ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್ ಶುಭಾರಂಭ ಹೈದರಾಬಾದ್‌: ಮಧ್ಯಂತರ ಹಿನ್ನಡೆಯಿಂದ ಚೇತರಿಸಿದ ಹಾಲಿ ಚಾಂಪಿಯನ್‌ ಬೆಂಗಳೂರು ಬುಲ್ಸ್‌ ತಂಡ, ಶನಿವಾರ ಆರಂಭವಾದ ವಿವೊ 7ನೇ ಪ್ರೊ ಕಬಡ್ಡಿ ಲೀಗ್‌ನಲ್ಲಿ ಪಟ್ನಾ ಪೈರೇಟ್ಸ್‌ ತಂಡವನ್ನು 34–32ರಲ್ಲಿ ಎರಡು ಪಾಯಿಂಟ್‌ಗಳಿಂದ ಸೋಲಿಸಿತು. ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ವಿರಾಮದ ವೇಳೆ ಪೈರೇಟ್ಸ್‌ ತಂಡ 17–13 ಪಾಯಿಂಟ್ಸ್‌ಗಳಿಂದ ಮುಂದಿತ್ತು. ದಾಳಿಯಲ್ಲಿ ಮಿಂಚಿದ ಪವನ್‌ 10 ಪಾಯಿಂಟ್‌ ತಂದುಕೊಟ್ಟರೆ, ಅಮಿತ್‌ ಶೆರಾನ್‌ ರಕ್ಷಣೆಯಲ್ಲಿ ಐದು ಪಾಯಿಂಟ್‌ಗಳೊಡನೆ ಗಮನ ಸೆಳೆದರು. ಪಟ್ನಾ ಪರ ಪ್ರದೀಪ್‌ ನರ್ವಾಲ್‌ ರೇಡಿಂಗ್‌ನಲ್ಲಿ ಮಿಂಚಿ 10 ಪಾಯಿಂಟ್‌ ಗಳಿಸಿದರು. ಇದಕ್ಕೆ ಮೊದಲು, ಯು ಮುಂಬಾ ತಂಡ, ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ತೆಲುಗು ಟೈಟನ್ಸ್‌ ತಂಡವನ್ನು 31–25 ಪಾಯಿಂಟ್‌ಗಳಿಂದ ಸೋಲಿಸಿತು.ವಿರಾಮದ ವೇಳೆ ಮುಂಬಾ 17–10 ಪಾಯಿಂಟ್‌ಗಳಿಂದ ಮುಂದಿತ್ತು. ಅಭಿಷೇಕ್‌ ಸಿಂಗ್‌ ಅವರ ದಾಳಿ ಮತ್ತು ಫಜಲ್‌ ಅತ್ರಾಚಲಿ ಅವರ ರಕ್ಷಣೆಯ ಆಟ ಮುಂಬಾ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.ರೈಡಿಂಗ್‌ನಲ್ಲಿ ಅಭಿಷೇಕ್‌ 10 ಪಾಯಿಂಟ್ಸ್‌ ಗಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.