳಿಕೆಯನ್ನು ನಿಗದಿ ಮಾಡಲಾಗಿದೆ. ಇದರ ಜೊತೆಗೆ ಇತರ ಯಾವುದೇ ಮಾನದಂಡವನ್ನು ಪರಿಗಣಿಸಿ ಶಿಕ್ಷಕ ಹುದ್ದೆಗೆ ಅಭ್ಯರ್ಥಿಗಳನ್ನು ನೇಮಕ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರುತ್ತದೆ. ಶಿಕ್ಷಕರ ಅರ್ಹತಾ ಪರೀಕ್ಷೆಯು ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. 1ರಿಂದ 5ನೇ ತರಗತಿವರೆಗೆ ಬೋಧಿಸುವ ಶಿಕ್ಷಕರು ಪತ್ರಿಕೆ- 1ರಲ್ಲಿ ಕನಿಷ್ಠ ಅಂಕಗಳನ್ನು ಪಡೆಯುವುದು ಕಡ್ಡಾಯ. ಹಾಗೆಯೇ 6ರಿಂದ 8ನೇ ತರಗತಿವರೆಗೆ ಬೋಧಿಸುವ ಮಾಧ್ಯಮಿಕ ಶಾಲಾ ಶಿಕ್ಷಕರು ಪತ್ರಿಕೆ- 2ರಲ್ಲಿ ಕನಿಷ್ಠ ಅಂಕಗಳನ್ನು ಗಳಿಸುವುದು ಕಡ್ಡಾಯ. ಪಠ್ಯಕ್ರಮದ ವ್ಯಾಪ್ತಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಅಧಿನಿಯಮ 2009ರಲ್ಲಿ ಪ್ರಸ್ತಾಪವಾಗಿರುವ ಕರ್ತವ್ಯದಂತೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿಯು ಶಿಕ್ಷಕರ ಅರ್ಹತಾ ಪರೀಕ್ಷೆಗೆ ಪಠ್ಯಕ್ರಮವನ್ನು ನಿರ್ಧರಿಸಿದೆ. ಈ ಪಠ್ಯಕ್ರಮದಂತೆ ಶಿಶು ಮನೋವಿಜ್ಞಾನ ವಿಭಾಗವು ಶೈಕ್ಷಣಿಕ ಮನೋವಿಜ್ಞಾನದ 6ರಿಂದ 11 ವರ್ಷದವರೆಗಿನ ಮಕ್ಕಳ ಬೆಳವಣಿಗೆ ಮತ್ತು ವಿಕಾಸ, ಈ ಹಂತದ ಮಕ್ಕಳ ದೈಹಿಕ, ಬೌದ್ಧಿಕ, ಸಾಮಾಜಿಕ ಮತ್ತು ನೈತಿಕ ಲಕ್ಷಣಗಳನ್ನು ಒಳಗೊಂಡಿರುತ್ತದೆ. ಈ ವಿಭಾಗವು ಮುಖ್ಯವಾಗಿ 1ರಿಂದ 5ನೇ ತರಗತಿಯಲ್ಲಿ ಅಭ್ಯಸಿಸುವ ವೈವಿಧ್ಯಮಯ ಕಲಿಕಾಕಾರರ ಗುಣಲಕ್ಷಣಗಳು ಮತ್ತು ಅವರ ಅಗತ್ಯಗಳ ಬಗ್ಗೆ ಶಿಕ್ಷಕರು ಹೊಂದಿರುವ ಮನೋವೈಜ್ಞಾನಿಕ ಜ್ಞಾನವನ್ನು ಪರೀಕ್ಷಿಸುವಂತೆ ಇರುತ್ತದೆ. ವಿಶೇಷವಾಗಿ ಬೋಧನಾ ವಿಧಾನಗಳ ಮನೋವೈಜ್ಞಾನಿಕ ನೆಲೆಗಳು ಹಾಗೂ ಶಿಕ್ಷಕನ ತರಗತಿ ನಿರ್ವಹಣೆಯ ಮನೋವೈಜ್ಞಾನಿಕ ಅನ್ವಯಗಳನ್ನು ಪರೀಕ್ಷಿಸುವಂತೆ ಪ್ರಶ್ನೆಗಳು ಇರುತ್ತವೆ. ಶಿಶು ಮನೋವಿಜ್ಞಾನವು ಶುದ್ಧ ಮನೋವಿಜ್ಞಾನದ ಒಂದು ಶಾಖೆ. ಈ ಶಾಖೆಯಿಂದಲೇ ಶೈಕ್ಷಣಿಕ ಮನೋವಿಜ್ಞಾನವು ತತ್ವ ಸಿದ್ಧಾಂತಗಳನ್ನು ಶಿಕ್ಷಣ ಕ್ಷೇತ್ರದಲ್ಲಿ ಅಳವಡಿಸುವ ಬಗ್ಗೆ ಚರ್ಚಿಸುತ್ತದೆ. ಹಾಗಾಗಿ ಶೈಕ್ಷಣಿಕ ಮನೋವಿಜ್ಞಾನ ಪಠ್ಯವನ್ನು ಬಾಲ್ಯಾವಸ್ಥೆಯ ವರ್ತನಾ ಗುಣಲಕ್ಷಣಗಳಿಗೆ ಸಂಬಂಧಿಸಿದಂತೆ ಆಳವಾಗಿ ಅಭ್ಯಸಿಸಬೇಕು. ಈ ಪಠ್ಯಕ್ರಮವನ್ನು ಡಿ.ಎಡ್ ತರಗತಿಯಲ್ಲೇ ಸ್ಥೂಲವಾಗಿ ಅಭ್ಯಸಿಸಿದ್ದರೂ ರಾಷ್ಟ್ರೀಯ ಶಿಕ್ಷಕ ಅರ್ಹತಾ ಪರೀಕ್ಷೆಗೆ ಭಿನ್ನ ತಯಾರಿ ಅಗತ್ಯ. ಡಿ.ಎಡ್.ನಲ್ಲಿ ಪ್ರಬಂಧ ಮಾದರಿಯ ಪ್ರಶ್ನೆಗಳಿಗೆ ವಸ್ತುನಿಷ್ಠ ರೀತಿಯಲ್ಲಿ ಉತ್ತರ ಬರೆಯಲಾಗುತ್ತದೆ. ಆದರೆ ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ವಸ್ತುನಿಷ್ಠ ಮಾದರಿಯ ಬಹು ಆಯ್ಕೆಯ ಪ್ರಶ್ನೆಗಳಿಗೆ ಉತ್ತರಿಸಲು ಅಭ್ಯರ್ಥಿಗಳು ವಿಷಯದ ಸ್ಪಷ್ಟ ಗ್ರಹಿಕೆ ಹೊಂದುವುದು ಅವಶ್ಯಕ. ಅಲ್ಲದೆ ಪ್ರಶ್ನೆಗಳು ಶಿಕ್ಷಕ ವೃತ್ತಿಗೆ ಅಭ್ಯರ್ಥಿಗಳಿಗೆ ಇರುವ ಅರ್ಹತೆಯನ್ನು ಪರೀಕ್ಷಿಸುವಂತಿದ್ದು ವೃತ್ತಿಯ ಅನುಭವ ಮತ್ತು ರೂಢಿಗಳನ್ನು ಆಧರಿಸಿರುತ್ತವೆ. ಅಲ್ಲದೆ ನಿರ್ದಿಷ್ಟ ಪಠ್ಯವಸ್ತುವನ್ನು ಸೂಕ್ತ ಬೋಧನಾ ವಿಧಾನದ ಮೂಲಕ ಬೋಧಿಸುವ ಬಗ್ಗೆ ಅಭ್ಯರ್ಥಿಗಳು ತಿಳಿವಳಿಕೆ ಹೊಂದಿರಬೇಕು. ಈ ನಿಟ್ಟಿನಲ್ಲಿ ವಿವಿಧ ಬೋಧನಾ ವಿಧಾನಗಳ ಮನೋವೈಜ್ಞಾನಿಕ ತಳಹದಿಗಳನ್ನು ಅರಿತಿರಬೇಕು. ತರಗತಿಯಲ್ಲಿರುವ ವಿಶೇಷ ಮಕ್ಕಳ, ಅಂದರೆ ಕಲಿಕೆಯಲ್ಲಿ ಹಿಂದುಳಿದ, ವಿಕಲಚೇತನ ಮಕ್ಕಳ ವಿಶೇಷ ಅಗತ್ಯಗಳ ಬಗ್ಗೆ ಪ್ರಶ್ನೆಗಳು ಸಂಭವನೀಯ. ಹಾಗಾಗಿ ವಿಶೇಷ ಅಥವಾ ಅಪವಾದಾತ್ಮಕ ಮಕ್ಕಳ ಮನೋವೈಜ್ಞಾನಿಕ ಲಕ್ಷಣಗಳು ಹಾಗೂ ಅವರ ಶೈಕ್ಷಣಿಕ ಅಗತ್ಯಗಳ ಬಗ್ಗೆ ಅಭ್ಯರ್ಥಿಗಳು ವಿಶೇಷ ಜ್ಞಾನ ಹೊಂದಿರಬೇಕು. ಭಾಷೆ 1 ಹಾಗೂ 2ರ ಪಠ್ಯಕ್ರಮವು (ಕನ್ನಡ ಹಾಗೂ ಆಂಗ್ಲ ಭಾಷೆ) ಅಭ್ಯರ್ಥಿಯ ಆಯಾ ಭಾಷೆಗಳಲ್ಲಿನ ಭಾಷಾ ಪ್ರೌಢಿಮೆ ಹಾಗೂ ಸಾಮಾನ್ಯ ಬಳಕೆಯನ್ನು ಪರೀಕ್ಷಿಸುವ ಪ್ರಶ್ನೆಗಳನ್ನು ಒಳಗೊಳ್ಳುತ್ತವೆ. ಪರಿಸರ ವಿಜ್ಞಾನ (ವಿಜ್ಞಾನ ಮತ್ತು ಸಮಾಜ ವಿಜ್ಞಾನ) ಹಾಗೂ ಗಣಿತ ವಿಷಯಗಳ ಪಠ್ಯಕ್ರಮವು ರಾಜ್ಯ ಸರ್ಕಾರ 5ನೇ ತರಗತಿಯವರೆಗೆ ನಿಗದಿಪಡಿಸಿದ ಪಠ್ಯಕ್ರಮದ ವ್ಯಾಪ್ತಿಯಲ್ಲಿ ಇರುತ್ತದೆ. ಆದರೆ, ಈ ವಿಷಯಗಳ ಬಗ್ಗೆ ಕೇಳುವ ಪ್ರಶ್ನೆಗಳು ಇದೇ ಪಠ್ಯಕ್ರಮವನ್ನು ಇನ್ನಷ್ಟು ವಿಸ್ತಾರವಾಗಿ ಕಲಿಸುವ ಮಾಧ್ಯಮಿಕ ಹಂತದವರೆಗಿನ (9ನೇ ತರಗತಿ) ಮಟ್ಟದಲ್ಲಿ ಇರುತ್ತವೆ. ಹಾಗಾಗಿ ಅಭ್ಯರ್ಥಿಗಳು 5ನೇ ತರಗತಿಯ ಪಠ್ಯಕ್ರಮದ ವ್ಯಾಪ್ತಿಯನ್ನು ಇನ್ನಷ್ಟು ವಿಸ್ತಾರವಾಗಿ ಒಳಗೊಂಡಿರುವ ಪ್ರೌಢಶಾಲಾ ಪುಸ್ತಕಗಳನ್ನೂ ಓದಿಕೊಳ್ಳಬೇಕು. ಪರೀಕ್ಷೆಯ ಸ್ವರೂಪ ಪರೀಕ್ಷೆಯು ನಿಗದಿತ ಪಠ್ಯಕ್ರಮ ವ್ಯಾಪ್ತಿಯಲ್ಲಿನ ಬಹು ಆಯ್ಕೆಯ ಮಾದರಿ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಒಟ್ಟು 150 ಪ್ರಶ್ನೆಗಳನ್ನು 150 ನಿಮಿಷಗಳ ಅವಧಿಯಲ್ಲಿ ಉತ್ತರಿಸಬೇಕು. ಪ್ರತಿ ಸರಿ ಉತ್ತರಕ್ಕೆ ಒಂದು ಅಂಕ ನೀಡಲಾಗುತ್ತದೆ. ಬದಲಾವಣೆ ಏನು? ಇಲ್ಲಿಯವರೆಗಿನ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯು 1ರಿಂದ 10ನೇ ತರಗತಿಯ ಮಟ್ಟದ ಕನ್ನಡ, ಆಂಗ್ಲ ಭಾಷೆಯ ಭಾಷಾ ಸಾಮರ್ಥ್ಯ, ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ಹಾಗೂ ಸಾಮಾನ್ಯ ಜ್ಞಾನವನ್ನು ಆಧರಿಸಿದ 150 ಅಂಕಗಳ 2 ಗಂಟೆಯ ಪತ್ರಿಕೆಯನ್ನು ಹೊಂದಿತ್ತು.ಅದರಲ್ಲಿ ಕನಿಷ್ಠ ಅಂಕ ಗಳಿಕೆಯ ನಿಬಂಧನೆ ಇರಲಿಲ್ಲ. ಆದರೆ ಪ್ರಸ್ತುತ ಬದಲಾವಣೆಯಿಂದ 150 ಅಂಕಗಳ ಭಿನ್ನ ಪಠ್ಯಕ್ರಮದ ಎರಡೂವರೆ ಗಂಟೆಗಳ ಪತ್ರಿಕೆಯನ್ನು ಅಭ್ಯರ್ಥಿಗಳು ಎದುರಿಸಬೇಕಿದೆ. ಇಲ್ಲಿ, ಇರುವ ಸಮಯವನ್ನು ಸದ್ಬಳಕೆ ಮಾಡಿಕೊಂಡು ಗರಿಷ್ಠ ಪ್ರಶ್ನೆಗಳನ್ನು ಸರಿಯಾಗಿ ಉತ್ತರಿಸಬೇಕಾದ ಅನಿವಾರ್ಯತೆ ಇದೆ. ಅಲ್ಲದೆ ಕನಿಷ್ಠ ಅಂಕಗಳ ನಿಬಂಧನೆಯೂ ಇದೆ. ಈ ಬಾರಿಯ ಪರೀಕ್ಷೆಯಲ್ಲಿ ಶಿಶು ಮನೋವಿಜ್ಞಾನವನ್ನು ಹೊಸದಾಗಿ ಸೇರ್ಪಡೆ ಮಾಡಿರುವುದು ಅಭ್ಯರ್ಥಿಗಳ ಗೊಂದಲಕ್ಕೆ ಕಾರಣವಾಗಿದೆ. ಈ ಬಾರಿಯ ಶಿಕ್ಷಕರ ನೇಮಕಾತಿಯಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆಯು ಅವರ ಅರ್ಹತೆ ಮತ್ತು ಆಯ್ಕೆ ಎರಡನ್ನೂ ನಿರ್ಧರಿಸಲು ಕಾರಣವಾಗುತ್ತದೆ. ಒಬ್ಬ ಅಭ್ಯರ್ಥಿಯು ಶಿಕ್ಷಕನಾಗಿ ನೇಮಕ ಹೊಂದಲು ಈ ಅರ್ಹತಾ ಪರೀಕ್ಷೆಯಲ್ಲಿ ಮೇಲಿನಂತೆ ಕನಿಷ್ಠ ಅಂಕಗಳನ್ನು ಗಳಿಸಬೇಕಾದುದು ಕಡ್ಡಾಯ. ಈ ಕನಿಷ್ಠ ಅಂಕಗಳು ಕೇವಲ ಅರ್ಹತೆಯನ್ನು ನಿರ್ಧರಿಸುತ್ತವೆ. ಆದರೆ ಅಭ್ಯರ್ಥಿಯು ಎಸ್ಸೆಸ್ಸೆಲ್ಸಿ/ ಪಿ.ಯು.ಸಿ.ಯಲ್ಲಿ ಗಳಿಸಿದ ಅಂಕಗಳು + ಟಿ.ಸಿ.ಎಚ್./ ಡಿ.ಎಡ್.ನಲ್ಲಿ ಗಳಿಸಿದ ಅಂಕಗಳು + ಅರ್ಹತಾ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಸರಾಸರಿ ಅಂಕವನ್ನು ಪರಿಗಣಿಸಿ ಆಯ್ಕೆ ನಿರ್ಧಾರವಾಗುತ್ತದೆ. ಆದ್ದರಿಂದ ಅರ್ಹತಾ ಪರೀಕ್ಷೆಯಲ್ಲಿ ಅಭ್ಯರ್ಥಿಯು ಕನಿಷ್ಠ ಅಂಕದ ಮೇಲ್ಪಟ್ಟು ಅತಿ ಹೆಚ್ಚು ಅಂಕ ಗಳಿಸುವುದು ನೇಮಕಾತಿಯ ದೃಷ್ಟಿಯಿಂದ ಮಹತ್ವಪೂರ್ಣ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.