ಟಿವಿಎಸ್‌ ತಂಡದಲ್ಲಿ ರಾಜ್ಯದ ಅರವಿಂದ್‌, ಐಶ್ವರ್ಯ ಬೆಂಗಳೂರು: ಕರ್ನಾಟಕದ ಕೆ.ಪಿ.ಅರವಿಂದ್‌ ಮತ್ತು ಐಶ್ವರ್ಯ ಪಿಸ್ಸೆ ಅವರು ಮುಂಬರುವ ಬಾಜಾ ಆ್ಯರಗನ್‌ ಮೋಟರ್ ರ‍್ಯಾಲಿಯಲ್ಲಿ ಶೆರ್ಕೊ ಟಿವಿಎಸ್‌ ರ‍್ಯಾಲಿ ಫ್ಯಾಕ್ಟರಿ ತಂಡವನ್ನು ಪ್ರತಿನಿಧಿಸಲಿದ್ದಾರೆ. ಮಂಗಳವಾರ ಟಿವಿಎಸ್‌ ತಂಡ ಪ್ರಕಟವಾಗಿದ್ದು, ಮೈಕಲ್‌ ಮೆಟ್ಗೆ (ಫ್ರಾನ್ಸ್‌), ಲೊರೆಂಜೊ ಸ್ಯಾಂಟೋಲಿನೊ (ಸ್ಪೇನ್‌) ಮತ್ತು ಹರಿತ್‌ ನೋಹ್‌ (ಭಾರತ) ಅವರಿಗೂ ಸ್ಥಾನ ನೀಡಲಾಗಿದೆ. 827 ಕಿಲೊ ಮೀಟರ್ಸ್‌ ದೂರದ, ವಿಶ್ವದ ಅತ್ಯಂತ ಅಪಾಯಕಾರಿ ರ‍್ಯಾಲಿಗಳಲ್ಲಿ ಒಂದಾಗಿರುವ ಬಾಜಾ ಆ್ಯರಗನ್‌, ಇದೇ 25ರಿಂದ 27ರವರೆಗೆ ಸ್ಪೇನ್‌ನಲ್ಲಿ ನಡೆಯಲಿದೆ. ಬೆಂಗಳೂರಿನ ಐಶ್ವರ್ಯ, ಚೊಚ್ಚಲ ಪ್ರಶಸ್ತಿಯ ನಿರೀಕ್ಷೆಯಲ್ಲಿದ್ದಾರೆ. 23 ವರ್ಷದ ಈ ರೇಸರ್‌, ಗ್ಲೋಬಲ್‌ ಚಾಂಪಿಯನ್‌ಷಿಪ್‌ ರ‍್ಯಾಂಕಿಂಗ್‌ನ ಜೂನಿಯರ್‌ ವಿಭಾಗದಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. 2019ರ ಡಕಾರ್‌ ರ‍್ಯಾಲಿಯ ವೇಳೆ ಗಾಯಗೊಂಡಿದ್ದ ಲೊರೆಂಜೊ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಡಕಾರ್‌ ಮತ್ತು ಮೆರ್ಗೌಜಾ ರ‍್ಯಾಲಿಗಳಲ್ಲಿ ಅಮೋಘ ಚಾಲನ ಕೌಶಲ ತೋರಿದ್ದ ಉಡುಪಿಯ ಅರವಿಂದ್‌ ಕೂಡಾ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ. ‘ಡಕಾರ್‌ ಮತ್ತು ಮೆರ್ಗೌಜಾ ರ‍್ಯಾಲಿಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದರಿಂದ ವಿಶ್ವಾಸ ಹೆಚ್ಚಿದೆ. ಬಾಜಾ ಆ್ಯರಗನ್‌ ರ‍್ಯಾಲಿಯಲ್ಲಿ ಪ್ರಶಸ್ತಿ ಗೆಲ್ಲಲು ಪ್ರಯತ್ನಿಸುತ್ತೇನೆ’ ಎಂದು ಅರವಿಂದ್‌ ಹೇಳಿದ್ದಾರೆ. ‘ನನ್ನ ಅಂತರರಾಷ್ಟ್ರೀಯ ರೇಸಿಂಗ್‌ ಬದುಕು ಆರಂಭವಾಗಿದ್ದೇ ಬಾಜಾ ರ‍್ಯಾಲಿಯ ಮೂಲಕ. ಹೋದ ವರ್ಷ ಮೊದಲು ಈ ರ‍್ಯಾಲಿಯಲ್ಲಿ ಸ್ಪರ್ಧಿಸಿದ್ದೆ. ಹೊಸ ಕೌಶಲಗಳನ್ನು ಕಲಿಯಲು ಬಾಜಾ ರ‍್ಯಾಲಿ ಉತ್ತಮ ವೇದಿಕೆಯಾಗಿದೆ. ಈ ಸಲ ಪ್ರಶಸ್ತಿ ಗೆಲ್ಲಲು ಶಕ್ತಿ ಮೀರಿ ಶ್ರಮಿಸುತ್ತೇನೆ’ ಎಂದು ಐಶ್ವರ್ಯ ನುಡಿದಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.