ಟೈಪಿಂಗ್ ಬೇಡ ನಿರ್ಲಕ್ಷ್ಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ವಿಜ್ಞಾನದ ಪ್ರಯೋಗ ಪರೀಕ್ಷೆ ನಡೆಯುತ್ತಿತ್ತು. ಆದಿತ್ಯ ಅರ್ಧ ಗಂಟೆಯಲ್ಲೇ ಪ್ರೋಗ್ರಾಂ ಪೂರ್ತಿ ಮಾಡಿ ತೋರಿಸಿದ. ಎಲ್ಲರೂ ಎರಡು ಮೂರು ಗಂಟೆ ತೆಗೆದುಕೊಳ್ಳುತ್ತಿರುವಾಗ, ಈತ ಹೇಗೆ ಇಷ್ಟು ಬೇಗ ಮಾಡಿ ಮುಗಿಸಿದ ಎಂದು ಅನುಮಾನಗೊಂಡ ಪರೀಕ್ಷಕರು, ಮತ್ತೊಮ್ಮೆ ಮಾಡಲು ಹೇಳಿದರು. ಪುನಃ ಅಷ್ಟೇ ಹೊತ್ತಿಗೆ ಪ್ರೋಗ್ರಾಂ ಮಾಡಿ ತೋರಿಸಿದಾಗ ಪರೀಕ್ಷಕರು ಆಶ್ಚರ್ಯದಿಂದ, `ಇಷ್ಟು ಬೇಗ ಹೇಗೆ ಮಾಡಿದೆ?' ಎಂದು ಕೇಳಿದರು. ಆದಿತ್ಯ `ಟೈಪಿಂಗ್ ಕಲಿತಿದ್ದೇನೆ' ಎಂದಾಗ, ಆ ಪರೀಕ್ಷಕರು ತಾವೂ ಟೈಪಿಂಗ್ ಕಲಿಯಬೇಕು ಎಂದುಕೊಂಡರು. ಎಂಟನೇ ತರಗತಿಯ ಶ್ವೇತಾ ಕಂಪ್ಯೂಟರ್ ಕೀ ಬೋರ್ಡ್ ನೋಡದೆ ಸರಾಗವಾಗಿ ಟೈಪ್ ಮಾಡುತ್ತಿರುವುದನ್ನು ನೋಡಿದ ಸಹಪಾಠಿಗಳು ಮತ್ತು ಶಿಕ್ಷಕರು, ಇದು ಹೇಗೆ ಸಾಧ್ಯ ಎಂದು ಆಶ್ಚರ್ಯಚಕಿತರಾದರು. ಹೇಗೆಂದರೆ, ಶ್ವೇತಾ ಟೈಪಿಂಗ್ ಕಲಿತಿದ್ದಳು. ಬಿ.ಎಸ್ಸಿ. ವಿದ್ಯಾರ್ಥಿಗಳು ಕಂಪ್ಯೂಟರ್ ಲ್ಯಾಬ್ ಎಂದರೆ ತಲೆನೋವು ಎನ್ನುತ್ತಿದ್ದರು. ಕನಿಷ್ಠ ಎರಡು ತಿಂಗಳು ಟೈಪಿಂಗ್ ಕಲಿಯುವಂತೆ ಸೂಚಿಸಿದೆ. ರಜೆಯ ನಂತರ ಅದೇ ವಿದ್ಯಾರ್ಥಿಗಳು `ಈಗ ಕಂಪ್ಯೂಟರ್ ಲ್ಯಾಬ್ ಸುಲಭವಾಗುತ್ತಿದೆ. ಟೈಪಿಂಗ್ ಕಲಿಯುವಂತೆ ನಮಗೆ ಯಾರೂ ಹೇಳಿಯೇ ಇರಲಿಲ್ಲ' ಎಂದರು. ನನ್ನ ಸಲಹೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಯಿತು. ಅಮೆರಿಕದ ಕ್ರಿಸ್ಟೋಫರ್ ಎಲ್. ಶೋಲ್ಸ್ ಎನ್ನುವವರು ಚಾರ್ಲ್ಸ್ ಗ್ಲಿಡನ್ ಮತ್ತು ಸ್ಯಾಮ್ಯುಯಲ್ ಸೋಲ್ ಎಂಬ ಸ್ನೇಹಿತರೊಂದಿಗೆ ಸೇರಿಕೊಂಡು, 1867ರ ಹೊತ್ತಿಗೆ `ಬರೆಯುವ ಯಂತ್ರ' ಟೈಪ್‌ರೈಟರ್‌ನ್ನು ಕಂಡುಹಿಡಿದರು. ಇದು ಅವರ ಅನೇಕ ವರ್ಷಗಳ ಸತತವಾದ ಪರಿಶ್ರಮದ ಫಲ. ಕೈಬರಹಕ್ಕಿಂತಲೂ ಟೈಪ್‌ರೈಟರ್‌ನಲ್ಲಿ ಎರಡು ಪಟ್ಟು ವೇಗವಾಗಿ ಬರೆಯಬಹುದು. ರೆಮಿಂಗ್ಟನ್, ಹಾಲ್ಡಾ, ಗೋದ್ರೇಜ್ ಮುಂತಾದ ಕಂಪೆನಿಗಳು ಟೈಪ್‌ರೈಟರ್‌ಗಳನ್ನು ತಯಾರಿಸತೊಡಗಿದವು. ನಿರಂತರವಾದ ಸಂಶೋಧನೆಗಳ ಫಲವಾಗಿ ಟೈಪ್‌ರೈಟರ್‌ನ ವಿನ್ಯಾಸ, ಕಾರ್ಯಕ್ಷಮತೆ ಉತ್ತಮಗೊಂಡಿತು. ಜಗತ್ತಿನಾದ್ಯಂತ ಅದರ ಬಳಕೆ ವ್ಯಾಪಕವಾಯಿತು. ಟೈಪ್‌ರೈಟರ್ ಸರ್ಕಾರಿ ಹಾಗೂ ಖಾಸಗಿ ಕಚೇರಿಗಳ ಅವಿಭಾಜ್ಯ ಅಂಗವಾಯಿತು. `ಅನಂತ' ಕೀಬೋರ್ಡ್ ಮೈಸೂರಿನ ಅನಂತ ಸುಬ್ಬರಾಯರು 1930ರಲ್ಲಿ ಕನ್ನಡ ಶೀಘ್ರಲಿಪಿಯನ್ನು, 1933ರಲ್ಲಿ ಕನ್ನಡ ಟೈಪ್‌ರೈಟರ್‌ನ್ನು ಕಂಡುಹಿಡಿದರು. ಇದರಲ್ಲಿ ಇಂಗ್ಲಿಷ್ ಭಾಷೆಯ 26 ಅಕ್ಷರಗಳಿಗೆ ಅನುಗುಣವಾದ ಕೀ ಬೋರ್ಡ್ ಇದೆ. ಇಂಗ್ಲಿಷ್ ಟೈಪ್‌ರೈಟರ್‌ನಲ್ಲಿ ಇರುವಷ್ಟೇ ಸಂಖ್ಯೆಯ ಕೀಗಳನ್ನು ಬಳಸಿಕೊಂಡು, ಕನ್ನಡ ಭಾಷೆಯ 52 ಅಕ್ಷರಗಳಿಗೆ, ಒತ್ತಕ್ಷರಗಳಿಗೆ ಹೊಂದಿಕೆಯಾಗುವಂತೆ, ಸುಬ್ಬರಾಯರು ಕನ್ನಡದ ಟೈಪಿಂಗ್ ಕೀ ಬೋರ್ಡ್‌ನ್ನು ಅಭಿವೃದ್ಧಿಪಡಿಸಿದರು. ಅವರಿಗೆ ಸಾಂಪ್ರದಾಯಿಕ ಪದವಿ ಇರಲಿಲ್ಲ. ತಾಂತ್ರಿಕ ಪರಿಣತಿ ಇರಲಿಲ್ಲ. ವೈಜ್ಞಾನಿಕ ಮನೋಭಾವ, ಅದಮ್ಯವಾದ ಇಚ್ಛಾಶಕ್ತಿಯೊಂದೇ ಅವರ ಬಂಡವಾಳವಾಗಿತ್ತು. ಕಡುಬಡತನದಲ್ಲೂ ಅಸಾಧಾರಣವಾದ ಸಾಧನೆ ಮಾಡಿದರು. ಯಾರ ಮುಂದೂ ಕೈಚಾಚದೆ, ಕಡೆತನಕ ಬಡತನದಲ್ಲೇ ಬದುಕಿದರು. `ಅನಂತ ಕೀಬೋರ್ಡ್' ಕನ್ನಡ ನಾಡಿಗೆ ಒಂದು ಅತ್ಯಮೂಲ್ಯವಾದ ಕೊಡುಗೆ. ಕನ್ನಡ ಶೀಘ್ರಲಿಪಿ ಹಾಗೂ ಕನ್ನಡ ಟೈಪ್‌ರೈಟರ್‌ನ್ನು ಕಂಡುಹಿಡಿದ ಸುಬ್ಬರಾಯರ ಸಾಧನೆಯನ್ನು ಸರ್ಕಾರವಾಗಲೀ ಸಮಾಜವಾಗಲೀ ಗುರುತಿಸಲಿಲ್ಲ. ಸೂಕ್ತವಾಗಿ ಗೌರವಿಸಲಿಲ್ಲ. ಕನ್ನಡಿಗರ ನಿರಭಿಮಾನಕ್ಕೆ ಇದೊಂದು ನಿದರ್ಶನ. ಕೀ ಬೋರ್ಡ್ ಕ್ಯಾರಿಯೇಜ್, ಶಿಫ್ಟ್ ಕೀ ಮುಂತಾದವು ಟೈಪ್‌ರೈಟರ್‌ನ ಕೆಲವು ಬಿಡಿ ಭಾಗಗಳು. ಇವುಗಳ ಸಂಯೋಜನೆ, ಕೆಲಸ ಮುಂತಾದವೆಲ್ಲ ತುಂಬಾ ವೈಜ್ಞಾನಿಕವಾಗಿವೆ. ಕೇವಲ ಒಂದು ವಾರ ಟೈಪಿಂಗ್ ತರಗತಿಗೆ ಹಾಜರಾದರೆ, ಬೆರಗುಗೊಳಿಸುವ ಟೈಪ್‌ರೈಟರ್‌ನ ಕಾರ್ಯ ವಿಧಾನವನ್ನು ಮನಗಾಣಬಹುದು. ಟೈಪಿಂಗ್‌ನಲ್ಲಿ ತಾನೇ ತಾನಾಗಿ ಆಸಕ್ತಿ ಬೆಳೆಯುತ್ತದೆ. ಟೈಪ್‌ರೈಟರ್‌ನ ಕೀಬೋರ್ಡ್‌ನಲ್ಲಿ ಅಕ್ಷರಗಳು ಕ್ರಮಬದ್ಧವಾಗಿಲ್ಲ. ಎಡಗೈನ ನಾಲ್ಕು ಬೆರಳುಗಳಿಗೂ, ಬಲಗೈನ ನಾಲ್ಕು ಬೆರಳುಗಳಿಗೂ ನಿರ್ದಿಷ್ಟವಾದ ಅಕ್ಷರಗಳ ಸಂಬಂಧವನ್ನು ಕಲ್ಪಿಸಲಾಗಿದೆ. ಹೆಬ್ಬೆರಳಿನಿಂದ ಸ್ಪೇಸ್ ಬಾರ್ ಒತ್ತಬೇಕು. ಟೈಪ್ ಮಾಡಬೇಕಾದ ವಿಷಯದ ಪ್ರತಿಯನ್ನು ಮೇಜಿನ ಮೇಲೆ ನಮ್ಮ ಎಡಭಾಗದಲ್ಲಿ ಇಟ್ಟುಕೊಂಡು, ಅದನ್ನು ನೋಡುತ್ತಾ ಟೈಪ್ ಮಾಡಬೇಕು. ಕೀ ಬೋರ್ಡ್‌ನ್ನು ನೋಡಬಾರದು. ಎಲ್ಲ ಬೆರಳುಗಳೂ ನಿರ್ದಿಷ್ಟವಾಗಿ ಸಂಬಂಧಿಸಿದ ಅಕ್ಷರಗಳ ಕೀಯ ಮೇಲೆ ತಾವಾಗಿಯೇ ಹೋಗುತ್ತವೆ. ಇದು ಟೈಪ್‌ರೈಟರ್‌ನ ಅತ್ಯಂತ ಅದ್ಭುತವಾದ ಕಾರ್ಯ ವಿಧಾನ. ಟೈಪ್‌ರೈಟರ್‌ನ ಆವಿಷ್ಕಾರವಾಗಿ ಸುಮಾರು ಒಂದೂವರೆ ಶತಮಾನ ಕಳೆದರೂ, ಕೀಬೋರ್ಡ್ ವಿನ್ಯಾಸ ಮತ್ತು ಟೈಪಿಂಗ್ ವಿಧಾನ ಎಳ್ಳಷ್ಟೂ ಬದಲಾಗಿಲ್ಲ. ಟೈಪ್‌ರೈಟರ್‌ನ ಮೂಲತತ್ವ ಮತ್ತು ಕಾರ್ಯ ವಿಧಾನವು ಬದಲಾವಣೆಗೆ ಅವಕಾಶ ಇಲ್ಲದಷ್ಟು ಪರಿಪೂರ್ಣವಾಗಿದೆ ಎನ್ನುವುದು ಪ್ರಮುಖವಾಗಿ ಗಮನಿಸಬೇಕಾದ ಸಂಗತಿ. 1980ರ ಸುಮಾರಿಗೆ ಕಂಪ್ಯೂಟರ್ ಬಳಕೆ ಬರುವವರೆಗೂ, ಟೈಪ್‌ರೈಟರ್ ತನ್ನದೇ ಪ್ರಾಮುಖ್ಯತೆಯನ್ನು ಉಳಿಸಿಕೊಂಡಿತ್ತು. ಟೈಪ್‌ರೈಟರ್‌ನ ಸ್ಥಾನವನ್ನು ಕಂಪ್ಯೂಟರ್ ಆಕ್ರಮಿಸಿದ ಮೇಲೆ, ಅದರ ಪ್ರಾಮುಖ್ಯತೆ ಕುಂಠಿತವಾಗತೊಡಗಿತು. ಕ್ರಮೇಣ ಟೈಪ್‌ರೈಟರ್‌ಗಳು ಮೂಲೆಗುಂಪಾದವು. ಏಪ್ರಿಲ್ 2011ರಲ್ಲಿ ಮುಂಬೈನ ಗೋದ್ರೇಜ್ ಮತ್ತು ಬಾಯ್ಸ ಕಂಪೆನಿಗಳಲ್ಲಿ ಟೈಪ್‌ರೈಟರ್‌ನ ತಯಾರಿಕೆಯನ್ನು ನಿಲ್ಲಿಸಲಾಯಿತು. 20.11.2012 ರಂದು ಇಂಗ್ಲೆಂಡಿನ ನಾರ್ತ್ ವೇಲ್ಸ್ ಕಂಪೆನಿಯಲ್ಲಿ ಕಡೆಯದಾದ ಟೈಪ್‌ರೈಟರ್‌ನ್ನು ತಯಾರಿಸಿ, ಒಂದು ಮ್ಯೂಜಿಯಂಗೆ ನೀಡಲಾಯಿತು. ಕಂಪ್ಯೂಟರ್ ಇದ್ದ ಮೇಲೆ ಟೈಪಿಂಗ್ ಯಾಕೆ ಬೇಕು ಎಂದು ಟೈಪಿಂಗ್ ಬಗ್ಗೆ ನಿರ್ಲಕ್ಷ್ಯ ಧೋರಣೆ ಸಾಮಾನ್ಯವಾಗಿದೆ. ಇದೊಂದು ತಪ್ಪು ಗ್ರಹಿಕೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಭುಜನೋವು, ತಲೆನೋವು, ಆಯಾಸ ಎಂದು ಗೊಣಗುತ್ತಿರುತ್ತಾರೆ. ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ಒಂದೊಂದೇ ಅಕ್ಷರ ನೋಡಿಕೊಂಡು, ಒಂದೇ ಬೆರಳಿನಲ್ಲಿ ಟೈಪ್ ಮಾಡುವುದರಿಂದ ಬಹಳ ತಪ್ಪುಗಳಾಗುತ್ತವೆ. ತಪ್ಪುಗಳನ್ನು ಸರಿಪಡಿಸಲು ಹೆಚ್ಚು ಸಮಯ ಹಾಗೂ ಶ್ರಮ. ಟೈಪಿಂಗ್ ನಿಯಮಗಳನ್ನು ಅನುಸರಿಸಿದರೆ ಈ ರೀತಿ ತೊಂದರೆಗಳಾಗುವುದಿಲ್ಲ. ಶರೀರ ಹಾಗೂ ಮನಸ್ಸಿಗೆ ದಣಿವಾಗುವುದಿಲ್ಲ. ಕಂಪ್ಯೂಟರ್ ನಿರ್ವಹಣೆಗೆ ಟೈಪಿಂಗ್ ಮೂಲಭೂತ ಅವಶ್ಯಕತೆಯಾಗಿದೆ. ಕಂಪ್ಯೂಟರ್ ಮೂಲಕವೇ ಟೈಪಿಂಗ್ ಕಲಿಯಬಹುದು. ಏನೇ ಆದರೂ ಟೈಪಿಂಗ್‌ನ್ನು ಟೈಪ್‌ರೈಟರ್‌ನಲ್ಲೇ ಕಲಿಯುವುದು ಹೆಚ್ಚು ಸೂಕ್ತ. ಟೈಪಿಂಗ್ ಕಲಿಯುವುದರಿಂದ ಭಾಷೆ ಉತ್ತಮಗೊಳ್ಳುತ್ತದೆ. ಶಾಲೆ ಕಾಲೇಜುಗಳಲ್ಲಿ ಹೇಳಿಕೊಡದ ಅನೇಕ ವಿಷಯಗಳನ್ನು ಟೈಪಿಂಗ್ ಕ್ಲಾಸಿನಲ್ಲಿ ಕಲಿಯಬಹುದು. ಯಾರಿಗೇ ಆಗಲಿ, ಟೈಪಿಂಗ್ ಪ್ರಾಥಮಿಕ ಹಾಗೂ ಅತ್ಯಗತ್ಯವಾದ ಶಿಕ್ಷಣ ಎನ್ನುವುದರಲ್ಲಿ ಸಂದೇಹವಿಲ್ಲ. ಏಳು ಅಥವಾ ಎಂಟನೇ ತರಗತಿಯಲ್ಲೇ ಟೈಪಿಂಗ್ ಕಲಿಯುವುದು ಒಳ್ಳೆಯದು. ಇಂಗ್ಲಿಷ್ ಜೂನಿಯರ್ ನಂತರ ಸೀನಿಯರ್ ಮತ್ತು ಕನ್ನಡ ಜೂನಿಯರ್ ಒಟ್ಟಿಗೆ ಮಾಡುವುದರಿಂದ ಸಮಯ ಉಳಿತಾಯವಾಗುತ್ತದೆ. ಟೈಪ್ ಮಾಡುವಾಗ ಕೈಬೆರಳುಗಳಿಂದ ಕೀಗಳನ್ನು ಮೃದುವಾಗಿ ಒತ್ತಬೇಕು. ತಪ್ಪಿಲ್ಲದಂತೆ ನಿಧಾನವಾಗಿ ಟೈಪ್ ಮಾಡುವುದು ಮುಖ್ಯ. ನಂತರ ಟೈಪಿಂಗ್‌ನ ವೇಗ ತಾನಾಗಿಯೇ ಸಿದ್ಧಿಸುತ್ತದೆ. ಇಂಗ್ಲಿಷ್, ಕನ್ನಡ, ಹಿಂದಿ ಟೈಪಿಂಗ್ ಮತ್ತು ಶೀಘ್ರಲಿಪಿಯನ್ನು ಕಲಿತವರಿಗೆ ಸಾಕಷ್ಟು ಉದ್ಯೋಗಾವಕಾಶಗಳಿವೆ. ಸರ್ಕಾರಿ ಹಾಗೂ ಖಾಸಗಿ ವಲಯದ ನೌಕರಿಗಳಲ್ಲಿ ಟೈಪಿಂಗ್‌ನಲ್ಲಿ ಪರಿಣತಿ ಇರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುತ್ತಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.