ಪ್ರಶ್ನೇ - ಉತ್ತರ ಮಹಮದ್ ರಫಿ ನಾನು ಇದೀಗ ಬಿ.ಎಡ್., ತರಬೇತಿ ಪಡೆಯುತ್ತಿದ್ದೇನೆ. ನನಗೆ ಐಪಿಎಸ್ ಪರೀಕ್ಷೆ ಬರೆಯುವ ಆಸೆ. ಆ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ. ನೀವು ಪದವೀಧರರಾದುದರಿಂದ ಯುಪಿಎಸ್‌ಸಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು. ಮೊದಲು ಯುಪಿಎಸ್‌ಸಿ ವೆಬ್‌ಸೈಟ್ ಮೂಲಕ ಈ ಪರೀಕ್ಷೆಯ ಬಗ್ಗೆ ಎಲ್ಲ ಮಾಹಿತಿ ಪಡೆದುಕೊಳ್ಳಿ. ಕೆಲವು ಖಾಸಗಿ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಈ ದಿಸೆಯಲ್ಲಿ ತರಬೇತಿ ನೀಡುತ್ತವೆ. ಅನುಕೂಲ ಇದ್ದಲ್ಲಿ ಉತ್ತಮ ಸಂಸ್ಥೆಯೇ ಎಂದು ಖಚಿತಪಡಿಸಿಕೊಂಡು ಸೇರಿಕೊಳ್ಳಬಹುದು. ಒಟ್ಟಿನಲ್ಲಿ ಮೊದಲ ಹಂತದ ಪರೀಕ್ಷೆಯಲ್ಲಿ, ಇತ್ತೀಚೆಗೆ ಅಳವಡಿಕೆಯಾಗಿರುವ ಬದಲಾವಣೆಗಳನ್ನು ಗಮನಿಸಿ ಪೂರಕ ಸಿದ್ಧತೆಯನ್ನು ಮಾಡಿಕೊಳ್ಳಿ. ನಿಮ್ಮ ದೈಹಿಕ ಸಾಮರ್ಥ್ಯದ ಅಗತ್ಯಗಳ ಬಗ್ಗೆ ಕೂಡ ಗಮನ ಹರಿಸಿ. ಕಿರಣ್ ಎ.ಎಸ್.ಎನ್. ನನಗೆ ಸಿನಿಮಾ ನಿರ್ದೇಶನದ ಬಗ್ಗೆ ತುಂಬಾ ಆಸಕ್ತಿ ಇದೆ. ನಾನು ಪಿಯುಸಿ (ಕಲಾ ವಿಭಾಗ) ಮುಗಿಸಿ, ಪ್ರಸಕ್ತ ಸಾಲಿನಲ್ಲಿ ಬಿ.ಎ. ಮೂರನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ಆದ್ದರಿಂದ ಸಿನಿಮಾ ನಿರ್ದೇಶನ ಕಲಿಯಲು ಬೇಕಾದ ವಿದ್ಯಾರ್ಹತೆ, ಉತ್ತಮ ಕಾಲೇಜು, ಬೇಕಾಗುವ ಹಣ ಎಲ್ಲದರ ಬಗ್ಗೆ ತಿಳಿಸಿ. ಸಿನಿಮಾ ರಂಗಕ್ಕೆ ಬೇಕಾಗುವ ವಿವಿಧ ವೃತ್ತಿಗಳಲ್ಲಿ ತರಬೇತಿ ನೀಡುವ ಅನೇಕ ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳಿವೆ. ಪುಣೆಯಲ್ಲಿ ಬಹಳ ಪ್ರಸಿದ್ಧವಾದ ಸಂಸ್ಥೆ ಇದ್ದು, ಇಂದಿನ ಅನೇಕ ಖ್ಯಾತರು ಅದರಿಂದ ಹೊರ ಬಂದಿದ್ದಾರೆ. ದೆಹಲಿಯ ರಾಷ್ಟ್ರೀಯ ನಾಟಕ ಸಂಸ್ಥೆ, ನಾಟಕಗಳ ಬಗ್ಗೆ ಮುಖ್ಯವಾಗಿ ಕಲಿಸಿದರೂ ಅದರಲ್ಲಿ ಕಲಿತು ಸಿನಿಮಾ ರಂಗಕ್ಕೆ ಬಂದವರು ಹಲವರಿದ್ದಾರೆ. ಇದೇ ರೀತಿ ಅನೇಕ ರಾಜ್ಯ ಸರ್ಕಾರಗಳೂ ಇಂತಹ ಸಂಸ್ಥೆಗಳನ್ನು ನಡೆಸುತ್ತಿವೆ. ಇವುಗಳಲ್ಲಿ ಪ್ರವೇಶ ಪಡೆಯಲು ಅನುಸರಿಸಬೇಕಾದ ಕ್ರಮಗಳ ಬಗ್ಗೆ ವೆಬ್‌ಸೈಟುಗಳ ಮೂಲಕ ಮಾಹಿತಿ ಪಡೆಯಬಹುದು. ಬೆಂಗಳೂರಿನ ಎಸ್.ಜೆ.ಪಿ.ಯಲ್ಲಿ ಸಿನಿಮಾಟೋಗ್ರಫಿ ಡಿಪ್ಲೊಮಾ ಇದೆ. ಅನೇಕ ಖಾಸಗಿ ಸಂಸ್ಥೆಗಳು ಚಿತ್ರ ನಿರ್ದೇಶನ, ನಟನೆ, ರೆಕಾರ್ಡಿಂಗ್, ಎಡಿಟಿಂಗ್ ವಿಷಯಗಳಲ್ಲಿ ತರಬೇತಿ ನೀಡುತ್ತಿವೆ. ಅವುಗಳ ಬಗ್ಗೆ ವಿಚಾರಿಸಿ ತಿಳಿದುಕೊಂಡು ಆಯ್ಕೆ ಮಾಡಿಕೊಳ್ಳಬಹುದು. ಬಹಳಷ್ಟು ಜನ ಸಹಾಯಕ ನಿರ್ದೇಶಕರಾಗಿ ಖ್ಯಾತರ ಬಳಿ ಸೇರಿಕೊಂಡು, ಸ್ವತಂತ್ರ ನಿರ್ದೇಶಕರಾಗಿರುವ ಉದಾಹರಣೆಗಳಿವೆ. ಪರಶುರಾಮ ಚೌಡ್ಕಿ ನಾನು ಕಲಾ ವಿಭಾಗದಲ್ಲಿ ಪಿಯುಸಿ ಮುಗಿಸಿದ್ದೇನೆ. ಬಿಬಿಎಂ ಅರ್ಧಕ್ಕೆ ಬಿಟ್ಟಿದ್ದೇನೆ. ಈಗ ಖಾಸಗಿ ಉದ್ಯೋಗದಲ್ಲಿದ್ದೇನೆ. ನನಗೆ ಇಂಗ್ಲಿಷ್ ಶಿಕ್ಷಕನಾಗುವ ಆಸೆ ಇದೆ. ಏನು ಮಾಡಬೇಕು? ಪ್ರಾಥಮಿಕ ಶಾಲಾ ಶಿಕ್ಷಕರಾಗಬೇಕಾದರೆ ಡಿ.ಎಡ್. ಕೋರ್ಸಿಗೆ ಸೇರಿಕೊಳ್ಳಬೇಕು. ಪ್ರೌಢಶಾಲೆ ಸೇರ ಬಯಸಿದರೆ ಬಿ.ಎ. ಪದವಿ ಮುಗಿಸಿ ಬಿ.ಎಡ್. ಮಾಡಬೇಕಾಗುತ್ತದೆ. ಎಂ.ಎ. ಹಾಗೂ ಹೆಚ್ಚಿನ ಅರ್ಹತೆಗಳಿದ್ದವರು ಕಾಲೇಜಿನಲ್ಲಿ ಕಲಿಸಬಹುದು. ಎಲ್ಲಕ್ಕಿಂತ ಮೊದಲು ನೀವು ಇಂಗ್ಲಿಷ್ ಭಾಷಾ ಪರಿಣತಿ ಬೆಳೆಸಿಕೊಳ್ಳುವುದು ಅಗತ್ಯ. ದರ್ಶನ್ ಜೆ.ಎಂ. ಪಿಯುಸಿಯಲ್ಲಿ ಏನನ್ನು ಆರಿಸಿಕೊಳ್ಳಬೇಕೆಂಬ ಸಂದಿಗ್ಧದಲ್ಲಿದ್ದೇನೆ. ಐಎಎಸ್ ಮಾಡುವ ಅಥವಾ ಇಸ್ರೊಗೆ ಸೇರುವ ಆಸೆ ಇದೆ. ಹೇಗೆ ತಯಾರಾಗಬೇಕು? -ಯಾವುದಾದರೂ ಪದವಿ ಪಡೆದು ಸ್ಪರ್ಧಾತ್ಮಕ ಪರೀಕ್ಷೆಗೆ ಕುಳಿತುಕೊಳ್ಳಬಹುದು. ಇಸ್ರೊಗೆ ಸೇರಬೇಕಾದರೆ ವಿಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಪದವಿ ಅಥವಾ ಸೂಕ್ತ ತಾಂತ್ರಿಕ ವಿದ್ಯಾಭ್ಯಾಸ ಪೂರೈಸುವುದು ಉತ್ತಮ. ಪಿಎಚ್.ಡಿ. ಮಾಡಿ, ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗಿರುವವರಿಗೆ ಆದ್ಯತೆ ಸಿಗಬಹುದು. ನೀವು ಯಾವುದೇ ಸಂಸ್ಥೆಗೆ ಸೇರಬೇಕಾದರೆ ಆ ಸಂಸ್ಥೆಯ ಆಯ್ಕೆ ವಿಧಾನಗಳನ್ನು ಪೂರೈಸಿ ಅರ್ಹತೆ ಗಳಿಸಬೇಕಾಗುತ್ತದೆ. ಮಹಬೂಬ್ ನಾನು ಬಿ.ಎಡ್., ಓದುತ್ತಿದ್ದೇನೆ. ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ತುಂಬಾ ಗಂಭೀರವಾಗಿದೆ. ನನಗೆ ಎಂ.ಎ., ಪಿಎಚ್.ಡಿ. ಮಾಡುವ ಆಸೆ. ಏನು ಮಾಡಬೇಕು? ನೀವು ಹೇಗಾದರೂ ಬಿ.ಎಡ್. ಮುಗಿಸಿಕೊಳ್ಳಿ. ಸರ್ಕಾರಿ ಕೆಲಸಕ್ಕೆ ಕಾಯುತ್ತಾ ಕೂಡದೆ ಯಾವುದಾದರೂ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿಕೊಳ್ಳಿ ಅಥವಾ ಇತರ ಸಾಧಾರಣ ಉದ್ಯೋಗ ಸಿಕ್ಕಿದರೂ ಆಗಬಹುದು. ಇದರ ಜೊತೆ-ಜೊತೆಗೆ ದೂರಶಿಕ್ಷಣದ ಮೂಲಕ ಓದು ಮುಂದುವರಿಸಿ. ನಿಮಗೆ ಒಳ್ಳೆಯದಾಗಲಿ. ನವೀನ್ ಕುಮಾರ್ ನಾನು ಎಸ್ಸೆಸ್ಸೆಲ್ಸಿಯಲ್ಲಿ ಶೇ 54 ಮತ್ತು ಪಿಯುಸಿ ಕಲಾ ವಿಭಾಗದಲ್ಲಿ ಶೇ 70 ಅಂಕ ಪಡೆದಿದ್ದೇನೆ. ನನಗೆ ಶಿಕ್ಷಕನಾಗುವ ಆಸೆ. ಇದರ ಬಗ್ಗೆ ಮಾಹಿತಿ ಕೊಡಿ. ನೀವು ಸಾಮಾನ್ಯ ಶಿಕ್ಷಕರಾಗ ಬಯಸಿದಲ್ಲಿ ಡಿ.ಎಡ್. ತರಬೇತಿಗೆ ಸೇರಿಕೊಳ್ಳಿ. ಇದಲ್ಲದೆ ವ್ಯಾಯಾಮ ಶಿಕ್ಷಕರಾಗಿಯೂ ತರಬೇತಿ ಪಡೆಯಬಹುದು. ಅನುಕೂಲ ಇದ್ದಲ್ಲಿ ಬಿ.ಪಿ.ಎಡ್. ಮಾಡಿಕೊಂಡರೆ ಅವಕಾಶಗಳು ಹೆಚ್ಚು. ಇವಲ್ಲದೆ ಕಲಾ ಶಿಕ್ಷಕರಾಗಲು ಆಸಕ್ತಿ ಇದ್ದಲ್ಲಿ ಬಿ.ಎಫ್.ಎ.ಯಂತಹ ಕೋರ್ಸುಗಳಿಗೆ ಸೇರಬಹುದು. ವೀರಶೆಟ್ಟಿ ವಿ. ಮುಸ್ರಿಫಾ, ಸೂಳೆಪೇಟೆ, ಚಿಂಚೊಳ್ಳಿ ತಾಲ್ಲೂಕು ನಾನು ಗುಲ್ಬರ್ಗಾ ವಿ.ವಿ.ಯಿಂದ 2010ರಲ್ಲಿ ಬಿ.ಎ. ಪದವಿ ಪಡೆದಿದ್ದೇನೆ. ನಾನು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದು ಪದವಿಯಲ್ಲಿ ಒಂಬತ್ತನೇ ರ‍್ಯಾಂಕ್ ಪಡೆದಿದ್ದೇನೆ. ನನ್ನ ಜೀವನಮಾನದ ಆಸೆ ಐ.ಎ.ಎಸ್. ಮಾಡುವುದು. ಇದಕ್ಕೆ ತಯಾರಿ ನಡೆಸಿದ್ದೇನೆ. ನನ್ನ ಒಂದು ಕಣ್ಣು ಮೆಳ್ಳಗಣ್ಣು. ಇದು ನನ್ನ ಭವಿಷ್ಯದ ಆಸೆಗೆ ಅಡ್ಡಿಯಾಗಬಹುದೇ? ಹಾಗಿದ್ದಲ್ಲಿ ನಾನು ನನ್ನ ತಯಾರಿಯನ್ನು ನಿಲ್ಲಿಸಿ ಬೇರೆ ಯಾವುದಾದರೂ ಪರೀಕ್ಷೆ ಬರೆಯುತ್ತೇನೆ. ಕರ್ನಾಟಕದಲ್ಲಿ ಐ.ಎ.ಎಸ್.ಗೆ ಉತ್ತಮ ಕೋಚಿಂಗ್ ಸೆಂಟರ್ ಯಾವುದು? ದಯಮಾಡಿ ನನ್ನ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡಿ. ನನಗೆ ತಿಳಿದ ಮಟ್ಟಿಗೆ, ನೀವು ತಿಳಿಸಿರುವ ಕಣ್ಣಿನ ಸ್ಥಿತಿಯಿಂದ ನೀವು ಐ.ಎ.ಎಸ್. ಬರೆಯಲು ಯಾವುದೇ ಅಡ್ಡಿ ಆಗಲಾರದು. ಆದರೆ ಯಾವುದೇ ಸರ್ಕಾರಿ ನೌಕರಿಗೆ ಸೇರುವ ಮೊದಲು ಸಾಮಾನ್ಯವಾಗಿ ವೈದ್ಯಕೀಯ ತಪಾಸಣೆ ಅಗತ್ಯವಾಗಿರುತ್ತದೆ. ಇದಕ್ಕೆ ಬೇಕಾದ ನಿರ್ದಿಷ್ಟ ಮಾನದಂಡವನ್ನು ನೀವು ಯುಪಿಎಸ್‌ಸಿ ವೆಬ್‌ಸೈಟ್‌ನಿಂದ ಪಡೆಯಬಹುದು. ಯಾವುದಾದರೂ ಸರ್ಕಾರಿ ಆಸ್ಪತ್ರೆಯ ನೇತ್ರ ಚಿಕಿತ್ಸಾ ತಜ್ಞರನ್ನು ಕಂಡು, ನಿಮ್ಮ ಸಮಾಧಾನಕ್ಕಾಗಿ ಅವರ ಸಲಹೆ ಪಡೆದುಕೊಳ್ಳಿ. ಅವರು ನಿಮ್ಮ ತೊಂದರೆಯಿಂದ ಈ ಹುದ್ದೆಗೆ ಆಯ್ಕೆಯಾಗಲು ಅಡ್ಡಿಯಿಲ್ಲ ಎಂದು ಹೇಳಿದಲ್ಲಿ ನೀವು ಮುಂದುವರಿಯಬಹುದು. ನಿಮ್ಮ ಅನುಮಾನವೂ ಪರಿಹಾರವಾಗುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಐ.ಎ.ಎಸ್. ತರಬೇತಿ ನೀಡುವ ಅನೇಕ ಸಂಸ್ಥೆಗಳಿವೆ. ಕಿರಣ್ ಕುಮಾರ್ ನನಗೆ ಪೊಲೀಸ್ ಇಲಾಖೆಗೆ ಸೇರುವ ಆಸೆ ಇದೆ. ಆದರೆ ಪದವಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದೇನೆ. ನಾನು ಪೋಲೀಸ್ ಆಗಲು ಇದು ಆಡ್ಡಿಯಾಗುತ್ತದೆಯೇ? ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪರೀಕ್ಷೆ ಬರೆಯಲು ಪದವಿ ಅಗತ್ಯ. ಆದರೆ ಕಾನ್‌ಸ್ಟೆಬಲ್ ಮಟ್ಟದ ಪರೀಕ್ಷೆ ತೆಗೆದುಕೊಳ್ಳಲು ಪಿಯುಸಿ ಸಾಕು. ಆದ್ದರಿಂದ ನೀವು ನಿಮ್ಮ ಜಿಲ್ಲಾ ಪೋಲೀಸ್ ಕಚೇರಿಯಲ್ಲಿ ಮಾಹಿತಿ ಪಡೆದು ಮುಂದುವರಿಯಬಹುದು. ಇವಲ್ಲದೆ ರಿಸರ್ವ್ ಪೊಲೀಸ್, ಕೇಂದ್ರೀಯ ಪೊಲೀಸ್, ಬಿ.ಎಸ್.ಎಫ್., ಕೈಗಾರಿಕಾ ರಕ್ಷಣಾ ಪಡೆ, ಅಗ್ನಿಶಾಮಕ ದಳ ಹೀಗೆ ಪೊಲೀಸ್ ಪಡೆಯ ವಿವಿಧ ವಿಭಾಗಗಳಿಗೂ ನೀವು ಪ್ರಯತ್ನಿಸಬಹುದು. ಕೆಲಸ ಸಿಕ್ಕಿದಲ್ಲಿ ಬಡ್ತಿಯ ಅವಕಾಶಗಳೂ ಉಂಟು. ಜೊತೆಗೆ ನಿಮ್ಮ ಪದವಿ ಪೂರೈಸಿಕೊಳ್ಳುವತ್ತಲೂ ಗಮನ ನೀಡಿ. ಪ್ರಶ್ನೆ ಕಳುಹಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂ.ಜಿ ರಸ್ತೆ, ಬೆಂಗಳೂರು 560 001 ಪ್ರಶ್ನೆಗಳನ್ನು ಇ- ಮೇಲ್‌ನಲ್ಲೂ ಕಳುಹಿಸಬಹುದು:@.. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.