ದೀಪಿಕಾ ಕುಮಾರಿಗೆ ಬೆಳ್ಳಿ ಪದಕದ ಗರಿ ಟೋಕಿಯೊ: ಭಾರತದ ಅಗ್ರ ಕ್ರಮಾಂಕದ ಬಿಲ್ಗಾರ್ತಿ ದೀಪಿಕಾ ಕುಮಾರಿ ಅವರು ಒಲಿಂಪಿಕ್‌ ಕೂಟದ ಪ್ರಾಯೋಗಿಕ ಆರ್ಚರಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ್ದಾರೆ. ಬುಧವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಕೊರಿಯಾದ 18ರ ಹರಯದ ಆನ್‌ ಸಾನ್‌ ಎದುರು ನೇರ ಸೆಟ್‌ಗಳಿಂದ ದೀಪಿಕಾ ಸೋತರು. ಅರ್ಹತಾ ಸುತ್ತಿನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ದೀಪಿಕಾ ಎರಡನೇ ಶ್ರೇಯಾಂಕಿತ ಬಿಲ್ಗಾರ್ತಿ ವಿರುದ್ಧ ಫೈನಲ್‌ನಲ್ಲಿ ಆರಂಭದಿಂದಲೇ ತಿಣುಕಾಡಿದರು. ಅಮೋಘವಾಗಿ ಗುರಿ ಇಟ್ಟ ಎದುರಾಳಿ ಮೊದಲೆರಡು ಸೆಟ್‌ಗಳಲ್ಲಿ ಸ್ವಲ್ಪ ಗೊಂದಲಕ್ಕೆ ಒಳಗಾದರು. ಮೊದಲ ಸೆಟ್‌ನಲ್ಲಿ ಒಂದು ಪಾಯಿಂಟ್‌ನಿಂದ ಗೆದ್ದ ಅವರು ಎರಡನೇ ಸೆಟ್‌ನಲ್ಲಿ ಮೂರು ಬಾರಿ ಮಧ್ಯಕ್ಕೆ ಗುರಿ ಇಟ್ಟು 29–25ರ ಗೆಲುವು ಸಾಧಿಸಿದರು. ಮೂರನೇ ಸೆಟ್‌ನಲ್ಲಿ ಸಾನ್ ಯಾವುದೇ ತಪ್ಪೆಸಗಲಿಲ್ಲ. ಹೀಗಾಗಿ 6–0ಯಿಂದ ಪಂದ್ಯ ಗೆದ್ದರು. ಇತ್ತೀಚೆಗೆ ಬರ್ಲಿನ್‌ನಲ್ಲಿ ನಡೆದಿದ್ದ ವಿಶ್ವಕಪ್‌ನ ನಾಲ್ಕನೇ ಹಂತದ ಸ್ಪರ್ಧೆಯಲ್ಲಿ ಆನ್ ಸಾನ್ ಎರಡು ಪದಕ ಗೆದ್ದಿದ್ದರು. ‘ಇತ್ತೀಚೆಗೆ ನಾನು ತಂತ್ರಗಳನ್ನು ಬದಲಿಸಿದ್ದೇನೆ. ಅದಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತಿದ್ದೇನೆ. ಆದ್ದರಿಂದ ಇಲ್ಲಿ ಗೆಲುವು ಸಾಧಿಸಲು ಆಗಲಿಲ್ಲ. ಇಲ್ಲಿ ಲಭಿಸಿದ ಅನುಭವದಿಂದ ಮುಂದೆ ಉತ್ತಮ ಸಾಮರ್ಥ್ಯ ತೋರಲು ಪ್ರಯತ್ನಿಸುತ್ತೇನೆ’ ಎಂದು 25 ವರ್ಷದ ದೀಪಿಕಾ ಹೇಳಿದರು. ಜೆಂಗ್ ಎದುರು ಏಕಪಕ್ಷೀಯ ಜಯ: ಸೆಮಿಫೈನಲ್‌ನಲ್ಲಿ ದೀಪಿಕಾ ಕುಮಾರಿ ಎಂಟನೇ ಶ್ರೇಯಾಂಕಿತ ಚೀನಾ ಆರ್ಚರ್‌ ಜೆಂಗ್ ಯಿಚಾಯ್‌ ಎದುರು 6–0ಯಿಂದ ಗೆದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಇಟಲಿಯ ತಾತಿಯಾನ ಆ್ಯಂಡ್ರೊಲಿ ಎದುರು 0–4ರ ಹಿನ್ನಡೆ ಅನುಭವಿಸಿದ್ದ ದೀಪಿಕಾ ನಂತರ ಪುಟಿದೆದ್ದಿದ್ದರು. ಟೈಬ್ರೇಕರ್‌ನಲ್ಲಿ 6–5ರ ಜಯ ಸಾಧಿಸಿ ನಾಲ್ಕರ ಹಂತಕ್ಕೆ ಲಗ್ಗೆ ಇರಿಸಿದ್ದರು. ಮೊದಲ ಸುತ್ತಿನಲ್ಲಿ ಹಾಂಗ್‌ ಕಾಂಗ್‌ನ ಲೀ ಶುಕ್ ಕ್ವಾನ್ ವಿರುದ್ಧ (6–0), ಮತ್ತು ಜಪಾನ್‌ನ ಉಕ್ರೇನ್‌ನ ಸೊನೊಡಾ ವಾಕಾ ಎದುರು (6–0) ಗೆದ್ದಿದ್ದರು. ಬೊಂಬೈಲಾ ದೇವಿ, ಅತನು ದಾಸ್‌ಗೆ ಸೋಲು: ಭಾರತದ ಅನುಭವಿ ಬಿಲ್ಗಾರ್ತಿ ಲೈಶ್ರಮ್ ಬೊಂಬೈಲಾ ದೇವಿ ಎರಡನೇ ಸುತ್ತಿನಲ್ಲಿ ಮಲೇಷ್ಯಾದ ನೂರ್ ಅಲಿಯಾ ಗಫಾರ್‌ಗೆ 5–6ರಲ್ಲಿ ಮಣಿದು ಹೊರಬಿದ್ದರು. ಪುರುಷರ ವಿಭಾಗದಲ್ಲಿ ಆರ್ಚರ್ ಅತನು ದಾಸ್ ನಿರೀಕ್ಷೆ ಹುಸಿಗೊಳಿಸಿದರು. ಎರಡನೇ ಸುತ್ತಿನಲ್ಲಿ ಅವರು ಕೊರಿಯಾದ ಬೇ ಜಹಿಯಾನ್‌ಗೆ 4–6ರಲ್ಲಿ ಮಣಿದರು. ಸರ್ವಿಸಸ್‌ನ ಜೋಡಿ ತರುಣ್ ದೀಪ್‌ ರಾಯ್‌ ಮತ್ತು ಪ್ರವೀಣ್‌ ಜಾಧವ್‌ ಮೊದಲ ಸುತ್ತಿನಲ್ಲೇ ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.