ಪ್ರಶ್ನೆ-ಉತ್ತರ ಶ್ರೀಧರ್, ಕೊಟ್ಟೂರು, ಬಳ್ಳಾರಿ ಜಿಲ್ಲೆ. ನನ್ನ ಮಗ ಬಿ.ಇ ಇನ್ಸ್‌ಟ್ರುಮೆಂಟೇಷನ್ ಟೆಕ್ನಾಲಜಿ ಎರಡನೇ ವರ್ಷದಲ್ಲಿ ಓದುತ್ತಿದ್ದಾನೆ. ಈ ಕೋರ್ಸಿಗೆ ಮುಂದೆ ಉದ್ಯೋಗಾವಕಾಶಗಳು ಹೇಗಿವೆ? ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಉದ್ಯೋಗ ಲಭಿಸುತ್ತದೆಯೇ? ಎಂ.ಟೆಕ್ ಮಾಡಲು ಅವಕಾಶ ಇದೆಯೇ? ಯಾವ ಯಾವ ಕ್ಷೇತ್ರಗಳಲ್ಲಿ ಉದ್ಯೋಗ ಅರಸಬಹುದು? - ಇನ್ಸ್‌ಟ್ರುಮೆಂಟೇಷನ್ ಟೆಕ್ನಾಲಜಿ, ಎಂಜಿನಿಯರಿಂಗ್ ಕ್ಷೇತ್ರದಲ್ಲಿ ಮಹತ್ವಪೂರ್ಣ ಕೋರ್ಸು. ಉತ್ತಮ ಅಂಕ ಮತ್ತು ತಿಳಿವಳಿಕೆಯೊಂದಿಗೆ ನಿಮ್ಮ ಮಗ ಬಿ.ಇ ಮುಗಿಸಿದರೆ, ಉಪಕರಣ ತಯಾರಿಕಾ ಕಂಪೆನಿಗಳಲ್ಲಿ ಉದ್ಯೋಗ ಪಡೆಯಬಹುದು. ಈ ಕ್ಷೇತ್ರದಲ್ಲೇ ಎಂ.ಟೆಕ್ ಸಹ ಮಾಡಬಹುದು. ಯಾವ ಕ್ಷೇತ್ರದಲ್ಲಿ ಬಿ.ಇ ಮಾಡಿದರೂ ಕಂಪ್ಯೂಟರ್ ಕ್ಷೇತ್ರವನ್ನು ಪ್ರವೇಶಿಸಬಹುದು. ಇದಕ್ಕೆ ಕಂಪ್ಯೂಟರ್ ಕ್ಷೇತ್ರದಲ್ಲೇ ಬಿ.ಇ ಮಾಡಿರಬೇಕೆಂದೇನೂ ಇಲ್ಲ. ಆದ್ದರಿಂದ ನಿಮ್ಮ ಮಗನ ಭವಿಷ್ಯದ ಬಗ್ಗೆ ಚಿಂತಿತರಾಗಬೇಕಾದ ಅಗತ್ಯವಿಲ್ಲ. ಭವಿಷ್ಯದ ಯೋಚನೆಯನ್ನು ಬಿಟ್ಟು ನಿಮ್ಮ ಮಗ ಈಗ ಶ್ರದ್ಧೆಯಿಂದ ಅಭ್ಯಾಸ ಮಾಡಲಿ. ಅಜಯ್ ಶೇಠ್ ನಾನು ಎಸ್ಸೆಸ್ಸೆಲ್ಸಿ ನಂತರ ಸೆರಾಮಿಕ್ ಟೆಕ್ನಾಲಜಿಯಲ್ಲಿ ಡಿಪ್ಲೊಮಾ ಮುಗಿಸಿ ನಂತರ ಅದೇ ಕ್ಷೇತ್ರದಲ್ಲಿ ಕೆಲಸದಲ್ಲಿದ್ದೇನೆ. ಆದರೆ ನಾನು ಈಗಿರುವ ಹುದ್ದೆ ಹಿತವೆನಿಸುತ್ತಿಲ್ಲ. ಅದಕ್ಕೆ ದೂರ ಶಿಕ್ಷಣದಲ್ಲಿ ಇನ್ನೂ ಓದಬೇಕು ಎನಿಸುತ್ತಿದೆ. ಹಾಗಾಗಿ ನಾನು ಈಗ ಎಂ.ಬಿ.ಎ ಮಾಡಬಹುದೇ? ಇದು ನನಗೆ ಸಾಧ್ಯವೇ? ಪದವಿ ಗಳಿಸದೆ ನೇರ ಎಂ.ಬಿ.ಎ ಪ್ರವೇಶ ನೀಡುವ ವಿದ್ಯಾಲಯಗಳು ಇವೆಯೇ? - ಎಂ.ಬಿ.ಎ ಮಾಡಲು ಯಾವುದಾದರೂ ಕ್ಷೇತ್ರದಲ್ಲಿ ಸ್ನಾತಕ ಪದವಿಯನ್ನೇ ಪಡೆದಿರುವುದು ಅವಶ್ಯ. ಡಿಪ್ಲೊಮಾ ಮುಗಿಸಿ ಎಂ.ಬಿ.ಎ ಮಾಡಲು ಆಗುವುದಿಲ್ಲ. ನಿಮ್ಮ ಕ್ಷೇತ್ರದಲ್ಲೇ ಹೆಚ್ಚಿನ ಜ್ಞಾನವನ್ನು ಸಂಪಾದಿಸಲು ನೀವು ಪಿ.ಜಿ ಡಿಪ್ಲೊಮಾ ಮಾಡಬಹುದು. ಇದಕ್ಕೆ ನಿಮ್ಮ ಉದ್ಯೋಗಕ್ಕೆ ಪೂರಕವಾದ ಯಾವುದಾದರೂ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಬಹುದು. ಶಿಲ್ಪಶ್ರೀ ನಾನು ಗಣಿತ ವಿಷಯದಲ್ಲಿ ಎಂ.ಎಸ್ಸಿ ಮುಗಿಸಿದ್ದೇನೆ. ಶೇ 59.75 ಅಂಕ ಗಳಿಸಿದ್ದೇನೆ. ಆದ್ದರಿಂದ ನನ್ನ ಭವಿಷ್ಯದ ಬಗ್ಗೆ ಚಿಂತೆಯಾಗುತ್ತಿದೆ. ನಾನು ಐ.ಐ.ಎಸ್ಸಿ.ಯಲ್ಲಿ ಪ್ರಾಜೆಕ್ಟ್ ಕೂಡ ಮಾಡಿದ್ದೇನೆ. ನನಗೆ ಅಲ್ಲಿನ ವಾತಾವರಣ ಹಿಡಿಸಿದೆ. ನನಗೆ ಅಲ್ಲಿ ಕೆಲಸ ಮಾಡಬೇಕೆಂಬ ಹಂಬಲ ತೀವ್ರವಾಗಿದೆ. ಐ.ಐ.ಎಸ್ಸಿ.ಯಲ್ಲಿ ಕೆಲವು ಕೋರ್ಸುಗಳಿಗೆ ತರಬೇತಿ ನೀಡುವುದಲ್ಲದೆ ತರಬೇತಿ ಭತ್ಯೆಯನ್ನೂ ನೀಡುತ್ತಾರೆಂದು ಕೇಳಿದ್ದೇನೆ. ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನಲ್ಲಿ ಉದ್ಯೋಗಾವಕಾಶಗಳಿದ್ದು ಶೇ 60 ಅಂಕಗಳನ್ನು ಅಪೇಕ್ಷಿಸಿದ್ದಾರೆ. ಎಲ್ಲವೂ ಗೊಂದಲ ಎನಿಸುತ್ತಿದೆ. ದಯಮಾಡಿ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಕೊಡಿ. - ನೀವು ಎಂ.ಎಸ್ಸಿ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಲು ಸ್ವಲ್ಪದರಲ್ಲೇ ತಪ್ಪಿರುವುದು ದುರದೃಷ್ಟಕರ. ಆದರೆ ಇದರಿಂದ ಎದೆಗುಂದಬೇಕಾಗಿಲ್ಲ. ಗಣಿತದಲ್ಲಿ ಆಳವಾದ ಆಸಕ್ತಿ ಮತ್ತು ಜ್ಞಾನ ನಿಮಗಿದ್ದರೆ, ನಿಮ್ಮ ಈ ತೊಡಕು ದೊಡ್ಡದಾಗಲಾರದು. ಶಿಕ್ಷಕ ವೃತ್ತಿಯಲ್ಲಿ ನಿಮಗೆ ಆಸಕ್ತಿಯಿದ್ದರೆ ಪದವಿ ಪೂರ್ವ ಕಾಲೇಜುಗಳಲ್ಲಿ ನೀವು ಅಧ್ಯಾಪಕರಾಗಬಹುದು. ಇದಕ್ಕೆ ಬೇಕಾದ ಕನಿಷ್ಠ ಅಂಕಗಳೂ ಶೇಕಡಾ 55. ನೀವು ಎನ್.ಇ.ಟಿ./ ಜೆ.ಆರ್.ಎಫ್ ಆಯ್ಕೆ ಪರೀಕ್ಷೆಯಲ್ಲಿ ತೇರ್ಗಡೆಯಾದರೆ ಸರ್ಕಾರಿ ಅಥವಾ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲೂ ಪ್ರಾಧ್ಯಾಪಕ ವೃತ್ತಿಯನ್ನು ಪಡೆಯಬಹುದು ಅಥವಾ ಐ.ಐ.ಎಸ್ಸಿ.ಯಲ್ಲೇ ಪಿಎಚ್.ಡಿ ಮಾಡಬಹುದು. ಪ್ರಥಮ ದರ್ಜೆ ನಿಮಗೆ ಎಂ.ಎಸ್ಸಿ.ಯಲ್ಲಿ ತಪ್ಪಿರುವುದರಿಂದ ಒಂದೆರಡು ಬಾಗಿಲಗಳು ಮುಚ್ಚಿದ್ದರೂ ಇನ್ನೂ ಹಲವಾರು ಬಾಗಿಲುಗಳು ತೆರೆದಿವೆ ಎಂಬುದನ್ನು ಮರೆಯದಿರಿ. ಓಬ್ಲಿರಾಜ್, ಮಲ್ಲತ್ತಹಳ್ಳಿ ನಾನು ಬಿ.ಎಸ್ಸಿ ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಎಲ್ಲ ಸೆಮಿಸ್ಟರ್‌ನಲ್ಲೂ ಶೇ 65 ಅಂಕ ಗಳಿಸುತ್ತಾ ಬಂದಿದ್ದೇನೆ. ಎಲೆಕ್ಟ್ರಾನಿಕ್ಸ್‌ನಲ್ಲಿ ಶೇ 85 ಅಂಕ ಇದೆ. ಬಿ.ಎಸ್ಸಿ ಆದಮೇಲೆ ಕೆಲಸ ಸಿಗುತ್ತದೆಯೇ? ಕೆಲಸ ಮಾಡಿಕೊಂಡು ಎಂ.ಎಸ್ಸಿ ಮಾಡಬಹುದೇ? ನಮ್ಮ ಕುಟುಂಬ ಆರ್ಥಿಕವಾಗಿ ಸಂಕಷ್ಟದಲ್ಲಿದೆ. ಹಾಗಾಗಿ ನಾನು ಉದ್ಯೋಗ ಮಾಡಲೇಬೇಕು. ನಾನು ಯಾವ ಕ್ಷೇತ್ರದಲ್ಲಿ ಕೆಲಸ ಅರಸಬಹುದು? -ನೀವು ಬಿ.ಎಸ್ಸಿ.ಯಲ್ಲಿ ಉತ್ತಮ ಅಂಕಗಳನ್ನು ಗಳಿಸುತ್ತಿರುವುದು ಸಂತೋಷದ ಸಂಗತಿ. ನಿಮಗೆ ಎಂತಹ ಉದ್ಯೋಗದಲ್ಲಿ ಆಸಕ್ತಿ ಇದೆ ಎಂಬುದನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು. ಶಿಕ್ಷಕ ವೃತ್ತಿಯಲ್ಲಿ ಆಸಕ್ತಿ ಇದ್ದರೆ, ಬಿ.ಎಸ್ಸಿ ನಂತರ ಬಿ.ಇಡಿ ಮಾಡಿಕೊಳ್ಳುವುದು ಒಳ್ಳೆಯದು. ಅನಂತರ ಮುಕ್ತ ವಿಶ್ವವಿದ್ಯಾಲಯದ ಮೂಲಕ ಎಂ.ಎಸ್ಸಿ ಮಾಡಬಹುದು. ನಿಮಗೆ ಕಂಪ್ಯೂಟರ್ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ, ಬಿ.ಎಸ್ಸಿ ನಂತರ ನೀವು ಸಾಫ್ಟ್‌ವೇರ್ ಕಂಪೆನಿಗಳಲ್ಲಿ ಉದ್ಯೋಗಕ್ಕೆ ಸೇರಬಹುದು. ಉದ್ಯೋಗದಲ್ಲಿ ಇದ್ದುಕೊಂಡೇ ಎಂ.ಸಿ.ಎ ಮಾಡಬಹುದು. ತುಂಬಾ ಅವಕಾಶಗಳಿರುವ ಈ ಕಾಲದಲ್ಲಿ ನಿಮ್ಮ ಆಸಕ್ತಿಗೆ ಅನುಸಾರವಾದ ದಾರಿಯಲ್ಲಿ ನಡೆದರೆ ನಿಮಗೆ ಯಶಸ್ಸು ಖಂಡಿತಾ ಸಿಗುತ್ತದೆ. ನವೀನ್ ನಾಯಕ್ ನಾನು ಎರಡನೇ ವರ್ಷದ ಡಿಪ್ಲೊಮಾದಲ್ಲಿ ಅನುತ್ತೀರ್ಣನಾಗಿದ್ದೇನೆ. ನನಗೆ ಕಂಪ್ಯೂಟರ್‌ನಲ್ಲಿ ತುಂಬಾ ಆಸಕ್ತಿ ಇದೆ. ಕಂಪ್ಯೂಟರ್‌ಗಳನ್ನು ಅಸೆಂಬಲ್ ಮಾಡಲು ಬರುತ್ತದೆ. ಮನೆ ಪರಿಸ್ಥಿತಿಯ ಕಾರಣದಿಂದ ಮುಂದೆ ಓದಲು ಆಗುತ್ತಿಲ್ಲ. ಡಿಪ್ಲೊಮಾ ಬಿಡುತ್ತಿದ್ದೇನೆ. ಈಗ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ಕೋರ್ಸ್ ಮಾಡಿಕೊಂಡರೆ ಮುಂದೆ ಉದ್ಯೋಗ ಲಭಿಸುತ್ತದೆಯೇ? - ನಿಮಗೆ ಕಂಪ್ಯೂಟರ್‌ನಲ್ಲಿ ಆಸಕ್ತಿ ಇರುವುದು ಮತ್ತು ಕಂಪ್ಯೂಟರ್ ಅಸೆಂಬಲ್ ಮಾಡುವ ಕಲೆ ಕರಗತ ಆಗಿರುವುದನ್ನು ತಿಳಿದು ಸಂತೋಷವಾಯಿತು. ಕಂಪ್ಯೂಟರ್ ವಿಜ್ಞಾನದಲ್ಲಿ ಯಂತ್ರಾಂಶ ಮತ್ತು ತಂತ್ರಾಂಶಗಳೆರಡೂ ಮುಖ್ಯವಾದ ವಿಭಾಗಗಳು. ನಿಮಗೆ ಯಂತ್ರಾಂಶದಲ್ಲಿ ಆಸಕ್ತಿ ಇದ್ದರೆ ಅದರಲ್ಲೇ ತರಬೇತಿ ನೀಡುವ ಕೋರ್ಸುಗಳನ್ನು ತೆಗೆದುಕೊಂಡು ಪರಿಣತಿ ಸಾಧಿಸಬಹುದು. ಇದರ ಆಧಾರದ ಮೇಲೆ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬಹುದು. ನೀವು ಅರ್ಧದಲ್ಲೇ ಬಿಟ್ಟಿರುವ ಡಿಪ್ಲೊಮಾ ಕೋರ್ಸನ್ನು, ಕೆಲಸ ಮಾಡುತ್ತಲೇ ಪೂರ್ಣಗೊಳಿಸುವುದು ಒಳ್ಳೆಯದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.