ಡಬಲ್ಸ್ ಸೆಮಿಫೈನಲ್‌ಗೆ ಮೇಘನಾ ವ್ಲಾದಿವೊಸ್ತೊಕ್‌, ರಷ್ಯಾ: ಭಾರತದ ಮೇಘನಾ ಜಕ್ಕಂಪುಡಿ ಶುಕ್ರವಾರ ರಷ್ಯಾ ಓಪನ್‌ ಬಿಡಬ್ಲ್ಯುಎಫ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮಹಿಳಾ ಮತ್ತು ಮಿಶ್ರ ಡಬಲ್ಸ್ ವಿಭಾಗಗಳ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಮಿಶ್ರ ಡಬಲ್ಸ್ ವಿಭಾಗದಲ್ಲಿ ಧ್ರುವ ಕಪಿಲ ಜೊತೆಗೂಡಿ ಕಣಕ್ಕಿಳಿದಿದ್ದ ಅವರು ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ರಷ್ಯಾ ಜೋಡಿ ಮ್ಯಾಕ್ಸಿಂ ಮ್ಯಾಕಲೊವ್‌ ಹಾಗೂ ಎಕಟೆರಿನಾ ರಿಯಾಜಂಟ್‌ಸೆವಾ ವಿರುದ್ಧ 21–3, 21–12 ಗೇಮ್‌ಗಳಿಂದ ಗೆಲುವಿನ ನಗೆ ಬೀರಿದರು. ಭಾರತದ ಜೋಡಿಯು ನಾಲ್ಕರ ಘಟ್ಟದ ಪಂದ್ಯದಲ್ಲಿ ಏಳನೇ ಶ್ರೇಯಾಂಕದ ಇಂಡೊನೇಷ್ಯಾ ಜೋಡಿ ಅದ್ನಾನ್‌ ಮೌಲಾನ ಹಾಗೂ ಮಿಷೆಲ್ಲೆ ಕ್ರೈಸ್ಟಿನ್‌ ಬ್ಯಾಂಡಾಸೊ ಅವರನ್ನು ಎದುರಿಸುವರು. ಮಹಿಳಾ ಡಬಲ್ಸ್ ವಿಭಾಗದಲ್ಲಿ ಪೂರ್ವಿಶಾ ಎಸ್‌.ರಾಮ್‌ ಜೊತೆಯಾಗಿ ಮೇಘನಾ ಅವರು ಮತ್ತೊಂದು ಸ್ಥಳೀಯ ಜೋಡಿ ವಿಕ್ಟೋರಿಯಾ ಕೊಜಿರೆವಾ ಹಾಗೂ ಮಾರಿಯಾ ಸುಖೊವಾ ವಿರುದ್ಧ 21–19, 21–11ರಿಂದ ಜಯ ಸಾಧಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಅಗ್ರಶ್ರೇಯಾಂಕದ ಭಾರತದ ಆಟಗಾರ್ತಿಯರು ಮುಂದಿನ ಪಂದ್ಯದಲ್ಲಿ ಜಪಾನ್‌ನ ಮಿಕಿ ಕಶಿಹರ ಹಾಗೂ ಮಿಯುಕಿ ಕ್ಯಾಟೊ ಅವರಿಗೆ ಮುಖಾಮುಖಿಯಾಗುವರು. ರಿತುಪರ್ಣಾ ದಾಸ್‌ ಹಾಗೂ ಸಿರಿಲ್‌ ವರ್ಮಾ ತಮ್ಮ ಸಿಂಗಲ್ಸ್ ಕ್ವಾರ್ಟರ್‌ಫೈನಲ್‌ ಪಂದ್ಯಗಳಲ್ಲಿ ಸೋತರು. ಮಿಶ್ರ ಡಬಲ್ಸ್ ಜೋಡಿ ಭಾರತದ ಪ್ರಸಾದ್‌ ಗರ್ಗ್‌– ಪೂರ್ವಿಶಾ ರಾಮ್‌ ಕೂಡ ರಷ್ಯಾ ಜೋಡಿ ಎದುರು ಸೋತರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.