ಭಾಷಾ ಸಮಸ್ಯೆ ಪರಿಹಾರ ಏನು? ನಾನು ಮೂರನೇ ತರಗತಿಯಲ್ಲಿದ್ದ ದಿನಗಳು. ಆಗ ಇಂತಿಂಥಾ ಶಿಕ್ಷಕರು ಇಂತಿಂಥವೇ ಪಾಠಗಳನ್ನು ಮಾಡಬೇಕು ಎಂಬ ಕಡ್ಡಾಯ ಇರಲಿಲ್ಲವೇನೋ. ನಮ್ಮ ಒಬ್ಬರು ಶಿಕ್ಷಕರಂತೂ ಸ್ವತಃ ಹಿಂದಿ ಪಾಠ ಮಾಡುವವರಾದರೂ ಗಣಿತ, ಸಮಾಜ, ವಿಜ್ಞಾನ ಎಲ್ಲ ವಿಷಯಗಳನ್ನೂ ಬೋಧಿಸುತ್ತಿದ್ದರು. ಸಾಲದ್ದಕ್ಕೆ `ಸಮಾಜ ಸೇವಾ ಕಾರ್ಯ' ಎಂಬ ಅವಧಿಯಲ್ಲಿ ಶಾಲಾ ಹೂತೋಟಕ್ಕೆ ಹಿರಿಯ ಮಕ್ಕಳಾದ 6-7ನೇ ತರಗತಿಯವರಿಂದ ನೀರು ಹಾಕಿಸುವ ಜವಾಬ್ದಾರಿಯೂ ಅವರದೇ. ಅವರು ಶಾಲೆಯಲ್ಲಿ ಇದ್ದಷ್ಟೂ ಹೊತ್ತು ಏನೆಲ್ಲ ಕೆಲಸಗಳನ್ನು ಮಾಡುತ್ತಿದ್ದರು ಯಾವುದನ್ನು ಇಲ್ಲ ಎಂದಿಲ್ಲ. ಇಷ್ಟು ಸಾಲದೆಂಬಂತೆ ಯಾರಾದರೂ ಶಿಕ್ಷಕರು ಗೈರು ಹಾಜರಾದರೆ ಅವರ ತರಗತಿಗಳನ್ನು ನಿಭಾಯಿಸುವ ಜವಾಬ್ದಾರಿಯೂ ಇವರದೇ. ನಮ್ಮ ತರಗತಿಗೂ ಈ ನೆಪದಲ್ಲಿ ಅವರು ವಾರಕ್ಕೊಮ್ಮೆಯಾದರೂ ಬರುತ್ತಿದ್ದರು. ಮೊದಲು ಒಂದು ಕಥೆ ಹೇಳಿ ಎಲ್ಲರನ್ನೂ ಹುಮ್ಮಸ್ಸಿಗೆಬ್ಬಿಸಿ, `ಮಕ್ಕಳೇ, ಈಗ ಎಲ್ಲರೂ ರಫ್ ನೋಟು ತೆಗೆಯಿರಿ. ಕಾಗುಣಿತ ಬರೆಯಬೇಕು, `ಕಕಾಕಿಕೀ' ಇಂದ `ಳಳಾಳಿಳೀ'ವರೆಗೆ ಎನ್ನುತ್ತಿದ್ದರು! ಕಥೆಯಿಂದ ಹುಟ್ಟಿಕೊಂಡ ಹುರುಪು ಇನ್ನೂ ಉಳಿದಿರುತ್ತಿತ್ತಾದ್ದರಿಂದ ಎಲ್ಲರೂ ಸುಮ್ಮನೇ ಬರೆಯಲು ಅನುವಾಗುತ್ತಿದ್ದರು. ನಾನು ಮೊದಲು ಪೂರ್ಣಗೊಳಿಸಬೇಕು, ತಾನು ಮೊದಲು ಎಂಬ ಸ್ಪರ್ಧೆ ನಮ್ಮ ನಮ್ಮಳಗೇ. ಎಲ್ಲೋ ಕೆಲವು ಸಂದರ್ಭದಲ್ಲಿ ಮಾತ್ರ ಬರೆಯಲು ಸೋಮಾರಿತನ ಕಾಡುತ್ತಿತ್ತೇ ವಿನಾ, ಅದು ತೊಂದರೆಯಾಗುವ ಮಟ್ಟದಲ್ಲಿ ಇರುತ್ತಿರಲಿಲ್ಲ. ಇಂದು ಯೋಚಿಸಿದರೆ ಆ ಶಿಕ್ಷಕರು ಅಷ್ಟರ ಮಟ್ಟಿಗೆ ನಮ್ಮನ್ನು ಬರೆಯುವಂತೆ ಹುರಿದುಂಬಿಸಿದ್ದರಿಂದಲೇ ಇಂದು ನಾವು ಅಡೆತಡೆ ಇಲ್ಲದೇ ಬರೆಯುತ್ತಿದ್ದೇವೆ ಎನಿಸುತ್ತದೆ. ಇಂದಿನ ಒಟ್ಟೂ ಶಿಕ್ಷಣ ಕ್ರ ಬದಲಾಗಿದೆ. ನಿಜ, ನಮಗೆ ಹಿಂದೆ ಇದ್ದಂತಹ ಕಟ್ಟುನಿಟ್ಟು, ಶಿಕ್ಷೆಯ ಭಯ ಇಂದಿಲ್ಲ. ಭಯದ ವಾತಾವರಣದಲ್ಲಿ ಕಲಿಕೆ ಸಮರ್ಪಕವಾಗಿ ಆಗುವುದಿಲ್ಲ ಎಂಬೆಲ್ಲ ಹೊಸ ಅಧ್ಯಯನ ವರದಿಗಳು ಒಟ್ಟೂ ವ್ಯವಸ್ಥೆಯನ್ನೇ ಬದಲಿಸಿ ಬಿಟ್ಟಿವೆ. ಶಿಕ್ಷೆ ಬೇಡ, ಒಪ್ಪಿಕೊಳ್ಳಬೇಕಾದದ್ದೇ. ಆದರೆ ಶಿಕ್ಷಕರೆಂದರೆ ಅಪ್ಪ ಅಮ್ಮನಿಗಿಂತಲೂ ಹೆಚ್ಚಿನ ಅಕ್ಕರಾಸ್ಥೆಯಿಂದ ಕಾಣುವ ಮಕ್ಕಳಿಗೆ ಪ್ರೀತಿಯಿಂದಲೇ ಹೇಳಿಕೊಡುವುದು ಸಾಧ್ಯವಾಗಬೇಕಲ್ಲವೇ? ಪ್ರೀತಿಯಿದ್ದಲ್ಲಿ ಕಲಿಕಾ ಸಾಮರ್ಥ್ಯ, ಅದರಂತೆ ಬೋಧನಾ ಕೌಶಲಗಳು ಹೆಚ್ಚಾಗಿರಬೇಕಲ್ಲವೇ? ಪ್ರಸ್ತುತ ನನ್ನ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯವನ್ನು ನೋಡುವಾಗ ಯಾಕೋ ತಳಹದಿಯೇ ಸರಿಯಿಲ್ಲ ಎಂಬ ದುಗುಡ ಆವರಿಸುತ್ತದೆ. ಮುಂದೇನು ಎಂಬ ಆತಂಕ ಕಾಡುತ್ತದೆ. ಸಮೂಹ ಸಂವಹನದ ವಿದ್ಯಾರ್ಥಿಗಳಲ್ಲಿ ಬೆರಳೆಣಿಕೆಯ ಕೆಲವರನ್ನು ಬಿಟ್ಟರೆ, ಹತ್ತು ವಾಕ್ಯಗಳನ್ನೂ ಅಚ್ಚುಕಟ್ಟಾಗಿ ಬರೆಯಲಾರದವರು ಇದ್ದಾರೆ. ಇದನ್ನು ನೋಡಿದರೆ ಇವರು ಮುಂದೆ ಸಂವಹನ ಕ್ಷೇತ್ರದಲ್ಲಿ ಅದ್ಯಾವ ತರದ ಅಡಾವುಡಿಗಳನ್ನು ಸೃಷ್ಟಿಸಿಯಾರೋ ಎಂಬ ಭಯ ಕಾಡುತ್ತದೆ. ಕೆಲವು ಪತ್ರಿಕೆಗಳನ್ನು ಗಮನಿಸಿದರೆ ಭಾಷೆಯ ಕುರಿತ ಅಜ್ಞಾನದಿಂದಲೋ ಅಥವಾ `ನಾನು ಬರೆಯುವುದೇ ಹೀಗೆ, ನನ್ನ ಕನ್ನಡವೇ ಹೀಗೆ, ಭಾಷೆ ನಿಂತ ನೀರಾಗಬಾರದು, ಬದಲಾವಣೆಗೆ ಒಡ್ಡಿಕೊಳ್ಳುವುದು ಭಾಷೆಯ ಹಕ್ಕು' ಎಂಬ ಉಡಾಫೆಯಿಂದಲೋ ತಮಗೆ ತೋಚಿದಂತೆ ಭಾಷೆಯನ್ನು ಬದಲಾಯಿಸಿಕೊಂಡಂತೆ ಇರುತ್ತದೆ. ಭಾಷೆ ಬದಲಾಗಬೇಕು ನಿಜ, ಆದರೆ ಆ ಬದಲಾವಣೆ ಭಾಷೆಯನ್ನು ಮತ್ತಷ್ಟು ಸುಂದರ ಆಗಿಸುವ ನಿಟ್ಟಿನಲ್ಲಿ ಇರಬೇಕೇ ವಿನಾ ಅಶುದ್ಧ ಮಾಡಬಾರದು. ತೀರಾ ತಲೆಬರಹದಲ್ಲೇ ತಪ್ಪಿರುವುದನ್ನು ಕಂಡಾಗ, ಮುಂದೆ ಈ ನಮ್ಮ ವಿದ್ಯಾರ್ಥಿಗಳೂ ಇದೇ ತರಹದ ತಪ್ಪುಗಳನ್ನು ಮಾಡುತ್ತಾ ಈ ಪರಂಪರೆಯನ್ನು ಮುಂದುವರಿಸುವರೇನೋ ಎನಿಸುತ್ತದೆ. ಪತ್ರಿಕೆಯೆಂದರೆ ಅವಸರದ ಸಾಹಿತ್ಯ ನಿಜ. ಹಾಗೆಂದ ಮಾತ್ರಕ್ಕೆ ತಪ್ಪುಗಳಾಗುವುದಕ್ಕೆ ಅದು ಸಮರ್ಥನೆಯಾಗುವುದಿಲ್ಲ. ವಿಷಾದದ ಸಂಗತಿಯೆಂದರೆ ಈ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆಯ ಕೊರತೆಯಿಲ್ಲ. ಹೊಸ ಯೋಚನೆ, ಹೊಸ ಕಲ್ಪನೆಯನ್ನು ಅವರವರ ವಯಸ್ಸಿಗೆ ತಕ್ಕಂತೆ ಅಭಿವ್ಯಕ್ತಪಡಿಸುತ್ತಾರೆ. ಆದರೆ ಮಾತಿನಲ್ಲಿ ವ್ಯಕ್ತಪಡಿಸಿದಷ್ಟು ಹಿತವಾಗಿ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಲಾರರು. ಅದಕ್ಕೆ ಕಾರಣ, ಭಾಷಾ ಕೌಶಲದ ಕೊರತೆ. `ಮೇಡಂ, ಕನ್ನಡ ನಮಗೆ ಹೇಳ್ಕೊಟ್ಟಿದ್ದೇ ಹೀಗೆ. ನಮ್ಮ ಟೀಚರು ತಾವು ಹೇಳಿದಂತೆ ಬರೆಯಲಿಲ್ಲ ಅಂದ್ರೆ ನಮಗೆ ಮಾರ್ಕ್ಸನ್ನೇ ಕೊಡ್ತಾ ಇರಲಿಲ್ಲ. ಇಲ್ಲಾ ತುಂಬಾ ಗದರಿಸೋರು. ತಿದ್ಕೊಳ್ಳಬೇಕು ಅಂತ ಆಸೆ ಇದೆ. ಹೇಳ್ಕೊಡಿ' ಇದು ವಿದ್ಯಾರ್ಥಿನಿಯೊಬ್ಬಳ ಅಳಲು. `ನಮಗೆ ಇಂಗ್ಲಿಷ್ ಏನೇನೂ ಬರಲ್ಲ ಮೇಡಂ. ನಮ್ಮ ಟೀಚರ್ ಪರೀಕ್ಷೆಗೆಷ್ಟು ಬರುತ್ತೋ ಅಷ್ಟನ್ನ ಬಾಯಿಪಾಠ ಮಾಡಿಸ್ತಿದ್ದರು. ನಾವು ಅದನ್ನ ಮಾತ್ರ ಬರೀತಿದ್ವಿ. ಏನಾದ್ರೂ ಕೇಳಕ್ಕೆ ಹೋದ್ರೆ `ಸುಮ್ನಿರಿ ನಿಮಗೆ ಇಂಗ್ಲಿಷ್ ಬರಲ್ಲ, ಅದು ಸುಲಭವಾಗಿ ಕಲಿಯೋ ಭಾಷೆ ಅಲ್ಲ. ಸುಮ್ನೆ ಹೇಳಿದಷ್ಟು ಬರ‌್ಕೊಳ್ಳಿ ಸಾಕು. ಇಂಗ್ಲಿಷ್ ಅಂದರೆ ಕಬ್ಬಿಣದ ಕಡ್ಲೆ, ನಿಮ್ಮಂಥೋರಿಗಲ್ಲ ಅದು' ಅಂದುಬಿಡೋರು ಮೇಡಂ. ಅದಕ್ಕೇ ಇಂಗ್ಲಿಷಂದ್ರೆ ಭಯ' ಎಂದು ಅಲವತ್ತುಕೊಳ್ಳುತ್ತಾಳೆ ಮತ್ತೊಬ್ಬಳು. ಪದವಿ ಅಥವಾ ಸ್ನಾತಕೋತ್ತರ ಹಂತದಲ್ಲಿ ವಿದ್ಯಾರ್ಥಿಗಳ ಕಾಗುಣಿತ ತಿದ್ದಿಕೊಂಡು ಕುಳಿತುಕೊಳ್ಳುವುದು ಸಾಧ್ಯವಾಗುವ ಮಾತಲ್ಲ ಅಥವಾ ತೀರಾ ಆರಂಭಿಕ ಹಂತದ ವ್ಯಾಕರಣ, ವಾಕ್ಯ ರಚನೆಗಳನ್ನು ತಿಳಿಸಿಕೊಡುವುದಕ್ಕೆ ಸಮಯಾವಕಾಶವೂ ಇರುವುದಿಲ್ಲ. ಹಾಗಿದ್ದರೆ ಇವರ ಭವಿಷ್ಯದ ಕಥೆಯೇನು? ಗ್ರಾಮೀಣ ಹಿನ್ನೆಲೆಯಿಂದ ಬಂದ, ಬರುತ್ತಿರುವ ಎಲ್ಲ ವಿದ್ಯಾರ್ಥಿಗಳ ಸಮಸ್ಯೆ ಇದು. ತಂತ್ರಜ್ಞಾನದಲ್ಲಿ ನಾವೆಷ್ಟೇ ಕೌಶಲ ಪಡೆದಿದ್ದರೂ ಮೂಲಭೂತವಾಗಿ ಅಗತ್ಯವಿರುವ ಭಾಷಾ ಕೌಶಲಗಳ ಬಗ್ಗೆ ಯಾರೂ ನಿರ್ಲಕ್ಷ್ಯ ತೋರುವಂತಿಲ್ಲ. ಅದರಲ್ಲೂ ಭಾಷಾ ಅಧ್ಯಯನದಲ್ಲಿ ತೊಡಗಿಸಿ ಕೊಂಡಿರುವವರು ಅಥವಾ ಸಂವಹನ ವಿದ್ಯಾರ್ಥಿಗಳು ಈ ಹಂತದಲ್ಲಿ ಭಾಷೆಯನ್ನು ತಿದ್ದಿಕೊಳ್ಳುವ ಬಗೆ ಹೇಗೆ? ಭಾಷೆ ನಮ್ಮ ಬದುಕಿನ ಅವಿಭಾಜ್ಯ ಅಂಗ. ಮಾನವರನ್ನು ಇತರ ಪ್ರಾಣಿಗಳಿಂದ ಭಿನ್ನವಾಗಿಸಿ ನಿಲ್ಲಿಸಿದ್ದೇ ಆತನ ಭಾಷಾ ಸಾಮರ್ಥ್ಯ. ಅಂಥ ಭಾಷೆಯ ಕುರಿತು ಅಕ್ಕರೆ ಹೊಂದುವುದು ಬಹಳ ಮುಖ್ಯ. ನಮ್ಮ ಸಂವಹನ ಕೌಶಲ ಬರಿಯ ಮಾತಿನ ಕೌಶಲಕ್ಕೆ ಸೀಮಿತ ಆಗಬಾರದು. ಬರವಣಿಗೆಯೂ ಮಾತಿನಷ್ಟೇ ಮುಖ್ಯ ಎಂಬುದರ ಅರಿವು ಸ್ವತಃ ವಿದ್ಯಾರ್ಥಿಗಳಿಗೆ ಇರಬೇಕು. ಅದಿಲ್ಲವಾದಲ್ಲಿ ಯಾವುದೇ ಕ್ಷೇತ್ರದಲ್ಲೂ ಯಶಸ್ಸು ಗಳಿಸುವುದು ಕಷ್ಟ. ಉಪನ್ಯಾಸಕರು ಏನು ಮಾಡಬಹುದು? *ಸ್ವ ಕಲಿಕೆಯ ಅಗತ್ಯ ಅಥವಾ ಮಹತ್ವವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಸಿ ಕೊಡಬೇಕು. *ಭಾಷಾ ಕೌಶಲಗಳ ಪ್ರಾಮುಖ್ಯತೆಯನ್ನು ಅರ್ಥ ಮಾಡಿಸಬೇಕು. *ಪತ್ರಿಕೆಗಳನ್ನು ಓದುವ ಮೂಲಕ ಪದ ಸಂಪತ್ತನ್ನು, ವಾಕ್ಯ ರಚನಾ ಕೌಶಲಗಳನ್ನು ಉತ್ತಮಗೊಳಿಸುವ ಬಗ್ಗೆ ಅರಿವು ಮೂಡಿಸಬೇಕು. *ನಿರಂತರವಾದ ಪ್ರೋತ್ಸಾಹ ನೀಡಬೇಕು. *ಟೀಕಿಸದೇ, ಹೆಜ್ಜೆ ಹೆಜ್ಜೆಗೂ ಹಂಗಿಸದೇ ಇರಬೇಕು. *ವಿದ್ಯಾರ್ಥಿಗಳ ಆತ್ಮಸ್ಥೈರ್ಯ ಹೆಚ್ಚಿಸುವ ರೀತಿಯಲ್ಲಿ ಸಹಾಯ ಮಾಡಬೇಕು. ವಿದ್ಯಾರ್ಥಿಗಳೇ ಅರಿಯಿರಿ *ಇಂದಿನ ಸ್ಪರ್ಧಾ ಜಗತ್ತಿನಲ್ಲಿ ತಾಂತ್ರಿಕ ಕೌಶಲಗಳೇ ಮಹತ್ತರ ಪಾತ್ರ ವಹಿಸುವುದು ನಿಜವಾದರೂ ಭಾಷೆಗಳಿಗೆ ಅದರದೇ ಆದ ಸ್ಥಾನವಿದೆ, ಅದನ್ನು ಅಲ್ಲಗಳೆಯುವಂತಿಲ್ಲ. *ದಿನದಲ್ಲಿ ಒಂದು ಗಂಟೆಯನ್ನು ಭಾಷಾ ಕಲಿಕೆಗಾಗಿ, ಭಾಷೆಯನ್ನು ಉತ್ತಮಗೊಳಿಸುವುದಕ್ಕಾಗಿ ಮೀಸಲಿಡಿ. *ಉಪನ್ಯಾಸಕರ ಮಾರ್ಗದರ್ಶನ ಪಡೆಯಿರಿ. *ಎಲ್ಲವನ್ನೂ ಉಪನ್ಯಾಸಕರೇ ಹೇಳಿಕೊಡಲಿ ಎಂದು ಕಾಯದೇ ಸ್ವ ಕಲಿಕೆಯ ಕಡೆಗೆ ಗಮನ ಹರಿಸಿ. *ಯಾವತ್ತೂ ಕಲಿಯದೇ ಇರುವುದಕ್ಕಿಂತ ತಡವಾಗಿಯಾದರೂ ಕಲಿಯುವುದು ಒಳ್ಳೆಯದು ಎಂಬುದನ್ನು ಅರ್ಥ ಮಾಡಿಕೊಳ್ಳಿ. ಸಮಯ ಸಿಕ್ಕಾಗಲೆಲ್ಲ ಉತ್ತಮ ಸಾಹಿತ್ಯ ಓದುವುದನ್ನು ಅಭ್ಯಾಸ ಮಾಡಿಕೊಳ್ಳಿ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.