ಶಿಕ್ಷಕರಿಗೆ ದಿನಕ್ಕೊಂದು ಕಾಣಿಕೆ! ಮೊದಲು ಚೆನ್ನಾಗಿ ಬರೆಯುವುದನ್ನು ಕಲಿುಬೇಕು. ಆನಂತರ ಬರವಣಿಗೆಯಲ್ಲಿ ವೇಗವನ್ನು ಸಾಧಿಸಬೇಕು. ಇಲ್ಲದಿದ್ದರೆ ಬರಹ ಹಾಳಾಗುವುದು ಸ್ವಾಭಾವಿಕ. ನಮ್ಮ ಬುದ್ಧಿಯಿಂದ, ಚೆನ್ನಾಗಿ ಬರೆಯುವುದು ಹೇಗೆಂದು ತಿಳಿದುಕೊಳ್ಳಬೇಕು. ನಮ್ಮ ಮನಸ್ಸು ಉತ್ಸಾಹದಿಂದ, ಓದುವವರ ಮೇಲೆ ಪ್ರಭಾವ ಬೀರಬೇಕೆಂಬ ಉದ್ದೇಶದಿಂದ ಕೈಗೆ ಸೂಕ್ತ ಸೂಚನೆಗಳನ್ನು ನೀಡಬೇಕು. ಕೈಗೆ ಸರಿಯಾದ ತರಬೇತಿ ಮತ್ತು ಅಭ್ಯಾಸ ಆಗಬೇಕು. ಒಬ್ಬ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಯನ್ನು ನೋಡಿದಾಗ ನಮಗೆ ಹೀಗೆ ಅನ್ನಿಸಬೇಕು `ಇವನು ಮುಂದೆ ಅನೇಕ ಉನ್ನತ ಬೋರ್ಡ್ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಆಗ ಇವನ ಉತ್ತರ ಪತ್ರಿಕೆಗಳನ್ನು ಯಾವುದೋ ಅಜ್ಞಾತ ಮೌಲ್ಯಮಾಪಕರು ಮೌಲ್ಯಮಾಪನ ಮಾಡುತ್ತಾರೆ. ಆದ್ದರಿಂದ ಈಗಿನಿಂದಲೇ ಇವನಿಗೆ ಉತ್ತರಗಳನ್ನು `ಪ್ರೆಸೆಂಟ್' ಮಾಡುವ ರೀತಿಯನ್ನು ಸರಿಯಾಗಿ ಕಲಿಸಬೇಕು'. ನಾವು ನಮ್ಮ ಸ್ನೇಹಿತರ ಹುಟ್ಟುಹಬ್ಬದ ಪಾರ್ಟಿಯಲ್ಲಿ ಒಂದು ಪೆನ್ `ಪ್ರೆಸೆಂಟ್' ಮಾಡುವಾಗಲೂ ಅದೆಷ್ಟು ಕಾಳಜಿ ವಹಿಸುತ್ತೇವೆ! ನಮ್ಮ ಬಗ್ಗೆ ಅವರಿಗೆ ಸದಭಿಪ್ರಾಯ ಮೂಡಲಿ, ನಮ್ಮ `ಪ್ರೆಸೆಂಟ್'ನ್ನು ಅವರು ಮೆಚ್ಚಲಿ ಎಂಬ ಭಾವನೆ ನಮ್ಮ ಮನಸ್ಸಿನಲ್ಲಿ ಇರುತ್ತದೆ. ವಿದ್ಯಾರ್ಥಿಗಳಂತೂ ಪರೀಕ್ಷೆಗಳಲ್ಲಿ ತಮಗಿಂತ ಬಹು ಹಿರಿಯ ಪರೀಕ್ಷಕರಿಗೆ ಉತ್ತರಗಳನ್ನು `ಪ್ರೆಸೆಂಟ್' ಮಾಡುವ ಮೂಲಕ ಅವರ ಹೃದಯವನ್ನು ಗೆಲ್ಲಬೇಕಾಗುತ್ತದೆ. ನಾನು ನನ್ನ ವಿದ್ಯಾರ್ಥಿಗಳಿಗೆ ಹೇಳುತ್ತೇನೆ `ನೀವು ನನಗೆ ದಿನಾ ಪ್ರೆಸೆಂಟೇಷನ್ ಕೊಡಬೇಕು. ಅದು ಗುಲಾಬಿ ಹೂವೋ ಅಥವಾ ಪೆನ್ನೋ ಅಲ್ಲ. ನೀವು ಬರೆದು ತೋರಿಸುವ ಉತ್ತರಗಳು ಅಥವಾ ಬಿಡಿಸಿ ತೋರಿಸಿದ ಲೆಕ್ಕಗಳೇ ನೀವು ನನಗೆ ನೀಡುವ ಪ್ರೆಸೆಂಟ್‌ಗಳು. ಅದನ್ನು ನಾನು ಕೇವಲ ಸರಿಯೋ ತಪ್ಪೋ ಎಂದು ಹೇಳುವಂತೆ ಇರಬಾರದು. ವಾವ್, ವೆರಿ ಗುಡ್, ಕೀಪ್ ಇಟ್ ಅಪ್, ಫೈನ್ ಎಂದು ಹೇಳುವಂತಿರಬೇಕು'. ಚಿಕ್ಕವರಿದ್ದಾಗ ಹೀಗೆ ನೀವು ನಿಮ್ಮ ಪರಿಚಿತ ಶಿಕ್ಷಕರ ಮನಸ್ಸನ್ನು ಗೆಲ್ಲುತ್ತಾ ಬಂದರೆ, ದೊಡ್ಡವರಾದ ಮೇಲೆ ಬೋರ್ಡ್ ಪರೀಕ್ಷೆಗಳ ಅಜ್ಞಾತ ಮೌಲ್ಯಮಾಪಕರ ಮನ ಸೂರೆಗೊಳ್ಳಲು ಸಾಧ್ಯವಾಗುತ್ತದೆ. ನೆನಪಿರಲಿ ಕೈಬರಹ ನಿಮ್ಮ ಮನಸ್ಸಿನ ಕೈಗನ್ನಡಿ. ನನ್ನ ಕೈ ಬರೆಯುವುದೇ ಹಾಗೆ ಎಂದು ನೀವು ಹೇಳಿದರೆ ಅದು ಆತ್ಮವಂಚನೆ ಆಗುತ್ತದೆ. `ಬರೆಯುವುದು ಕೈಗಳಿಂದಲ್ಲ, ನಮ್ಮ ಬುದ್ಧಿ ಹಾಗೂ ಮನಸ್ಸಿನಿಂದ. ಬರವಣಿಗೆಯ ಮೂಲಕ ನಮ್ಮ ವ್ಯಕ್ತಿತ್ವವನ್ನು ಅಭಿವ್ಯಕ್ತಗೊಳಿಸುತ್ತೇವೆ. ನನ್ನ ಕೈಬರಹದ ಮೂಲಕ ಓದುವವರ ಮನಸ್ಸನ್ನು ಗೆಲ್ಲುತ್ತೇನೆ'. ಈ ಮನೋಧರ್ಮ ಹೊಂದಿದ್ದರೆ ಅಂತವರ ಕೈಬರಹ ಸುಧಾರಣೆ ಆಗದಿರಲು ಸಾಧ್ಯವೇ ಇಲ್ಲ. ಮಾನಸಿಕ- ಬೌದ್ಧಿಕ ಸಿದ್ಧತೆ ರೂಪಾಲಿ ಗಣಿತ ಮತ್ತು ವಿಜ್ಞಾನದ ಪ್ರೌಢಶಾಲಾ ಶಿಕ್ಷಕಿ. ಕೇಂದ್ರೀಯ ಪಠ್ಯಕ್ರಮದ ಶಾಲೆಯಲ್ಲಿ ಅವರ ವೃತ್ತಿ. ಸುಮಾರು 25 ವರ್ಷಗಳ ಅನುಭವಿ. ಮಕ್ಕಳ ಅಭಿವೃದ್ಧಿಯ ಬಗ್ಗೆ ಅತ್ಯಂತ ಪ್ರಾಮಾಣಿಕ ಕಳಕಳಿ ಹೊಂದಿರುವ ಟೀಚರ್. ಅವರನ್ನು ತೀವ್ರವಾಗಿ ಕಾಡಿಸುವ ಪ್ರಶ್ನೆ ಎಂದರೆ `ನಮ್ಮ ವಿದ್ಯಾರ್ಥಿಗಳ ಕೈಬರಹವನ್ನು ಹೇಗೆ ಸುಧಾರಿಸುವುದು?' ರೂಪಾಲಿಯಂತಹ ಇನ್ನೂ ಅನೇಕ ಶಿಕ್ಷಕರಿರಬಹುದು. ಅಂಥವರಿಗಾಗಿ ಈ ಲೇಖನದ ಕಂತು. ನಾವು ಬರೆಯುವುದು ನಮ್ಮ ಬುದ್ಧಿ ಹಾಗೂ ಮನಸ್ಸು ನಮ್ಮ ಕೈಯನ್ನು ನಿರ್ದೇಶಿಸಿದಂತೆ. ಆದ್ದರಿಂದ ಮೊದಲು ನಮ್ಮ ಬುದ್ಧಿಗೆ ಅಕ್ಷರಗಳು ಏಕೆ ಚೆನ್ನಾಗಿರುತ್ತವೆ ಎಂಬ ತಿಳಿವಳಿಕೆ ಸಿಗಬೇಕು. ಕೈಬರಹದ ಸೌಂದರ್ಯವು ಹೇಗೆ ಅಕ್ಷರಗಳ ಗಾತ್ರ, ಪದಗಳ ನಡುವಿನ ಅಂತರ, ಗೆರೆಗಳ ಗುಣಮಟ್ಟ (ಒಟ್ಟು 20 ಬ್ಯೂಟಿ ಟಿಪ್ಸ್‌ಗಳನ್ನು ಈಗಾಗಲೇ ಮೂರು ಕಂತುಗಳಲ್ಲಿ ನೀಡಲಾಗಿದೆ) ಮುಂತಾದವುಗಳನ್ನು ಅವಲಂಬಿಸಿದೆ ಎಂಬುದನ್ನು ನಾವು ತಿಳಿದುಕೊಳ್ಳಬೇಕು. ಚೆನ್ನಾಗಿಲ್ಲದ ಅಕ್ಷರಗಳನ್ನು ನೋಡಿದ ತಕ್ಷಣ ಅದು ಏಕೆ ಚೆನ್ನಾಗಿಲ್ಲ ಎಂಬುದೂ, ಸುಂದರವಾದ ಅಕ್ಷರಗಳನ್ನು ನೋಡಿದ ತಕ್ಷಣ ಅದು ಏಕೆ ಸುಂದರವಾಗಿದೆ ಎಂಬುದೂ ನಮಗೆ ಗೊತ್ತಾಗಬೇಕು. ನಮ್ಮ ಬುದ್ಧಿಗೆ ಅಷ್ಟು `ಜ್ಞಾನ' ಇರಬೇಕು. ಮಕ್ಕಳಲ್ಲೂ ಈ ಅಕ್ಷರಗಳ `ಸೌಂದರ್ಯ ಪ್ರಜ್ಞೆ'ಯನ್ನು ನಾವು ಬೆಳೆಸಬೇಕು. ಇನ್ನು ಎರಡನೆಯದಾಗಿ, ಮನಸ್ಸಿಲ್ಲದೆ ಮಾಡುವ ಕೈಬರಹ ಸುಧಾರಣೆಯ `ಮಂತ್ರ' ಯಾರಿಗಾದರೂ ಗೊತ್ತಿರಬಹುದೇ? ನಮ್ಮ ಮನಸ್ಸು ಬರೆಯುವ `ಉದ್ದೇಶ' ಮತ್ತು `ಗುರಿ'ಗಳನ್ನು ಸ್ಪಷ್ಟಪಡಿಸಿಕೊಳ್ಳಬೇಕು. `ನಮ್ಮ ಬರಹವನ್ನು ಓದುವವರು ನಮ್ಮ ಬಗ್ಗೆ ಒಳ್ಳೆಯ ಭಾವನೆ ಹೊಂದುವಂತಾಗಬೇಕು' ಎಂಬುದೇ ನಮ್ಮ ಉದ್ದೇಶವಾಗಬೇಕು. ಬರವಣಿಗೆಯ ಮೂಲಕ ನಮ್ಮ ವ್ಯಕ್ತಿತ್ವವನ್ನು ಪ್ರಕಟಿಸುತ್ತಿದ್ದೇವೆ ಎಂಬ ದೃಷ್ಟಿ ನಮ್ಮ ಮನಸ್ಸಿನಲ್ಲಿ ಇರಬೇಕು. ಈಗಾಗಲೇ ಕೆಟ್ಟದಾಗಿ ಬರೆಯುವುದು ಅಭ್ಯಾಸ ಆಗಿಬಿಟ್ಟಿದ್ದರೆ ಅಂಥವರು ಸುಧಾರಿಸಿಕೊಳ್ಳುವುದು ಇನ್ನಷ್ಟು ಕಷ್ಟ. ಅವರು ಮೊದಲು ತಪ್ಪಾಗಿ ಕಲಿತದ್ದನ್ನು ತ್ಯಜಿಸಬೇಕು. ತಪ್ಪಾಗಿ ಕಲಿತುದರ ಪ್ರಭಾವ ಅಳಿಸಿಹೋಗುವಷ್ಟು ಅಭ್ಯಾಸವನ್ನು ಹೊಸದಾಗಿ ಮಾಡಬೇಕು. ಈ ವಿಚಾರವು ಕೈಬರಹಕ್ಕಷ್ಟೇ ಅಲ್ಲ, ಎಲ್ಲ ವಿಷಯಗಳಿಗೂ ಅನ್ವಯಿಸುತ್ತದೆ. ನಮ್ಮ ಕೈಬರಹದ ಮೂಲಕ ನಮ್ಮ ಮನಸ್ಸೇ ಪ್ರಕಟ ಆಗುವುದರಿಂದ ಮನಸ್ಸನ್ನು ಹೊಕ್ಕಿ ನೋಡಲು ಕೈಬರಹದ ಮೂಲಕ ಸ್ವಲ್ಪ ಮಟ್ಟಿಗೆ ಸಾಧ್ಯ. ಆದ್ದರಿಂದಲೇ ಕೈಬರಹ ವಿಶ್ಲೇಷಣಾ ಶಾಸ್ತ್ರ (ಗ್ರಾಫಾಲಜಿ) ಎಂಬ ಶಾಸ್ತ್ರವೇ ರೂಪುಗೊಂಡಿದೆ. ನಾವು ಕೈಬರಹವನ್ನು ಉತ್ತಮಪಡಿಸಿಕೊಂಡರೆ ಕೇವಲ ನಮ್ಮ ಬರಹವಷ್ಟೇ ಅಲ್ಲ ತನ್ಮೂಲಕ ನಮ್ಮ `ಮನಸ್ಸು' ಹಾಗೂ `ವ್ಯಕ್ತಿತ್ವ'ವೂ ಬದಲಾಗಬಹುದು. ನಮ್ಮ ವ್ಯಕ್ತಿತ್ವ ವಿಕಾಸಗೊಳ್ಳಲು ಅನುಸರಿಸಬೇಕಾದ ಸೂತ್ರಗಳನ್ನೇ ಬರವಣಿಗೆ ಸುಧಾರಿಸಿಕೊಳ್ಳುವಾಗಲೂ ಅನುಸರಿಸಬೇಕಾಗುತ್ತದೆ. ಕೈಬರಹವನ್ನು ಸುಧಾರಿಸಿಕೊಳ್ಳ ಬಯಸುವವರು ಒಬ್ಬ ಶಿಲ್ಪಿಯಂತೆ ಪಾತ್ರ ನಿರ್ವಹಿಸಬೇಕಾಗುತ್ತದೆ. ಶಿಲ್ಪಿಯು ಒಂದು ಕಗ್ಗಲ್ಲಿನಲ್ಲಿ ಸುಂದರ ಕಲಾಕೃತಿಯ ವಿಗ್ರಹವನ್ನು ಕಲ್ಪಿಸಿಕೊಳ್ಳುವುದಿಲ್ಲವೇ? ಹಾಗೆಯೇ, ಬರೆಯುವವರು ಖಾಲಿಯಾಗಿರುವ ಕಾಗದದ ಮೇಲೆ ಸುಂದರವಾದ ಅಕ್ಷರಗಳನ್ನು ಕಲ್ಪಿಸಿಕೊಳ್ಳಬೇಕಾಗುತ್ತದೆ. ಆನಂತರ ಆ ಸುಂದರ ಅಕ್ಷರಗಳನ್ನು ಕಾಗದದ ಮೇಲೆ ಮೂಡಿಸಬೇಕು. ಈ ಸಂದರ್ಭದಲ್ಲಿ ಕಣ್ಣಿನ ಆ ಕಲ್ಪನೆಗೂ ಮತ್ತು ಬರೆಯುವ ಕೈಗೂ ನಡುವೆ ಹೊಂದಾಣಿಕೆ ಅಗತ್ಯ. ಚೆನ್ನಾಗಿ ಬರೆಯುವುದು ಕಷ್ಟದ ಕೆಲಸ, ಅದು ಕೆಲವರಿಗೆ ಮಾತ್ರ ಸಾಧ್ಯ ಎಂಬ ಭಾವನೆ ಮನಸ್ಸಿನಲ್ಲಿ ಬೇರೂರಿದ್ದರೂ ಬರವಣಿಗೆ ಸುಧಾರಿಸುವುದು ಸಾಧ್ಯವಿಲ್ಲ. ಬರೆಯುತ್ತಿರುವ ಎಷ್ಟೋ ಜನರನ್ನು ನಾನು ಗಮನಿಸಿದ್ದೇನೆ. ಅದು ಯಾಂತ್ರಿಕವಾಗಿ ನಡೆಯುತ್ತಿರುತ್ತದೆ. ಕೈಬರಹ ಸುಧಾರಿಸಿಕೊಳ್ಳ ಬಯಸುವವರು ಬರೆಯುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡಬೇಕು. ಮೆದುಳಿನಿಂದ ಹೊರಡುತ್ತಿರುವ ಸಂದೇಶ ಕ್ರಿಯಾವಾಹಿ ನರಗಳ ಮೂಲಕ ಹರಿದು ಕೈಗೆ ಬಂದು ಬರೆಸುತ್ತಿದೆ ಎಂಬುದನ್ನು ಮರೆಯಬಾರದು. ಈ ರೀತಿ ತಿಳಿದು ಚೆನ್ನಾಗಿ ಅಭ್ಯಾಸ ಆದ ಮೇಲೆ, ಅದು ಸುಪ್ತ ಪ್ರಜ್ಞಾವಸ್ಥೆಯಲ್ಲೂ ಯಾಂತ್ರಿಕವಾಗಿ ನಡೆದುಹೋಗುತ್ತದೆ. ಈಗಿನ ಕಾಲದಲ್ಲಿ ಎಲ್ಲವೂ ಬೇಗ ಆಗಬೇಕೆಂದು ನಾವು ಬಯಸುತ್ತೇವೆ. ಎಷ್ಟಾದರೂ ಫಾಸ್ಟ್ ಫುಡ್ ಸಂಸ್ಕೃತಿಯಲ್ಲವೇ? ಇವತ್ತು ಕೈಬರಹ ಸುಧಾರಿಸಿಕೊಳ್ಳಲು ಪ್ರಾರಂಭಿಸಿದರೆ ನಾಳೆಯಿಂದಲೇ ಅದು ಸರಿಹೋಗಿ ಬಿಡಬೇಕು ಎಂಬ ಮನೋಭಾವ ನಮ್ಮದು. ಇಂತಹ ಆತುರ ಪ್ರವೃತ್ತಿಯವರ ಕೈಬರಹ ಸುಧಾರಣೆ ತೀರಾ ಕಠಿಣ. ಸತತ ಪರಿಶ್ರಮ, ದೃಢ ನಿರ್ಧಾರಗಳಿಂದ ಪ್ರಯತ್ನ ಮಾಡಿದರೆ ಕ್ರಮೇಣ ಉತ್ತಮ ಕೈಬರಹವನ್ನು ರೂಢಿಸಿಕೊಳ್ಳಬಹುದು. ಮನಸ್ಸಿಲ್ಲದೆ, ಆಸಕ್ತಿಯಿಲ್ಲದೆ ಯಾವುದಾದರೂ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲಾದೀತೆ? ಮನಃಪೂರ್ವಕವಾಗಿ ಕೈಗಳಿಗೆ ತರಬೇತಿ ಮತ್ತು ಅಭ್ಯಾಸ ಮಾಡಿಸುವುದರಿಂದ ಮಾತ್ರ ಕೈಬರಹದ ಸುಧಾರಣೆ ಸಾಧ್ಯ. (ಕೈಬರಹಕ್ಕೆ ಸಂಬಂಧಿಸಿದಂತೆ ಓದುಗರಿಗೆ ಏನಾದರೂ ಪ್ರಶ್ನೆ/ ಪ್ರತಿಕ್ರಿಯೆ ಇದ್ದರೆ ಲೇಖಕರು ಮುಂದಿನ ಕಂತುಗಳಲ್ಲಿ ಉತ್ತರಿಸುತ್ತಾರೆ. ನಿಮ್ಮ ಪ್ರಶ್ನೆಗಳನ್ನು 99008 80803 ಸಂಖ್ಯೆಗೆ ಎಸ್ಸೆಮ್ಮೆಸ್‌ಅಥವಾ ಫೋನ್ ಮೂಲಕ ತಿಳಿಸಬಹುದು) (ಮುಂದಿನ ವಾರ: ಕೈಬರಹ ಸುಧಾರಣೆಗೆ ಪೂರಕ ಚಟುವಟಿಕೆ) ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.