ಶಾಲೆ ಓಕೆ ಚಕ್ಕರ್ ಯಾಕೆ? ಆ ದಿನ ಹಾಲು ಮಾರುವ ಬೊಮ್ಮೇನಹಳ್ಳಿಯ ಹೇಮಣ್ಣ ತಮ್ಮ ಹಳೇ ಬೈಸಿಕಲ್ಲಿಗೆ ಕಿರ‌್ರನೆ ಬ್ರೇಕ್ ಹಾಕಿ ನೇರವಾಗಿ ನನ್ನನ್ನು ಕೇಳಿದರು `ನಿಮಗೆ ಸಂಬಳ ಎಷ್ಟು?' ನನಗೇಕೋ ಈ ಪ್ರಶ್ನೆ ಕೇಳಿ ಹುಬ್ಬೇರಿತು. ಆದರೂ ಹೇಮಣ್ಣ 80 ವರ್ಷದ ಹಿರಿಯರು ಎಂಬ ಕಾರಣಕ್ಕೆ ತಾಳ್ಮೆಯಿಂದ ಉತ್ತರಿಸಿದೆ. ಅವರು `ನಿಮಗೆ ಹೆಣ್ಣು ಕೊಡಲು ಅಲ್ಲ ಬಿಡಿ' ಎಂದು ನಕ್ಕು ಮಾತಿಗೆಳೆದರು. ಹೇಮಣ್ಣ ನನಗೇನೂ ಹೊಸಬರಲ್ಲ. ಸಣ್ಣ ರೈತ. ನಾಲ್ಕೆಕರೆ ಜಮೀನು, 5-6 ಹಸುಗಳನ್ನು ಸಾಕಿಕೊಂಡು ಹಾಲು ಮಾರಿ ಜೀವನ ನಡೆಸುತ್ತಲೇ, ಅರ್ಧ ಎಕರೆ ಜಮೀನನ್ನು ಸರ್ಕಾರಿ ಶಾಲೆಗೆ ದಾನ ಮಾಡಿ ಶಿಕ್ಷಕರಿಗೆ ಮನೆ ನಿರ್ಮಿಸಿಕೊಟ್ಟಿದ್ದ ಅನಕ್ಷರಸ್ಥ ಶಿಕ್ಷಣ ಪ್ರೇಮಿ! ಆದ್ದರಿಂದ ಅವರ ಬಗ್ಗೆ ಗೌರವ, ಪ್ರೀತಿ. ಶಾಲೆ ಬಗ್ಗೆ ಅವರಿಗೆ ಅಪಾರ ಕಾಳಜಿ. ವಿದ್ಯಾರ್ಥಿಗಳ ಸಂಖ್ಯೆ, ಹಾಜರಾತಿ, ಕಲಿಕೆ, ಶಿಕ್ಷಕರ ಸಂಬಳ, ಕಲಿಕಾ ಗುಣಮಟ್ಟ... ಹೀಗೆ ಎಲ್ಲ ಸಂಗತಿಗಳ ಬಗ್ಗೆ ಅವರು ಕೇಳಿದ ಪ್ರಶ್ನೆಗಳಿಗೆ ತಿಳಿದಷ್ಟು ಉತ್ತರಿಸಿದೆ. ಶಾಲೆಯಲ್ಲಿದ್ದ 60 ಮಕ್ಕಳ ತಿಂಗಳ ಸರಾಸರಿ ಖರ್ಚನ್ನು ನನ್ನಿಂದಲೇ ಲೆಕ್ಕ ಹಾಕಿಸಿದರು. ತಿಂಗಳಿಗೆ ಒಟ್ಟು ಖರ್ಚು 36,000, ವರ್ಷಕ್ಕೆ 4.32 ಲಕ್ಷ ಎಂದೆ. ಕೂಡಲೇ ಹೇಮಣ್ಣ ಎರಡು ಆಯ್ಕೆಗಳನ್ನು ನನ್ನ ಮುಂದಿಟ್ಟರು. 1. ಈ ನಾಲ್ಕು ಲಕ್ಷ ರೂಪಾಯಿಗಳನ್ನು ಪ್ರತಿ ಕುಟುಂಬಕ್ಕೆ ಹಂಚುತ್ತಾ ಬಂದರೆ ಅವರ ಹೊಲದಲ್ಲಿ ಬಾವಿ ತೋಡಿಸಿ ಬಂಗಾರ ಬೆಳೀತಾರೆ. 2. ಇಲ್ಲ, ಪ್ರತಿ ತಿಂಗಳು ಅವರವರ ಮನೆಗೆ ಹಣ ಕೊಡಿ. ಅವರಿಷ್ಟ ಬಂದ ಸ್ಕೂಲಿಗೆ ಮಕ್ಕಳನ್ನ ಸೇರಿಸಿ ಓದಿಸ್ಕೋತಾರೆ ಎಂದು ಕಟುವಾಗಿ ನುಡಿದರು. ಈ ಮಾತು ಕೇಳಿ ನನಗೆ ತಲೆಯಲ್ಲಿ ಹುಳ ಬಿಟ್ಟ ಹಾಗೆ ಆಯಿತು. ಸಿಟ್ಟೂ ಬಂತು. ಈ ಸಂದರ್ಭದಲ್ಲಿ ಅವರು ಕೇಳಿದ ಪ್ರಮುಖ ಪ್ರಶ್ನೆ `ಮಕ್ಕಳು ಶಾಲೆಗ್ಯಾಕೆ ಚಕ್ಕರ್ ಹಾಕುತ್ತಾರೆ?' ಈಗ ಹೇಮಣ್ಣ ಬದುಕಿಲ್ಲ. ಸುಮಾರು 10 ವರ್ಷಗಳ ಹಿಂದೆ ಅವರು ಕೇಳಿದ್ದ ಪ್ರಶ್ನೆ ಇದು. ಚೀನಾದ ಕನ್‌ಫ್ಯೂಷಿಯಸ್‌ನ ರೀತಿ ದಾರಿ ಮಧ್ಯೆ ಸಿಕ್ಕವರನ್ನೆಲ್ಲ ಮಾತಿಗೆಳೆಯುತ್ತಿದ್ದ ಹೇಮಣ್ಣನ ಪ್ರಶ್ನೆಗಳು ಈಗಲೂ ನನ್ನ ಮನಸ್ಸಿನಿಂದ ಮರೆಯಾಗಿಲ್ಲ. ಅದು ಎಪ್ಪತ್ತರ ದಶಕ. ಶಾಲೆಗೆ ಚಕ್ಕರ್ ಹಾಕುತ್ತಿದ್ದ ಹುಡುಗನೊಬ್ಬನನ್ನು ನಾಲ್ವರು ಹುಡುಗರು ಕೈಕಾಲು ಹಿಡಿದು ಅಂಗಾತ ಎಳೆದುಕೊಂಡು ಹೊತ್ತೊಯ್ಯುತ್ತಿದ್ದರು. ಚಿಕ್ಕಮುತ್ತು ಎಂಬ ಆ ಹುಡುಗ ಅವರಿಂದ ಕಷ್ಟಪಟ್ಟು ಬಿಡಿಸಿಕೊಂಡು ಬಿದ್ದೋಡುತ್ತಿದ್ದ. ಶಿಕ್ಷಕರಿಗೆ ಆತನನ್ನು ಶಾಲೆಗೆ ಕರೆತರುವಾಸೆ. ಆದರೆ ಹೋಮ್‌ವರ್ಕ್ ಮಾಡಿಲ್ಲ, ಪಾಠ ಒಪ್ಪಿಸಿಲ್ಲ, ಬಟ್ಟೆ ಒಗೆದಿಲ್ಲ, ಸಮವಸ್ತ್ರ ಧರಿಸಿಲ್ಲ, ಸ್ನಾನ ಮಾಡಿಲ್ಲ, ತಲೆ ಬಾಚಿಲ್ಲ, ಪುಸ್ತಕ ತಂದಿಲ್ಲ ಹೀಗೆ ಹತ್ತಾರು ಕಾರಣ ನೀಡಿ ದಿನವೂ ಒದೆ ತಿನ್ನುತ್ತಿದ್ದ ಚಿಕ್ಕಮುತ್ತು. ತರಗತಿ ಬೋಧನೆ ಅವನಿಗೆ ತಲುಪಿಲ್ಲ, ಅದಕ್ಕಾಗಿ ಮನೆಪಾಠ ಬರೆದಿಲ್ಲ, ಅಭ್ಯಾಸಕ್ಕೆ ಮನೆಯಲ್ಲಿ ಮಾರ್ಗದರ್ಶನ ಇಲ್ಲ, ಹೀಗಿರುವಾಗ ಅವನು ಯಾಕೆ ತಾನೇ ಶಾಲೆಗೆ ಬಂದಾನು ಎಂಬ ಸತ್ಯ ಗುರುಗಳಿಗೆ ಗೊತ್ತಿರಲಿಲ್ಲವೇ? ಅವನಿಗೇನೋ ಶಾಲೆ ಬಿಡಲು ಇಷ್ಟೆಲ್ಲ ಕಾರಣಗಳಿದ್ದವು. ಆದರೆ ತರಗತಿಯ ಲೀಡರ್ ಆಗಿದ್ದ ಹುಡುಗಿ ಸಹ ಶಾಲೆ ಬಿಟ್ಟದ್ದೇಕೆ? ಶಿಕ್ಷಕರೊಬ್ಬರು ಕೊಡುತ್ತಿದ್ದ ಅತಿಯಾದ ಪ್ರೀತಿಯ ಮುತ್ತು ಅವರಪ್ಪನಿಗೂ ಮುಟ್ಟಿ, ಅಪ್ಪ ಕಲಿಯಲು ಹೋಗುವುದು ಬೇಡವೆಂದ ಎಂಬ ಸುದ್ದಿ ಮರುದಿನ ಶಾಲೆಯ ಗೋಡೆ ಮೇಲೆ ಬರೆದಿತ್ತು! `ಓದು ಬರಹ ಕಲಿತ ನಾರಿ ಸುಖ ಸಂಸಾರಕ್ಕೆ ದಾರಿ' ಎಂಬ ಸಾಲುಗಳನ್ನು ಯಾರೋ `ಓದು ಬರಹ ಕಲಿತ ನಾರಿ ಊರಿನಿಂದಲೇ ಪರಾರಿ' ಎಂದು ವ್ಯಂಗ್ಯವಾಗಿ ಬರೆದಿದ್ದು ಸಹ ಇನ್ಯಾವುದೋ ಪ್ರಕರಣವೊಂದರಲ್ಲಿ ಗೋಡೆಗಳ ಮೇಲೆ ರಾರಾಜಿಸಿತ್ತು. ಮತ್ತೊಬ್ಬ ವಿದ್ಯಾರ್ಥಿಯ ವಿಚಿತ್ರ ಅಭ್ಯಾಸ ಎಲ್ಲರ ಪೆನ್ನು, ಬಾಕ್ಸ್ ಕದಿಯುವುದು. ಹೊಸ ಪೆನ್ನು, ಬಳಪ, ಪುಸ್ತಕ, ಸ್ಲೇಟು ಹೀಗೆ ಏನು ಸಿಕ್ಕಿದರೂ ಬಚ್ಚಿಡುವ ಅಭ್ಯಾಸ. ಪ್ರತಿ ದಿನ ಗುರುಗಳಿಂದ ಶಿಕ್ಷೆ. ಕೊನೆಗೆ ಆತನ ಮೇಲಿನ ಕಳ್ಳತನದ ಆರೋಪ ಸಹಿಸದೆ ಅವರಪ್ಪನೇ ತೀರ್ಮಾನ ತೆಗೆದುಕೊಂಡು `ಓದು ಒಕ್ಕಾಲು ಬುದ್ಧಿ ಮುಕ್ಕಾಲು' ಎಂದು ಬೈದು ಶಾಲೆ ಬಿಡಿಸಿದ್ದ. ಆದರೆ ಆ ಹುಡುಗನ ಬಾಲ್ಯ ಸಹಜ ಆಸೆಗಳ ಬಗ್ಗೆ ತಂದೆ- ತಾಯಿಯಾಗಲೀ, ಗುರುಗಳಾಗಲೀ ಯೋಚಿಸಲಿಲ್ಲವೇಕೆ? ಮಕ್ಕಳ ಸಹಜ ಬಯಕೆಗಳು ಹಿರಿಯರಿಗೆ ತಿಳಿಯುವುದಿಲ್ಲವೇ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಬಡತನ, ವಲಸೆ, ಚಿಕ್ಕ ಮಕ್ಕಳ ಪೋಷಣೆ, ಕೂಲಿ, ಕೌಟುಂಬಿಕ ಸಮಸ್ಯೆ, ಅಲೆಮಾರಿ ಜೀವನ, ನಗರೀಕರಣ, ದೂರದ ಶಾಲೆ, ಬಾಲ್ಯ ವಿವಾಹ, ವಿಘಟಿತ ಕುಟುಂಬ, ಶಾಲಾ ಪರಿಸರದ ಅವಾಂತರಗಳು, ಶೌಚಾಲಯ ಸಮಸ್ಯೆಯಂತಹ ಬಾಹ್ಯ ಕಾರಣಗಳೇನೇ ಇದ್ದರೂ ಹಲವು ಬಾರಿ ಮಗುವಿನ ಆಂತರ್ಯ ಮತ್ತು ತರಗತಿ ಕೋಣೆಯ ಒಳಗಿನ ಕಾರಣಗಳೇ ಬೇರೆಯಾಗಿರುತ್ತವೆ ಎಂಬ ಸತ್ಯವನ್ನು ಅಲ್ಲಗಳೆಯಲಾಗದು. ಬಹುಶಃ ಹಲವು ಮಕ್ಕಳು ಶಾಲೆ ಬಿಡುವುದಕ್ಕೆ ಇದೇ ಮುಖ್ಯ ಕಾರಣವಾಗಿದ್ದರೂ ಆಶ್ಚರ್ಯವಿಲ್ಲ. ಸೌಲಭ್ಯ ಮುಂದೆ; ಗುರಿ ಹಿಂದೆ 1986ರ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ, ಕಡ್ಡಾಯ ಶಿಕ್ಷಣದ ಗುರಿ ದೇಶದ ಮುಂದೆ ಬಂದಾಗ ಹಲವಾರು ಯೋಜನೆಗಳು, ಕಾರ್ಯಕ್ರಮಗಳನ್ನು ರೂಪಿಸಲಾಯಿತು. 1988ರಲ್ಲಿ ಒ.ಬಿ.ಬಿ. (ಆಪರೇಶನ್ ಬ್ಲಾಕ್ ಬೋರ್ಡ್) ಮೂಲಕ ಶಾಲೆಗಳ ಮೂಲ ಸೌಕರ್ಯ ವೃದ್ಧಿ, ಶಿಕ್ಷಕರ ನೇಮಕ, ಆಟೋಪಕರಣ, ಪಾಠೋಪಕರಣ, ಸಂಗೀತ ಸಾಮಗ್ರಿ, ಕೊಠಡಿ ನಿರ್ಮಾಣ, ಪೀಠೋಪಕರಣ ಹೀಗೆ ಸಾಕಷ್ಟು ಸೌಲಭ್ಯಗಳು ಶಾಲೆಗೆ ಹರಿದುಬಂದವು. ಆದರೆ ಗುರಿ ಮಾತ್ರ ಹಾಗೇ ಉಳಿಯಿತು. 1990ರ ದಶಕದಲ್ಲಿ ಡಿ.ಪಿ.ಇ.ಪಿ. ಎಂಬ ಯೋಜನೆ ಜಾರಿಗೆ ಬಂತು. ಶಿಕ್ಷಕರ ತರಬೇತಿ, ಬೋಧನಾ ವಿಧಾನದಲ್ಲಿ ನಾವೀನ್ಯ, ಕಲಿಕಾ ಸಾಮಗ್ರಿ, ಸಂಪನ್ಮೂಲ ಕೇಂದ್ರ ಸ್ಥಾಪನೆ, ಮೂಲ ಸೌಕರ್ಯ, ಹೊಸ ಶಾಲೆಗಳ ನಿರ್ಮಾಣ ಹೀಗೆ ನೂರೆಂಟು ಕಾರ್ಯಕ್ರಮಗಳ ಸರಮಾಲೆಯೇ ಅಲ್ಲಿತ್ತು. ಆದರೆ ಇದೊಂದು `ದಂಡಪಿಂಡದ ಈಟಿಂಗ್ ಪ್ರೋಗ್ರಾಂ' ಎಂದು ಕೆಲವರು ವ್ಯಂಗ್ಯವಾಡಿದರು. ಈ ಕಾರ್ಯಕ್ರಮಗಳ ಮೂಲಕ ಶಾಲಾ ವ್ಯವಸ್ಥೆಯಲ್ಲಿ ಸುಧಾರಣೆ ಆಯಿತು ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ಆದರೆ ದಾಖಲಾತಿ, ಹಾಜರಾತಿ ಮತ್ತು ಗುಣಮಟ್ಟ ಎಂಬ ಮೂರು ಸವಾಲುಗಳು ಮಾತ್ರ ಹಾಗೇ ಉಳಿದವು. 2000-01ನೇ ಸಾಲಿನಲ್ಲಿ ನಮ್ಮ ರಾಜ್ಯಕ್ಕೆ ಎಸ್.ಎಸ್.ಎ.- ಸರ್ವ ಶಿಕ್ಷಣ ಅಭಿಯಾನ ಯೋಜನೆ ಕಾಲಿರಿಸಿತು. 10 ವರ್ಷಗಳ ಗುರಿ ಶಾಲಾ ವ್ಯವಸ್ಥೆಯ ಆಮೂಲಾಗ್ರ ಬದಲಾವಣೆಗೆ ನಾಂದಿಯಾಯಿತು. ಕಲಿ- ನಲಿ, ಕೇಳಿ ಕಲಿ, ನಲಿ- ಕಲಿ ಹೀಗೆ ವಿನೂತನ ಬೋಧನಾ ವಿಧಾನ, ಅಕ್ಷರ ದಾಸೋಹ ಹೀಗೆ ಏನೆಲ್ಲ ಸುಧಾರಣೆಗಳು ಬಂದವು. ಆದರೂ ಹಲವು ಮಕ್ಕಳು ನಲಿಯುವುದು ಕಲಿಯುವುದಿರಲಿ, ಶಾಲೆಯಿಂದಲೇ ಹೊರಗುಳಿದಿದ್ದಾರೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಇತ್ತೀಚೆಗೆ ವರದಿ ನೀಡಿದೆ. ಇದಕ್ಕೆ ಕಾರಣವೇನು? ಮಕ್ಕಳನ್ನು ಶಾಲೆಗೆ ಕರೆತರಲು ರೂಪಿಸಿರುವ ಸಂಚಾರಿ ಶಾಲೆ, ಪೂರಕ ಶಾಲೆ, ಟೆಂಟ್ ಶಾಲೆ, ಚಿಣ್ಣರ ಅಂಗಳ, ಋತುಮಾನ ಶಾಲೆ, ವಸತಿ ಶಾಲೆ, ಸೇತುಬಂಧ, ವಿಶೇಷ ಶಾಲೆ, ದಾಖಲಾತಿ ಆಂದೋಲನ, ಗೃಹಾಧಾರಿತ ಶಿಕ್ಷಣ, ಮಕ್ಕಳ ಗಣತಿ, ಚೈಲ್ಡ್ ಟ್ರಾಕ್, ಪರಿಹಾರ ಬೋಧನೆ ಎಂಬ ನೂರಾರು ಕಾರ್ಯಕ್ರಮಗಳು ನಿರೀಕ್ಷಿತ ಫಲ ನೀಡುತ್ತಿಲ್ಲವೇಕೆ? ಇದಕ್ಕೆಲ್ಲ ವ್ಯಯಿಸಿರುವ ಕೋಟಿ ಕೋಟಿ ಹಣಕ್ಕೆ ಏನು ಬೆಲೆ? ಕೂಲಿಯಿಂದ ಶಾಲೆಗೆ, ಬಾ ಮರಳಿ ಶಾಲೆಗೆ, ಬಾ ಬಾಲೆ ಶಾಲೆಗೆ, ಬಾ ಗೆಳೆಯ ಶಾಲೆಗೆ, ಓ ಬಾಲೆ ಎಂಬಂತಹ ಕರೆಗಳಿಗೆ ಮಕ್ಕಳೇಕೆ ಓಗೊಡುತ್ತಿಲ್ಲ? ಈ ಸಂದರ್ಭದಲ್ಲಿ ಬಾಲ್ಯದ ಸಂಗತಿಯೊಂದು ನೆನಪಾಗುತ್ತದೆ. ನಾನು ಚಿಕ್ಕವನಿದ್ದಾಗ ನಮ್ಮವ್ವ ಕೋಳಿ ಮರಿಗಳನ್ನು ಪಂಜರಕ್ಕೆ ಹಾಕಲು ಹೇಳುತ್ತಿದ್ದಳು. ನಾಲ್ಕು ಮರಿಗಳನ್ನು ತಳ್ಳುವಷ್ಟರಲ್ಲಿ ಮತ್ತೆ ಎರಡು ಹೊರಕ್ಕೆ ಓಡಿ ಬಂದುಬಿಡುತ್ತಿದ್ದವು. ನನ್ನ ಪ್ರಯತ್ನ ಯಶಸ್ವಿ ಆಗುತ್ತಿರಲಿಲ್ಲ. ಆದರೆ ಕೋಳಿ ತನ್ನ ಮರಿಗಳನ್ನು ಪ್ರೀತಿಯಿಂದ ದನಿ ಮಾಡಿ ಕರೆದರೆ ಹತ್ತಿಪ್ಪತ್ತು ಮರಿಗಳು ಓಡಿಬಂದು ಅಮ್ಮನ ರೆಕ್ಕೆಯಲ್ಲಿ ಅಡಗಿ ಕುಳಿತು, ಪಿಳಿಪಿಳಿ ಕಣ್ಣು ಬಿಡುತ್ತಾ ನನ್ನನ್ನು ಅಣಕಿಸುವಂತೆ ನೋಡುತ್ತಿದ್ದವು. ಆಹಾ ಎಂಥ ಪ್ರೀತಿ! ನಮ್ಮ ಶಾಲಾ ಮಕ್ಕಳೇಕೆ ಹಾಗಿಲ್ಲ? ಇಂದಿನ ನಲಿ- ಕಲಿ ಏನಾಗಿದೆ? ಬುಟ್ಟಿ ಮ್ಯೋಲೆ ಕುಣಿದರೆ ಕೂಚುಪುಡಿ, ತಟ್ಟೆ ಮ್ಯೋಲೆ ಕುಣಿದರೆ ಕಥಕ್ಕಳಿ, ತಲೆ ಕೆದರಿ ಬಟ್ಟೆ ಒದರಿ ಕುಣಿದರೆ ನಲಿ- ಕಲಿ ಎನ್ನುವಂತಾಗಿವೆ ಹಲವು ತರಬೇತಿಗಳು. ಕೆಲ ದಿನಗಳ ಹಿಂದೆ ಶಿಕ್ಷಣ ಇಲಾಖೆ ಆಯುಕ್ತರಿಂದ ಹೈಕೋರ್ಟ್ ವರದಿ ಕೇಳಿತ್ತು. ಆಗ ಆಯುಕ್ತರ ವರದಿಯಲ್ಲಿ ಒಂದು ಅಂಶ ದಾಖಲಾಗಿತ್ತು. ಅದೇನೆಂದರೆ ತಾವು ನಿಗದಿತ ಸಾಮರ್ಥ್ಯ ಗಳಿಸಿಲ್ಲದೇ ಇರುವುದು ಕೂಡ ಮಕ್ಕಳು ಶಾಲೆ ತೊರೆಯಲು ಕಾರಣ ಎಂಬುದು. ಇದೇ ಬಹುಶಃ ಇಂದಿನ ಮಕ್ಕಳ ಗೈರುಹಾಜರಿಗೆ ಪ್ರಧಾನ ಕಾರಣವೂ ಆಗಿರಬಹುದು ಅಥವಾ ಅನುತ್ತೀರ್ಣತೆ ಕಾರಣ ಎನ್ನುವುದಾದರೆ ಅದರ ಮೂಲ ತರಗತಿಯ ಪರಿಸರ ಎಂದಾಯಿತು. ಹಾಗಿದ್ದರೆ ಅಲ್ಲಿನ ಪ್ರಮುಖವ್ಯಕ್ತಿ ಗುರು. `ವಿದ್ಯೆ ಕಲಿಸದ ತಂದೆ, ಬುದ್ಧಿ ಕೊಡದಾ ಗುರುವು, ಬಿದ್ದಿರಲು ಬಂದು ನೋಡದಾ ತಾಯಿ ಶುದ್ಧ ವೈರಿಗಳು' ಎಂದಿದ್ದಾನೆ ಸರ್ವಜ್ಞ. ಈ ವಚನದ ಅರ್ಥ ಇಂದಿಗೆ ಹೆಚ್ಚು ಪ್ರಸ್ತುತ. ತರಗತಿ ಬೋಧನೆಯ ಗ್ರಹಿಕೆಯಲ್ಲಿ, ಕಲಿಕೆಯಲ್ಲಿ ಹಿಂದುಳಿದ ಮಗುವಿನ ಪಾಲಿಗೆ ಶಿಕ್ಷಕರ ಅಗತ್ಯ ಎಷ್ಟಿದೆ ಎಂಬ ಸತ್ಯ ಅರಿತರೆ ಎಲ್ಲ ಮಕ್ಕಳೂ ಸ್ವಾಭಿಮಾನದಿಂದ ಶಾಲೆಗೆ ಬಂದಾರು. ಶಿಕ್ಷಕರು, ಅಧಿಕಾರಿಗಳು, ಪೋಷಕರು ತಮ್ಮ ತಮ್ಮ ಜವಾಬ್ದಾರಿಯನ್ನು ಕೇವಲ ವೃತ್ತಿ ಎಂದು ಭಾವಿಸದೆ, ಅಂತಃಕರಣದೊಡನೆ ಶ್ರಮಿಸುವುದಾದರೆ ನಮ್ಮ ಗುರಿ ಮುಟ್ಟಬಹುದೇ ಎಂಬ ಪ್ರಶ್ನೆಯನ್ನು ಹಲವು ಬಾರಿ ನನಗೆ ನಾನೇ ಹಾಕಿಕೊಳ್ಳುತ್ತೇನೆ. ಆ ಟೀಚರ್ರೇ ಬೇಕು! ಒಂದು ದಿನ ಶಾಲೆಯೊಂದರ ಬಳಿ ಹೋದಾಗ 1ನೇ ತರಗತಿ ಮಗುವೊಂದು ಬಿಕ್ಕಿಬಿಕ್ಕಿ ಅಳುತ್ತಿತ್ತು. ಜೊತೆಯಲ್ಲಿದ್ದ ಮಕ್ಕಳು `ತಿಂಡಿ ಬೇಕಾ?' `ಅಮ್ಮ ಬೇಕಾ?' `ಯಾರಾದರೂ ಹೊಡೆದರಾ?' `ಅಪ್ಪ ಬೇಕಾ?' ಎಂದೆಲ್ಲ ಕೇಳುತ್ತಿದ್ದರು. ಎಲ್ಲದಕ್ಕೂ ಮಗು `ಇಲ್ಲ' ಎಂದೇ ತಲೆ ಆಡಿಸುತ್ತಿತ್ತು. `ಮತ್ಯಾಕೆ ಅಳುತ್ತಿರುವೆ?' ಎಂದು ಕೇಳಿದಾಗ ಸತ್ಯ ಹೊರಬಿತ್ತು! `ನನ್ನ ಟೀಚರ್ ಈ ದಿನ ಶಾಲೆಗೆ ಬಂದಿಲ್ಲ. ನನಗೆ ಅವರೇ ಬೇಕು' ಎಂದು ಹೇಳಿದ ಆ ಮಗುವಿನ ಕಣ್ಣಲ್ಲಿ ಆದರ್ಶ ಶಿಕ್ಷಕರ ವ್ಯಕ್ತಿತ್ವ ಒಡಮೂಡಿತ್ತು. ಶಿಕ್ಷಕರಲ್ಲಿ ಉದ್ಯೋಗಕ್ಕಿಂತ ಅಂತಃಕರಣದ ಬದ್ಧತೆ ಬಂದರೆ ಗೈರುಹಾಜರಾಗುವ ಮಕ್ಕಳನ್ನು ಶಾಲೆಗೆ ಕರೆತರಲು ಆರ್ಥಿಕ ಪರಿಹಾರವೊಂದೇ ಮಾರ್ಗವಲ್ಲ ಎನಿಸಿತು. 90 ದಿನ, 60 ದಿನ, 30 ದಿನ ಗೈರುಹಾಜರಿ ಎಂದು ಉದ್ದಕ್ಕೂ ಗೆರೆ ಹಾಕುತ್ತಾ ಹೋಗದೆ, ಪ್ರತಿ ದಿನವೂ ಗೈರುಹಾಜರಿಗೆ ಕಾರಣ ತಿಳಿದುಕೊಳ್ಳಬೇಕು. ತರಗತಿಯ ಪರಿಸರವು ಮಕ್ಕಳ ಸಂತಸದ ಕಲಿಕೆಗೆ ಪೂರಕವಾಗಿರಬೇಕು. ಕಲಿಕೆಯಲ್ಲಿ ಹಿಂದುಳಿದ ಮಗುವಿಗೆ ಹೆಚ್ಚಿನ ಮಾರ್ಗದರ್ಶನ ನೀಡುವುದು, ಮಗುವಿನ ವೈಯಕ್ತಿಕ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿ ಸಕಾರಾತ್ಮಕವಾಗಿ ಸ್ಪಂದಿಸುವುದು, ಇಂತಹ ಮಕ್ಕಳ ನಿರಂತರ ಅನುಪಾಲನೆ, ಆಗಾಗ ಪೋಷಕರ ಜೊತೆ ಸಮಾಲೋಚನೆ ಮಾಡಿ ಮಾಹಿತಿ ನೀಡುವುದು ಅತ್ಯಗತ್ಯ. ಹಂಗಿಸುವ, ಹೀಯಾಳಿಸುವ, ಬೈಯುವ, ಶಿಕ್ಷೆ ನೀಡುವ ಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ದ್ವೇಷ, ತಿರಸ್ಕಾರ, ಬೇಸರ, ಅಸಹ್ಯ ಮತ್ತು ನಿರುತ್ಸಾಹ ಮೂಡುತ್ತದೆ ಹೊರತು ಕಲಿಕೆಯ ಬಗ್ಗೆ ಆತ್ಮೀಯ ಭಾವ ಬರುವುದಿಲ್ಲ. ಕಲಿಕೆಯಲ್ಲಿ ಹಿಂದುಳಿದ ಮಕ್ಕಳ ಪರವಾಗಿ ಶಿಕ್ಷಕರು ಕಾರ್ಯ ನಿರ್ವಹಿಸಬೇಕು. ಶಿಕ್ಷಕರು ಆಯಾ ಶಾಲೆ ಮತ್ತು ಸಾಮಾಜಿಕ ಪರಿಸರಕ್ಕೆ ತಕ್ಕಂತೆ ವಿದ್ಯಾರ್ಥಿಯ ಪರಿಸ್ಥಿತಿಯನ್ನು ಅರಿತು ಗೈರುಹಾಜರಿ ಬಗ್ಗೆ ಸೂಕ್ಷ್ಮ ದೃಷ್ಟಿ ಹೊಂದಿರಬೇಕು. ಇಷ್ಟೆಲ್ಲ ಕಾರ್ಯಪಾಲನೆ ಮಾಡಬೇಕಾದರೆ ತರಗತಿಯಲ್ಲಿನ ವಿದ್ಯಾರ್ಥಿ- ಶಿಕ್ಷಕರ ಅನುಪಾತ ಸೂಕ್ತ ಪ್ರಮಾಣದಲ್ಲಿ ಇರಬೇಕು ಎಂಬ ಅಂಶವನ್ನು ಅಲ್ಲಗಳೆಯುವಂತಿಲ್ಲ. ತರಗತಿಯಲ್ಲೇ ಸಮಸ್ಯೆ ಇದು ಒಂದು ಮಗುವಿನ ವಿಚಿತ್ರ ಕಥೆ. ಪ್ರತಿದಿನ ಆತನಿಗೆ ಹೊಟ್ಟೆನೋವು. ಯಾಕೆಂದರೆ ಬಳಪ, ಸ್ಲೇಟಿನ ಪುಡಿ, ಸೀಮೆಸುಣ್ಣ, ಕೆಮ್ಮಣ್ಣು, ಇದ್ದಿಲು, ರಾಗಿ ಹಿಟ್ಟು ಹೀಗೆ ಸಿಕ್ಕಿದ್ದನ್ನೆಲ್ಲ ತಿಂದುಬಿಡುತ್ತಿದ್ದ. ಒಮ್ಮೆ ಆತನ ಹೊಟ್ಟೆ ಕೈಕೊಟ್ಟಿತು. ಇಡೀ ತರಗತಿಯೇ ದುರ್ವಾಸನೆ. ಕೂಡಲೇ ಆ ವಿದ್ಯಾರ್ಥಿಯ ಚಡ್ಡಿ ತುದಿಗೆ ದಾರ ಕಟ್ಟಿ ಮನೆಯ ತನಕ ಓಡುವಂತೆ ಕಟ್ಟಾಜ್ಞೆ. ಆಗ ಆದ ಅಪಮಾನಕ್ಕೆ ಮತ್ತೆ ಶಾಲೆ ಎಂದರೆ ಆತನಿಗೆ ಹೊಟ್ಟೆಯಲ್ಲೇ ತಳಮಳ. ಹೀಗೆ ವಿದ್ಯಾರ್ಥಿಗಳ ಮಾನಸಿಕ ತುಮುಲಗಳಿಗೆ ನೂರಾರು ಉದಾಹರಣೆಗಳು ತರಗತಿಯ ಕೋಣೆಯೊಳಗೇ ಅಡಗಿರಬಹುದು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.