ಈಕ್ವೆಸ್ಟ್ರಿಯನ್‌: ನಾಲ್ಕು ಪ್ರಶಸ್ತಿ ಗೆದ್ದ ಆಶಿಶ್‌ ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಆಶಿಶ್‌ ಲಿಮಾಯೆ, ಈಕ್ವೆಸ್ಟ್ರಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ (ಈಪಿಎಲ್‌) ಒಟ್ಟು ನಾಲ್ಕು ಪ್ರಶಸ್ತಿ ಗೆದ್ದಿದ್ದಾರೆ. ‌ಎಂಬೆಸಿ ರೈಡಿಂಗ್ ಸ್ಕೂಲ್‌ನಲ್ಲಿ ನಡೆದ ಶೋ ಜಂಪಿಂಗ್‌ನ 120 ಸೆಂಟಿ ಮೀಟರ್ಸ್‌ ಓಪನ್‌ ವಿಭಾಗದಲ್ಲಿ ಇ.ಐ.ಆರ್‌.ಎಸ್‌. ಕ್ಲಬ್‌ನ ಆಶಿಶ್‌, ಮೊದಲಿಗರಾಗಿ ಗುರಿ ಮುಟ್ಟಿದರು. 110, 100 ಮತ್ತು 105 ಸೆಂ.ಮೀ. ವಿಭಾಗಗಳ ‍ಪ್ರಶಸ್ತಿಯೂ ಆಶಿಶ್‌ ಅವರ ಪಾಲಾಯಿತು. 115 ಸೆಂಟಿ ಮೀಟರ್ಸ್‌ ವಿಭಾಗದಲ್ಲಿ ಆಶಿಶ್‌ ಎರಡನೇ ಸ್ಥಾನ ಪಡೆದರು. ಎಸ್‌.ಬಸವರಾಜು ಮೂರನೇ ಸ್ಥಾನದೊಂದಿಗೆ ಸ್ಪರ್ಧೆ ಮುಗಿಸಿದರು. 130 ಸೆಂಟಿ ಮೀಟರ್ಸ್ ಶೋ ಜಂಪಿಂಗ್‌ನಲ್ಲಿ ಯು.ಆರ್‌.ಬಿ.ಕ್ಲಬ್‌ನ ರಿಷಭ್‌ ಮೆಹ್ತಾ ಟ್ರೋಫಿ ಜಯಿಸಿದರು. 120 ಸೆಂಟಿ ಮೀಟರ್ಸ್ ವಿಭಾಗದಲ್ಲಿ ಅವರು ರನ್ನರ್‌ ಅಪ್‌ ಆದರು. 80 ರಿಂದ 90 ಸೆಂಟಿ ಮೀಟರ್ಸ್‌ (ಮಕ್ಕಳ ವಿಭಾಗ) ಸ್ಪರ್ಧೆಯಲ್ಲಿ ಯು.ಆರ್‌.ಬಿ. ಕ್ಲಬ್‌ನ ಅಬ್ದುಲ್‌ ಪ್ರಶಸ್ತಿಗೆ ಮುತ್ತಿಕ್ಕಿದರು. ಬಸವರಾಜು ಎರಡನೇ ಸ್ಥಾನ ಪಡೆದರು. ಅಶ್ವಿನ್‌, ಎಸ್‌.ವಿಜಯ್‌, ರಿಚಾ ಶಂಕರ್‌ ಹಾಗೂ ಆಧ್ಯಾ ಸಂತೋಷ್‌ ಅವರು ಕ್ರಮವಾಗಿ ಮೂರರಿಂದ ಆರನೇ ಸ್ಥಾನ ತಮ್ಮದಾಗಿಸಿಕೊಂಡರು. 60 ಸೆಂ.ಮೀ. ವಿಭಾಗದಲ್ಲಿ ಎಂ.ಎಸ್‌.ಇ. ಕ್ಲಬ್‌ನ ತನುಶ್‌ ಕುಮಾರ್‌, ಪ್ರಿಲಿಮಿನರಿ ಡ್ರೆಸೆಜ್‌ ಮತ್ತು ಪ್ರೀ ನೊವೈಸ್‌ ಡ್ರೆಸೆಜ್‌ ವಿಭಾಗಗಳಲ್ಲಿ ಸಮರ್ಥ ಸತ್ಯಜಿತ್‌ ಹಾಗೂ ನೊವೈಸ್‌ ಡ್ರೆಸೆಜ್‌ ವಿಭಾಗದಲ್ಲಿ ವಿ.ವಿಕಾಸ್‌ ಕುಮಾರ್‌ ಚಾಂಪಿಯನ್‌ ಆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.