ಪ್ರಶ್ನೆ- ಉತ್ತರ ಉಮೇಶ್ ಕೆ.ಆರ್., ಉಜಿರೆ ನಾನು ಬಿ.ಎ ಪತ್ರಿಕೋದ್ಯಮ ವಿಷಯದಲ್ಲಿ ಪದವಿ ಮಾಡುತ್ತಿದ್ದು, ನಾಲ್ಕನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಪದವಿ ನಂತರ ಎಂ.ಎಸ್.ಡಬ್ಲ್ಯು ಮಾಡಬೇಕು ಎಂದುಕೊಂಡಿದ್ದೇನೆ. ಇದಕ್ಕೆ ಸ್ವಲ್ಪ ಹಣಕಾಸಿನ ತೊಂದರೆ ಇದೆ. ಇದನ್ನು ಮುಗಿಸಲು ಬ್ಯಾಂಕ್ ಲೋನ್ ಸೂಕ್ತವೇ? ಈ ಕೋರ್ಸನ್ನು ಮುಗಿಸಿದ ತಕ್ಷಣ ಯಾವ ಕಂಪೆನಿಗಳಲ್ಲಿ ಕೆಲಸ ಸಿಗಬಹುದು? ನನಗೆ ಕಂಪ್ಯೂಟರ್ ಜ್ಞಾನ ಕಡಿಮೆ ಇದೆ. ಇದಕ್ಕೆ ಬೇರೆ ಯಾವುದಾದರೂ ಕೋರ್ಸ್ ಮಾಡಬೇಕೇ? ನಾನು ಜೀವನದಲ್ಲಿ ಬೇಗ ಸೆಟಲ್ ಆಗಬೇಕು, ಸಮಾಜ ಮೆಚ್ಚುವ ರೀತಿಯಲ್ಲಿ ಬೆಳೆದು ಹೆಸರು ಮಾಡಬೇಕು ಎಂದುಕೊಂಡಿದ್ದೇನೆ. ಹಾಗಾಗಿ ಸ್ವಲ್ಪ ಗೊಂದಲದಲ್ಲಿದ್ದೇನೆ. ಪರಿಹಾರ ತಿಳಿಸಿ. ಸಮಾಜ ಮೆಚ್ಚುವ ರೀತಿಯಲ್ಲಿ ಬೆಳೆದು ಹೆಸರು ಮಾಡಬೇಕು ಎನ್ನುವ ನಿಮ್ಮ ಅಭಿಲಾಷೆಗೆ ಅಭಿನಂದನೆಗಳು. ನೀವು ಬೇಗ ಸೆಟಲ್ ಆಗಬೇಕೆಂದರೆ ಕೇವಲ ಪದವಿ ಸಾಕು. ಎಂ.ಎಸ್.ಡಬ್ಲ್ಯು.ದಿಂದ ಅವಕಾಶಗಳು ಹೆಚ್ಚುತ್ತವೆ. ಸಾಲ ಸಿಗುವಂತಿದ್ದಲ್ಲಿ ಪಡೆದು ಓದಬಹುದು. ಕಂಪ್ಯೂಟರ್ ಜ್ಞಾನ ಹೆಚ್ಚಿಸಿಕೊಳ್ಳಲು ಇನ್ನೂ ಅವಕಾಶವಿದೆ. ಆದರೆ ಇದರಿಂದ ನಿಮ್ಮ ಉದ್ಯೋಗದ ರಂಗವೂ ಬದಲಾಗಬಹುದು. ಆದ್ದರಿಂದ ನೀವು ಕಂಪ್ಯೂಟರ್ ಕಲಿಕೆ ಜೊತೆಗೆ ಪದವಿ ಮುಗಿಸಿಕೊಳ್ಳಿ. ಆ ವೇಳೆಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವುದು ಸುಲಭವಾಗುತ್ತದೆ. ರಶ್ಮಿ, ಮೂಗ್ತಿಹಳ್ಳಿ, ಚಿಕ್ಕಮಗಳೂರು ನಾನು ಕುವೆಂಪು ವಿ.ವಿ.ಯಿಂದ 2011-12ರಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ತೃತೀಯ ಸೆಮಿಸ್ಟರ್ ಓದುವಾಗಲೇ ನೆಟ್ ಪರೀಕ್ಷೆ ತೆಗೆದುಕೊಂಡು ಪ್ರಥಮ ಪ್ರಯತ್ನದಲ್ಲಿ ಪಾಸ್ ಮಾಡಿದ್ದೇನೆ. ಆದರೆ ಅದಕ್ಕೆ ಅರ್ಜಿ ಸಲ್ಲಿಸುವಾಗ ನನ್ನ ತಂದೆಯ ಹೆಸರು ಭಾಸ್ಕರ್ ಎಂಬಲ್ಲಿ ಸ್ಪೆಲ್ಲಿಂಗ್ ವ್ಯತ್ಯಾಸವಾಗಿ ಒಂದು ಎ ಅಕ್ಷರ ಹೆಚ್ಚಾಗಿ ಸೇರಿದೆ. ನಾನು ಡೌನ್ ಲೋಡ್ ಮಾಡಿಕೊಂಡಿರುವ ಸರ್ಟಿಫಿಕೇಟ್‌ನಲ್ಲೂ ಹೀಗೇ ಇದೆ. ಇದನ್ನು ಸರಿಪಡಿಸಿಕೊಳ್ಳುವ ಮಾರ್ಗೋಪಾಯವೇನು? ನಾವು ಆರ್ಥಿಕವಾಗಿ ಅಷ್ಟೇನೂ ಸುಭದ್ರರಲ್ಲ. ಮುಂದಿನ ಉದ್ಯೋಗಾವಕಾಶಗಳ ಬಗ್ಗೆ ತಿಳಿಸಿಕೊಡಿ. ನೀವು ಓದುತ್ತಿರುವಾಗಲೇ ಪ್ರಥಮ ಪ್ರಯತ್ನದಲ್ಲೇ ನೆಟ್ ಪರೀಕ್ಷೆ ಪಾಸು ಮಾಡಿಕೊಂಡಿರುವುದು ಸಂತೋಷದ ಸಂಗತಿ. ಅರ್ಜಿ ಸಲ್ಲಿಸುವಾಗ ತಪ್ಪುಗಳು ಆಗುವುದು ಸಹಜ. ನೀವು ಪರೀಕ್ಷಾಧಿಕಾರಿಗಳಿಗೆ ಈ ಬಗ್ಗೆ ದಾಖಲಾತಿ ಸಮೇತ ವಿವರವಾಗಿ ಪತ್ರ ಬರೆದು, ಆಗಿರುವ ತಪ್ಪನ್ನು ಸರಿಪಡಿಸಿ ಕೊಡುವಂತೆ ಕೇಳಿಕೊಳ್ಳಿ. ಪ್ರಾಯಶಃ ಅವರು ಈ ಬಗ್ಗೆ ಖಚಿತಪಡಿಸಿಕೊಂಡು ನಿಮಗೆ ತಿದ್ದುಪಡಿ ಮಾಡಿಕೊಡಬಹುದು. ಇಲ್ಲವಾದರೆ ನೀವು ಉದ್ಯೋಗ ನೀಡುವವರಿಗೆ ಈ ಬಗ್ಗೆ ವಿವರಿಸಿ, ಅವರ ಒಪ್ಪಿಗೆ ಪಡೆಯಬಹುದು. ಯು.ಜಿ.ಸಿ. ಸ್ಕೇಲ್ ಪಡೆಯುವ ನೌಕರಿಯಾದರೆ ಕೂಲಂಕಷ ಪರಿಶೀಲಿಸಿ ನಡೆಯುವ ಸಾಧ್ಯತೆಯೂ ಇರಬಹುದು. ಯಾವುದಕ್ಕೂ ಈಗಿನಿಂದಲೇ ಎಸ್ಸೆಸ್ಸೆಲ್ಸಿಯಿಂದ ಮೊದಲುಗೊಂಡು ಎಲ್ಲ ದಾಖಲೆಗಳನ್ನೂ ಸಂಗ್ರಹಿಸಿ, ನೀವು ಅದೇ ವ್ಯಕ್ತಿ ಎಂದು ಸಾಬೀತು ಮಾಡಬೇಕಾಗುತ್ತದೆ. ಅಶ್ವಿನಿ ಎ.ಎಂ., ಮದ್ದೂರು ನಾನು ದ್ವಿತೀಯ ಬಿ.ಎ ವ್ಯಾಸಂಗ ಮಾಡುತ್ತಿದ್ದಾಗ ಅಂಚೆ ಇಲಾಖೆಯಲ್ಲಿ ಬ್ರಾಂಚ್ ಪೋಸ್ಟ್ ಮಾಸ್ಟರ್ ಹುದ್ದೆ ದೊರಕಿ ಈಗ ಅಲ್ಲಿ ಕೆಲಸ ಮಾಡುತ್ತಿದ್ದೇನೆ. ಈಗ ಮುಂದಿನ ವರ್ಷಗಳ ಬಿ.ಎ. ದೂರ ಶಿಕ್ಷಣದಲ್ಲಿ ಕಲಿಯಬಹುದೇ? ಮುಂದೆ ಉದ್ಯೋಗ ಅವಕಾಶಗಳು ಇವೆಯೇ? ನೀವು ಪ್ರಥಮ ಬಿ.ಎ ಮಾಡಿಕೊಂಡ ಸ್ಕೀಮಿಗೆ ಹೊಂದಿಕೊಂಡ ಸ್ಕೀಮ್ ಮುಕ್ತ ವಿ.ವಿ.ಯಲ್ಲಿ ಇದ್ದಲ್ಲಿ ನಿಮಗೆ ಅವಕಾಶ ಸಿಗಬಹುದು. ಯಾವುದಕ್ಕೂ ವಿ.ವಿ ಕಚೇರಿ ಅಥವಾ ಸಲಹಾ ಕೇಂದ್ರದಿಂದ ಸರಿಯಾದ ಮಾಹಿತಿ ಪಡೆದುಕೊಳ್ಳಿ. ನೀವು ಅಂಚೆ ಇಲಾಖೆಯಲ್ಲೇ ಮುಂದುವರಿಯ ಬಯಸಿದರೆ ಬಿ.ಎ. ಜೊತೆಗೆ ಇಲಾಖಾ ಪರೀಕ್ಷೆಗಳಲ್ಲಿ ತೇರ್ಗಡೆ ಹೊಂದಬೇಕಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.