ರಜಾ ಮಜಾ ಏಪ್ರಿಲ್ ಬಂತೆಂದರೆ ಮಕ್ಕಳಿಗೆಲ್ಲ ಒಂದು ಭಾರವೇ ಇಳಿದಂತಾಗಿ, ಉಸಿರುಗಟ್ಟಿದಂತಹ ವಾತಾವರಣದಿಂದ ಬಿಡುಗಡೆ ಸಿಕ್ಕಂತಾಗುತ್ತದೆ. ಎಲ್ಲಿಲ್ಲದ ಸಂತೋಷ, ನಮ್ಮನ್ನು ಹಿಡಿಯುವವರು ಯಾರೂ ಇಲ್ಲ ಎಂದೇ ಅವರು ಭಾವಿಸುತ್ತಾರೆ. ಪುಸ್ತಕಗಳ ಬ್ಯಾಗ್, ಲಂಚ್ ಬಾಕ್ಸ್, ಶಾಲಾ ಸಾಮಗ್ರಿಗಳು ಮೂಲೆ ಸೇರಿಕೊಳ್ಳುತ್ತವೆ. ಆಹ್ಲಾದಕರ ಮಂದಹಾಸ ಮುಖದಲ್ಲಿ ಎದ್ದುಕಾಣುತ್ತದೆ. ಬಂಧನದಿಂದ ಮುಕ್ತವಾದ ಹಕ್ಕಿಯಂತೆ ಅವರು ಪುಟಿದೇಳುತ್ತಾರೆ. ಮಕ್ಕಳಿಗೆ ಸ್ವಚ್ಛಂದ ಜಗತ್ತನ್ನು ರಜೆಯ ದಿನಗಳು ನಿರ್ಮಿಸಿಕೊಡಬಹುದಾದರೆ, ಅಂತಹ ಪರಿಸರವನ್ನು ಶಾಲೆಯಲ್ಲೇಕೆ ಕೊಡಲಾಗುತ್ತಿಲ್ಲ ಎಂಬ ಪ್ರಶ್ನೆ ಎದುರಾಗುತ್ತದೆ. ಕೆಲವು ಮನೆಗಳು ಸಹ ಇಂತಹ ಅಪವಾದದಿಂದ ಹೊರತಾಗಿಲ್ಲ. ಮಕ್ಕಳು ಅನುಭವಿಸಬೇಕಾದ ಸಂತೋಷವನ್ನು ಕೇವಲ ರಜೆ ಕಾಲಕ್ಕಾಗಿ ಮೀಸಲಿಟ್ಟಿದ್ದೇವೆಯೇ? ಹೋಗಲಿ, ಮಕ್ಕಳನ್ನು ಮಕ್ಕಳನ್ನಾಗಿಸುತ್ತಾ ಅವರ ಕ್ರಿಯಾಶೀಲತೆಗೆ ಸಾಣಿ ಹಿಡಿಯುವ ರಜೆಯ ದಿನಗಳನ್ನಾದರೂ ಅರ್ಥಪೂರ್ಣವಾಗಿ ಸವಿಯಲು ಅವರಿಗೆ ಹೇಗೆ ಅನುವು ಮಾಡಿಕೊಟ್ಟಿದ್ದೇವೆ ಎಂದು ಯೋಚಿಸಬೇಕಾಗುತ್ತದೆ. ಸದಾ ಸ್ಪರ್ಧಾ ಜಗತ್ತಿನೆಡೆಗೆ ನೋಡುವ ತಂದೆ ತಾಯಿಗೆ ರಜೆ ಕಾಲವೂ ಅದೇ ಬಗೆಯ ದರ್ಶನವನ್ನು ನೀಡುತ್ತದೆ. ಪಠ್ಯ ವಿಷಯಗಳಿಗಾಗಿ ಹೆಚ್ಚಿನ ತರಬೇತಿ ಪಡೆಯಲು ರಜೆಯಲ್ಲೂ ಮಕ್ಕಳನ್ನು ಟ್ಯೂಷನ್‌ಗೆ ದಾಖಲಿಸುವವರೇ ಹೆಚ್ಚು. ಇವರೆಲ್ಲ ಅಂಕಗಳನ್ನು ಬಲವಾಗಿ ನಂಬಿದವರು. ಇನ್ನು ಕೆಲವರು ಲಲಿತ ಕಲಾ ಸ್ಪರ್ಧೆಗಳ ಆಡಿಷನ್‌ಗೆ ಅವಕಾಶ ಗಿಟ್ಟಿಸಿಕೊಂಡು, ಲೈವ್ ಶೋ ನೆಪದಲ್ಲಿ ಮಕ್ಕಳನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸುವವರು. ಕೊನೆಯಲ್ಲಿ ಮಕ್ಕಳೊಂದಿಗೆ ಒಂದೆರಡು ದಿನ ರೆಸಾರ್ಟ್‌ನಲ್ಲಿ ಕಳೆದು ಬಂದರಾಯ್ತು ಎಂಬ ಮನೋಭಾವ ಉಳ್ಳವರು. ಈ ರಜೆಯಲ್ಲಿ ನೀನೇನು ಮಾಡಲು ಇಚ್ಛಿಸುವೆ, ಹೇಗೆ ಕಳೆಯಬೇಕೆಂದಿರುವೆ ಎಂದು ಮಕ್ಕಳನ್ನು ಕೇಳುವ ಸೌಜನ್ಯ ಇಂತಹವರಲ್ಲಿ ಕಂಡುಬರುವುದು ಕಡಿಮೆ. ಬಹುತೇಕರು ಮಕ್ಕಳ ಹಿತಚಿಂತನೆ ಕಡೆಗೆ ನಾವಿದ್ದೇವೆ ಎಂದುಕೊಂಡರೂ ಅಂತಿಮವಾಗಿ, ತಮ್ಮ ಇಷ್ಟಾರ್ಥಗಳ ಪೂರೈಕೆಗಾಗಿಯೇ ಅವರಿರುವುದು ಎಂಬ ಭಾವನೆ ಹೊಂದಿರುತ್ತಾರೆ. ಇನ್ನು ಹಳ್ಳಿಗರಿಗೆ ರಜೆಯ ದಿನಗಳು ಬೇರೆಯಾಗಿಯೇ ಕಾಣಿಸುತ್ತವೆ. ಮಕ್ಕಳು ನಮ್ಮಂದಿಗೆ ದುಡಿಮೆಗೆ ಕೈ ಜೋಡಿಸುತ್ತಾರೆ, ಮನೆ ಕೆಲಸ ವಹಿಸಿಕೊಂಡು ನಮ್ಮ ಶ್ರಮವನ್ನು ಒಂದಿಷ್ಟು ಕಡಿಮೆ ಮಾಡುತ್ತಾರೆ ಎಂಬ ಬಯಕೆ ಕೆಲವರಲ್ಲಿ ಇರುತ್ತದೆ. ಪ್ರೌಢಶಾಲೆಯಲ್ಲಿ ಇದ್ದರಂತೂ ಆದಷ್ಟು ಬೇಗ ಮಗಳಿಗೆ ಮದುವೆ ಮಾಡಿಬಿಡಬೇಕು ಎಂದುಕೊಳ್ಳುವವರೂ ಇದ್ದಾರೆ. ಹೀಗಾಗಿ ರಜೆಯ ನಂತರ ಅದೆಷ್ಟೋ ಮಕ್ಕಳು ಶಾಲಾ ವ್ಯಾಪ್ತಿಯಿಂದ ಹೊರಗೆ ಉಳಿದುಬಿಡುತ್ತಾರೆ. ಮಕ್ಕಳ ಸ್ನೇಹಿಯಾಗಿ, ಆ ಮನಸ್ಸುಗಳಿಗಾಗಿ ವಿಶಿಷ್ಟವಾಗಿ ಯೋಚಿಸೋಣ ಎಂದುಕೊಳ್ಳುವವರು ತೀರಾ ಅಪರೂಪ. ಇಷ್ಟದಂತೆ ಆಡೋಣ ಎಂದರೆ ಹಲವು ನಿರ್ಬಂಧಗಳು. ಅದು ಮುಟ್ಟಬೇಡ, ಟಿ.ವಿ ನೋಡಬೇಡ, ಆ ಕಾಂಪೌಂಡ್ ದಾಟಿ ಹೋದರೆ ಸುಮ್ಮನಿರೋಲ್ಲ, ತಮ್ಮ ತಂಗಿಯನ್ನು ನೋಡಿಕೊ, ಕೊಟ್ಟ ಹೋಮ್‌ವರ್ಕ್ ಮುಗಿಸು, ಬರುವಷ್ಟರಲ್ಲಿ ಈ ಕೆಲಸವನ್ನೆಲ್ಲ ಮಾಡಿಡು... ಹೀಗೆ ಹತ್ತಾರು ಜವಾಬ್ದಾರಿಗಳು. ಹೆಚ್ಚು ನಿರ್ಬಂಧಗಳನ್ನು ಹಾಕುವುದರಿಂದ ಚೇಷ್ಟೆ ಜಾಸ್ತಿಯಾಗುತ್ತದೆ ಹೊರತು ಮಕ್ಕಳು ನಿಯಂತ್ರಣಕ್ಕೆ ಬರಲಾರರು. ರಜೆ ಎಂಬುದು ಮಹತ್ವದ ಕಾಲ. ಮಕ್ಕಳು ಅದನ್ನು ಆಸ್ವಾದಿಸಬೇಕು ಜೊತೆಗೆ ಸದ್ಬಳಕೆಯನ್ನೂ ಮಾಡಿಕೊಳ್ಳಬೇಕು. ಋತುಮಾನದ ವೈಪರೀತ್ಯದಲ್ಲಿನ ಧಗೆಯಿಂದಾಗಿ ಬೇಸಿಗೆಯ ರಜೆಗೆ ಪ್ರಾಶಸ್ತ್ಯ ದೊರೆತರೂ, ಹೊಸ ಆಸಕ್ತಿ, ಅಭಿರುಚಿಗಳಿಗೆ ಸೃಜನಶೀಲ ಮೆರಗು ಸಿಗುವಂತಾಗಬೇಕು. ಭಾವನಾತ್ಮಕ, ಸಾಮಾಜಿಕ ಸಂಬಂಧಗಳನ್ನು ಅರ್ಥ ಮಾಡಿಕೊಳ್ಳುವಲ್ಲಿ, ಮೌಲ್ಯಗಳನ್ನು, ಸಂಸ್ಕಾರ- ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳುವಂತೆ ಮಾಡುವಲ್ಲಿ ಹಿರಿಯರ ಜವಾಬ್ದಾರಿ ಗುರುತರವಾದುದು. ಪರಸ್ಪರ ಸಹಕಾರ, ಹೊಂದಾಣಿಕೆ, ಕೊಡು-ಕೊಳ್ಳುವಿಕೆ, ನೋವು-ನಲಿವುಗಳಿಗೆ ಸ್ಪಂದನೆ, ಇತ್ಯಾದಿ ಸಾಂಘಿಕ ಗುಣಧರ್ಮಗಳು ಮಕ್ಕಳಲ್ಲಿ ಅಂತರ್ಗತ ಆಗಬೇಕಾದದ್ದು ರಜೆಯಲ್ಲಿ. ತಪ್ಪು ಒಪ್ಪುಗಳನ್ನು ಗಮನಿಸಿ, ಅವುಗಳನ್ನು ತಿದ್ದಲು ಸಾಕಷ್ಟು ಸಮಯಾವಕಾಶ ಈ ಅವಧಿಯಲ್ಲಿ ಪೋಷಕರಿಗೆ ಲಭ್ಯವಾಗುತ್ತದೆ. ಪೋಷಕರೇ ಹೀಗೆ ಮಾಡಿ ಮಕ್ಕಳ ರಜಾ ದಿನಗಳ ಬಗ್ಗೆ ಅವರೊಂದಿಗೆ ಚರ್ಚಿಸಿ. ರಜೆಯಲ್ಲಿ ಏನು ಮಾಡಲು ಇಚ್ಛಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳಿ. ಮಕ್ಕಳಲ್ಲಿರುವ ಅಭಿರುಚಿಗೆ ಪೂರಕವಾಗಿ ಏನು ಮಾಡಲು ಸಾಧ್ಯ ಎನ್ನುವುದನ್ನು ಯೋಚಿಸಿ. ತಂದೆ ತಾಯಿ ಇಬ್ಬರೂ ವೃತ್ತಿಪರರಾಗಿದ್ದರೆ, ಇಡೀ ದಿನ ಮಕ್ಕಳನ್ನು ಯಾರ ಜವಾಬ್ದಾರಿಗೆ ವಹಿಸಬೇಕು ಎಂಬ ಬಗ್ಗೆ ಗಂಭೀರವಾಗಿ ಚಿಂತಿಸಿ. ಮನೆಯ ಸಣ್ಣಪುಟ್ಟ ಕೆಲಸಗಳಲ್ಲಿ ಮಕ್ಕಳನ್ನು ವಿಶ್ವಾಸಕ್ಕೆ ತಂದುಕೊಳ್ಳುತ್ತಾ, ಶಿಶು ಸ್ನೇಹಿಯಾಗಿ ಅವರ ಆಲೋಚನೆಗಳನ್ನು ಗೌರವಿಸಿ. ರಜೆ ಕಾಲದಲ್ಲಿ ವಸತಿ ಶಾಲೆ ಅಥವಾ ಹಾಸ್ಟೆಲ್‌ಗಳಿಂದ ಮನೆಗೆ ಬರುವ ಮಕ್ಕಳ ಭಾವನೆಗಳನ್ನು ಹತ್ತಿಕ್ಕದೆ, ಪ್ರೀತಿಯಿಂದ ವರ್ತಿಸಿ. ಅವರ ಸಮಸ್ಯೆಗಳನ್ನು ಮತ್ತು ಅಭಿವ್ಯಕ್ತಿಯನ್ನು ಗಂಭೀರವಾಗಿ ಅವಲೋಕಿಸಿ. ಮಕ್ಕಳನ್ನು ಮಕ್ಕಳಾಗಲು ಬಿಡಿ. ದೊಡ್ಡವರ ಆಶೋತ್ತರಗಳಿಗೆ ಅವರನ್ನು ಬಲಿಕೊಡದೆ ವಯೋಮಿತಿಗೆ ಅನುಗುಣವಾಗಿ ವ್ಯಕ್ತವಾಗುವ ಸಹಜ ಮುಗ್ಧತೆಯನ್ನು ಗೌರವಿಸಿ. ಕುಟುಂಬದ ಸದಸ್ಯರನ್ನು ಗೌರವಿಸಲು ತಿಳಿಸಿ. ಜೀವನ ನಿರ್ವಹಣೆಯಲ್ಲಿ ಮಾನವ ಸಂಬಂಧಗಳ ಮಹತ್ವವನ್ನು ಅರ್ಥ ಮಾಡಿಸಿ. ಈ ಪಠ್ಯವನ್ನೇ ಓದುತ್ತಿರು, ಹೆಚ್ಚು ಸಲ ಬರಿ, ಉರು ಹೊಡೆದು ಪ್ರಶ್ನೋತ್ತರ ಒಪ್ಪಿಸು ಎಂಬಿತ್ಯಾದಿ ಚಟುವಟಿಕೆಗಳು ಹೊರೆ ಎನಿಸಿಕೊಳ್ಳುತ್ತವೆ. ದೀರ್ಘ ಕಾಲದ ರೋಗ ರುಜಿನಗಳಿಂದ ಮಕ್ಕಳು ಬಳಲುತ್ತಿದ್ದರೆ, ಅನಿವಾರ್ಯವಾದ ಚಿಕಿತ್ಸೆ ಅಥವಾ ಶಸ್ತ್ರಚಿಕಿತ್ಸೆಗೆ ಅವರನ್ನು ಒಳಪಡಿಸುವಂತಿದ್ದರೆ ರಜೆ ಕಾಲ ಸದ್ಬಳಕೆಯಾಗಲಿ. ಕಾರಣ, ವಿಶ್ರಾಂತಿಗೆ ಅವಕಾಶ ಇರುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.