ಅಂದಗೆಡದಿರಲಿ ಅಕ್ಷರ ಸುಂದರ ಕೈಬರಹ ರೂಢಿಸಿಕೊಳ್ಳಬೇಕಾದರೆ ಬರವಣಿಗೆಯ ಪ್ರಾರಂಭ, ಮುಂದುವರಿಕೆ ಮತ್ತು ಅಂತ್ಯದ ಕಡೆ ಗಮನಹರಿಸಬೇಕು. ಪ್ರತಿ ಅಕ್ಷರವನ್ನೂ ಬರೆಯಲು ಹೇಗೆ ಪ್ರಾರಂಭಿಸಬೇಕು, ಹೇಗೆ ಮುಂದುವರಿಸಬೇಕು ಮತ್ತು ಹೇಗೆ ಅಂತ್ಯಗೊಳಿಸಬೇಕು ಎಂಬುದನ್ನು ಯೋಚಿಸಬೇಕು. ಕೆಲವು ಸಾರಿ ನಾವು ಸರಿಯಾದ ಕ್ರಮ ಅನುಸರಿಸದೆ ಇರುವುದರಿಂದಲೇ ನಮ್ಮ ಅಕ್ಷರಗಳು ಅಂದಗೆಡುತ್ತವೆ. (ದೃಷ್ಟಾಂತ 1). ಇಂಗ್ಲಿಷ್ ಅಕ್ಷರಗಳನ್ನು ಕೂಡಿಸಿ ಬರೆಯಬೇಕಾದಾಗ ಯಾವ ಅಕ್ಷರವು ಮುಂದಿನ ಯಾವ ಅಕ್ಷರಕ್ಕೆ ಎಲ್ಲಿ ಕೂಡಬೇಕು ಎಂಬುದನ್ನು ಯೋಚಿಸಬೇಕು. ಇಂಗ್ಲಿಷ್ ವರ್ಣಮಾಲೆಯಲ್ಲಿ 26 ಅಕ್ಷರಗಳಿವೆ. ಪ್ರತಿ ಅಕ್ಷರವೂ ಇನ್ನುಳಿದ 25 ಅಕ್ಷರಗಳೊಂದಿಗೆ ಹಿಂದೆ ಅಥವಾ ಮುಂದೆ ಸೇರಬೇಕಾಗುತ್ತದೆ. ಹೀಗೆ ತಾತ್ವಿಕವಾಗಿ 1300 ಜೋಡಣೆಗಳಿವೆ. ಇದರಲ್ಲಿ ದೊಡ್ಡಕ್ಷರಗಳನ್ನು ಸೇರಿಸಿಲ್ಲ. ಏಕೆಂದರೆ ಅವು ವಾಕ್ಯದ ಮೊದಲು ಬರುತ್ತವೆ. ಅಥವಾ ಪ್ರಾಪರ್ ನೌನ್‌ನ ಮೊದಲ ಅಕ್ಷರ ಕ್ಯಾಪಿಟಲ್ ಆಗಿರುತ್ತದೆ. ಅದನ್ನು ಕೂಡಿಸದಿದ್ದರೂ ಆದೀತು. ಒಬ್ಬ ತಾಯಿ ನನ್ನನ್ನು ಕೇಳಿದರು `ಒಂದು ಅಕ್ಷರವು ಮುಂದಿನ ಅಕ್ಷರವನ್ನು ಇಲ್ಲೇ ಕೂಡಬೇಕು ಎಂದು ಹೇಗೆ ಹೇಳುತ್ತೀರಿ?' ಉತ್ತರ ತುಂಬ ಸರಳ. ಆ ಎರಡು ಅಕ್ಷರಗಳನ್ನೂ ಬಿಡಿಬಿಡಿಯಾಗಿ ಮೊದಲು ಬರೆಯಿರಿ. ಮೊದಲನೆ ಅಕ್ಷರದ ಅಂತ್ಯ ಮತ್ತು ಮುಂದಿನ ಅಕ್ಷರದ ಆರಂಭ ಯಾವುದು ಎಂದು ನೋಡಿ. ಆಗ ಎಲ್ಲಿ ಕೂಡಿಸಬೇಕೆಂದು ನಿಮಗೇ ತಿಳಿಯುತ್ತದೆ. (ದೃಷ್ಟಾಂತ 2) ಓರೆ: ನಾವು ಬರೆಯುವ ಅಕ್ಷರಗಳು ನೆಟ್ಟಗಿರಬಹುದು ಅಥವಾ ಬಲಕ್ಕೆ ವಾಲಿರಬಹುದು. ಆದರೆ ಎಡಕ್ಕೆ ವಾಲಿರುವುದು ಒಳ್ಳೆಯ ಸಂಕೇತವಲ್ಲ. (ದೃಷ್ಟಾಂತ 3) ಇಂಗ್ಲಿಷ್ ಅಕ್ಷರಗಳನ್ನು ಸ್ವಲ್ಪ ಬಲಕ್ಕೆ ಬರೆದರೆ ವೇಗವಾಗಿ ಬರೆಯಲು ಸಾಧ್ಯ. ನೀವು ಒಬ್ಬ ಓಟಗಾರ, ಓಟದ ದಿಕ್ಕಿನಲ್ಲಿ ಮುಂದೆ ಬಾಗಿರುವುದನ್ನು ಗಮನಿಸಿ ಅವನನ್ನು `ಯಾಕೆ ಹೀಗೆ?' ಎಂದು ಕೇಳಿದರೆ, `ಅದರಿಂದ ವೇಗವಾಗಿ ಓಡಲು ಸಾಧ್ಯ' ಎನ್ನುತ್ತಾನೆ. ಏಕೆಂದರೆ ಅದೇ ಸಹಜವಾದದ್ದು. ಆದ್ದರಿಂದಲೇ ಇಂಗ್ಲಿಷಿನ ಕರ್ಸೀವ್/ ರನ್ನಿಂಗ್ ಹ್ಯಾಂಡ್‌ರೈಟಿಂಗ್ ಜನಜನಿತ. ಸುರುಳಿ ಅಥವಾ ಕೊಂಡಿ: ಕನ್ನಡ ಅಕ್ಷರಗಳಲ್ಲಿ ಸರಳ ರೇಖೆಗಳು ಕಡಿಮೆ, ಸುತ್ತಿಕೊಂಡಿರುವ ಭಾಗಗಳು ಹೆಚ್ಚು. ಕೆಲವು ಭಾಗಗಳಂತೂ ಚಕ್ಕುಲಿಯಂತೆ ಸುತ್ತಿಕೊಂಡಿರುತ್ತವೆ . (ದೃಷ್ಟಾಂತ 4) ಈ ಭಾಗಗಳನ್ನು ಸರಿಯಾಗಿ ಬರೆದರೆ ತುಂಬಾ ಸುಂದರವಾಗಿ ಕಾಣುತ್ತವೆ. ಕನ್ನಡ ಲಿಪಿಯ, ಬಳ್ಳಿಯಂತೆ ಬಾಗುವ- ಬಳುಕುವ ಈ ಅನುಪಮ ಲಾವಣ್ಯಕ್ಕೆ ಅನೇಕ ಪರಭಾಷೆಯ ಗಣ್ಯರು ಮಾರುಹೋಗಿದ್ದಾರೆ! ಇಂಗ್ಲಿಷ್ ಭಾಷೆಯಲ್ಲಿ ಮೇಲ್ಭಾಗದ ಕೊಂಡಿ ಮತ್ತು ಕೆಳಭಾಗದ ಕೊಂಡಿ ಎಂಬ ಎರಡು ಬಗೆಗಳಿವೆ. ಇವುಗಳಲ್ಲಿ ಮೇಲ್ಭಾಗದ ಕೊಂಡಿಗಳು ಸ್ವಲ್ಪ ತೆಳುವಾಗಿದ್ದು, ಕೆಳಭಾಗದ ಕೊಂಡಿಗಳು ದಪ್ಪವಾಗಿದ್ದರೆ ಲಕ್ಷಣವಾಗಿ ಕಾಣುತ್ತವೆ . (ದೃಷ್ಟಾಂತ 5) ಸಂಖ್ಯೆಗಳು: ಕೈಬರಹದ ಸೌಂದರ್ಯವು ಸಂಖ್ಯೆಗಳನ್ನೂ ಒಳಗೊಂಡಿದೆ. ಸಂಖ್ಯೆಗಳನ್ನು ಬರೆಯುವಾಗ ಸ್ಪಷ್ಟತೆ ಅತಿ ಮುಖ್ಯ. 1ನ್ನು ಬರೆಯುವುದು 7 ರಂತೆ, 3 ಬರೆಯುವುದು 8 ರಂತೆ, 7 ಬರೆಯುವುದು 4 ರಂತೆ ಅಥವಾ 0 (ಸೊನ್ನೆ) ಬರೆಯುವುದು 6 ರಂತೆ ಕಾಣಬಾರದು. ಈ ಬಗ್ಗೆ ಎಚ್ಚರ ವಹಿಸಬೇಕು. ಗಣಿತದಲ್ಲಿ ಒಂದರ ಕೆಳಗೆ ಒಂದು ಸಂಖ್ಯೆಯನ್ನು ಬರೆಯುವಾಗ ಅಥವಾ ಅಪವರ್ತನ ()ಮಾಡುವಾಗ ಬಿಡಿ ಸ್ಥಾನದ (’ ) ಕೆಳಗೆ ಬಿಡಿ ಸ್ಥಾನ, ಹತ್ತರ ಸ್ಥಾನದ( )ಕೆಳಗೆ ಹತ್ತರ ಸ್ಥಾನ ಇರುವಂತೆ ಅಂಕಿಗಳನ್ನು ಬರೆಯಬೇಕು. (ದೃಷ್ಟಾಂತ 6) ಗಣಿತದ ಕೆಲವು ಸಮೀಕರಣದ ಸಮಸ್ಯೆಗಳನ್ನು ಬಿಡಿಸುವಾಗ ಹಂತ ಹಂತಗಳಲ್ಲಿ ಸಮೀಕರಣದ ಚಿಹ್ನೆ (=) ಬಂದರೆ, ಅವು ಒಂದರ ಕೆಳಗೆ ಒಂದು ಇರುವಂತೆ ಬರೆಯಬೇಕು. ಅವುಗಳನ್ನು ಒಟ್ಟು ಸೇರಿಸಿದರೆ ಒಂದು ಕಂಬದಂತೆ ಕಾಣುವಂತಿರಬೇಕು (ದೃಷ್ಟಾಂತ 7) ತಿದ್ದಿ ಬರೆಯುವುದು( ): ಕೈಬರಹದ ಸೊಗಸನ್ನು ಹಾಳು ಮಾಡುವ ಇನ್ನೊಂದು ಸಂಗತಿ ಎಂದರೆ ತಿದ್ದಿ ಬರೆಯುವುದು. ಒಮ್ಮೆ ಬರೆದ ಅಕ್ಷರ ತಪ್ಪೆಂದು ತಿಳಿದು ಅದರ ಮೇಲೇ ಇನ್ನೊಂದು ಅಕ್ಷರವನ್ನು ಬರೆಯುವುದು. ಸಾಕಷ್ಟು ಯೋಚಿಸದೇ ಬರೆದುಬಿಡುವುದು, ಆ ನಂತರ ಜ್ಞಾನೋದಯ ಆಗಿ ಮೊದಲೇ ಬರೆದುದನ್ನು ತಿದ್ದುವುದು ಒಂದು ದುರಭ್ಯಾಸ. ತಪ್ಪಾದುದನ್ನು ಒಡೆದು ಹಾಕಿ ಪಕ್ಕದಲ್ಲಿ ಸರಿಯಾಗಿ ಬರೆಯುವುದು ಸೂಕ್ತ. ಇದನ್ನು ನಿವಾರಿಸಲು ಒಂದೇ ದಾರಿ ಎಂದರೆ ಬರೆಯುವ ಮೊದಲೇ ಸಾಕಷ್ಟು ಯೋಚಿಸಿ ಬರೆಯುವುದು. `ಥಿಂಕ್ ಬಿಫೋರ್ ಯು ಇಂಕ್' ಎಂದು ನೂರಾರು ವರ್ಷಗಳಿಂದ ಹೇಳುತ್ತಾ ಬಂದಿರುವುದನ್ನು ನೀವು ಕೇಳಿರಬಹುದು. ಈಗಂತೂ ವೈಟನರ್ ಬಂದಿದೆ. ಹೇಗಿದ್ದರೂ ವೈಟನರ್ ಇದೆಯಲ್ಲಾ ಎಂದು ಧಾರಾಳವಾಗಿ ತಪ್ಪು ಮಾಡುತ್ತಾ ಹೋಗುತ್ತಾರೆ ಕೆಲವರು. ವೈಟನರ್ ಉಪಯೋಗಿಸಿದರೂ ಅಂದಗೆಡುವುದು ಇದ್ದದ್ದೇ. ಗಣಿತದ ಸಮಸ್ಯೆಗಳನ್ನು ಬಿಡಿಸುವಾಗ ಕೆಲವು ವಿದ್ಯಾರ್ಥಿಗಳು ಇನ್ನೇನು ಉತ್ತರ ಬಂದೇ ಬಿಟ್ಟಿತಲ್ಲ ಎಂದು ಹರ್ಷಾತಿರೇಕದಿಂದ ಅಂತಿಮ ಉತ್ತರ ಬರೆಯುವಾಗ ನಿಷ್ಕಾಳಜಿ ಮಾಡುತ್ತಾರೆ. ಯಾವ ಅಂತಿಮ ಉತ್ತರವನ್ನು ನೋಡಿ ಪರೀಕ್ಷಕರು ಅಂಕ ಹಾಕಬೇಕೋ ಅದನ್ನು ಬರೆಯುವಾಗಲೇ ನಿರ್ಲಕ್ಷ್ಯ ಮಾಡಿದರೆ ಹೇಗೆ? ಆದ್ದರಿಂದ ವರ್ಕಿಂಗ್ ಮಾಡುವಾಗ ಮಧ್ಯದಲ್ಲಿ ಎಲ್ಲಾದರೂ ತಪ್ಪು ಮಾಡಿದರೆ ಕ್ಷಮಾರ್ಹ. ಆದರೆ ಅಂತಿಮ ಉತ್ತರವನ್ನು ಬರೆಯುವಾಗ ವಿಶೇಷ ಎಚ್ಚರ ವಹಿಸಿ, ಉತ್ತರಕ್ಕೆ ಒಂದು ಚೌಕಟ್ಟು ಹಾಕಿ ಅದು ಎದ್ದು ಕಾಣುವಂತೆ ಬರೆಯಬೇಕು. ಇದನ್ನೇ ಪ್ರಸ್ತುತಪಡಿಸುವ ಕಲೆ (ಪ್ರೆಸೆಂಟೇಷನ್ ಸ್ಕಿಲ್) ಎನ್ನುವುದು. ಉತ್ತರ ಎಲ್ಲಿದೆ ಎಂದು ಪರೀಕ್ಷಕರು ಹುಡುಕುವಂತೆ ಆಗಬಾರದು.ಬ್ಯಾಂಕ್‌ಗಳಲ್ಲಿ ಚೆಕ್ಕನ್ನು ತಿದ್ದಿ ಬರೆದರೆ ಕೌಂಟರ್ ಸಿಗ್ನೇಚರ್ ಮಾಡಬೇಕಾಗುತ್ತದೆ. ಮುಂದಿನ ವಾರ: ಕೈಬರಹದ ಸೌಂದರ್ಯಕ್ಕೆಬ್ಯೂಟಿ ಟಿಪ್ಸ್-3 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.