ಗುಜರಾತ್‌ ಗೆಲುವಿನಲ್ಲಿ ಮಿಂಚಿದ ಪರ್ವೇಶ್‌ ಹೈದರಾಬಾದ್: ಪರ್ವೇಶ್‌ ಬೇನ್ಸ್‌ವಾಲ್‌ ಅವರ ಅಮೋಘ ರಕ್ಷಣೆಯ ಆಟದಿಂದ ಗುಜರಾತ್‌ ಫಾರ್ಚೂನ್‌ಜೈಂಟ್ಸ್‌ ತಂಡ 44–19 ರಿಂದ ಯು.ಪಿ. ಯೋಧಾ ತಂಡವನ್ನು ಸೋಲಿಸಿತು. ಪ್ರೊ ಕಬಡ್ಡಿ ಲೀಗ್‌ನಲ್ಲಿ ಗುಜರಾತ್‌ ತಂಡ ಆಡಿದ ಎರಡೂ ಪಂದ್ಯಗಳನ್ನು ಗೆದ್ದುಕೊಂಡು ಅಗ್ರಸ್ಥಾನಕ್ಕೇರಿತು. ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಈ ಪಂದ್ಯದಲ್ಲಿ ಬೇನ್ಸ್‌ವಾಲ್‌ ಒಟ್ಟು ಆರು ಕ್ಯಾಚಿಂಗ್‌ ಪಾಯಿಂಟ್‌ ಪಡೆದು ಮಿಂಚಿದರಲ್ಲದೇ ಎದುರಾಳಿಯನ್ನು ಪಂದ್ಯದ ಬಹುತೇಕ ಅವಧಿ ಕಾಡಿದರು. ರೋಹಿತ್‌ ಗುಲಿಯಾ ರೈಡಿಂಗ್‌ನಲ್ಲಿ 10 ಪಾಯಿಂಟ್ಸ್‌ ಗಳಿಸಿ ಗಮನ ಸೆಳೆದರು. ವಿರಾಮದ ವೇಳೆ ವಿಜೇತರು 19–9 ಪಾಯಿಂಟ್‌ಗಳ ಮುನ್ನಡೆ ಸಾಧಿಸಿದ್ದರು. ಅನುಭವಿ ಡಿಫೆಂಡರ್‌ಗಳಿದ್ದ ಯೋಧಾ ತಂಡ ಇಡೀ ಪಂದ್ಯದಲ್ಲಿ ಐದು ಟ್ಯಾಕ್ಲಿಂಗ್‌ ಪಾಯಿಂಟ್ಸ್‌ ಪಡೆಯಲಷ್ಟೇ ಶಕ್ತವಾಯಿತು. ಪ್ರೊ ಕಬಡ್ಡಿ ಲೀಗ್‌ನಲ್ಲಿ ಯೋಧಾ ವಿರುದ್ಧ ಫಾರ್ಚೂನ್‌ಜೈಂಟ್ಸ್‌ ಗೆಲುವಿನ ಓಟ ಮುಂದುವರಿದಿದೆ. ಇನ್ನೊಂದು ಪಂದ್ಯದಲ್ಲಿ ಪಟ್ನಾ ಪೈರೇಟ್ಸ್‌ 29–17 ಪಾಯಿಂಟ್‌ಗಳಿಂದ ತೆಲುಗು ಟೈಟನ್ಸ್‌ ತಂಡವನ್ನು ಸೋಲಿಸಿತು. ವಿರಾಮದ ವೇಳೆ ಪಟ್ನಾ ತಂಡ 23–9 ಪಾಯಿಂಟ್‌ಗಳಿಂದ ಮುಂದಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.