ಥಾಯ್ಲೆಂಡ್‌ ಓಪನ್‌ ಬಾಕ್ಸಿಂಗ್‌ ಟೂರ್ನಿ: ಸೆಮಿಫೈನಲ್‌ ಲಗ್ಗೆಯಿಟ್ಟ ಭಾಗ್ಯವತಿ ನವದೆಹಲಿ: ಭಾರತದ ಭಾಗ್ಯವತಿ ಕಚಾರಿ ಅವರು ಮಂಗಳವಾರ ಬ್ಯಾಂಕಾಂಕ್‌ನಲ್ಲಿ ನಡೆಯುತ್ತಿರುವ ಥಾಯ್ಲೆಂಡ್‌ ಓಪನ್‌ ಬಾಕ್ಸಿಂಗ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ. ಆ ಮೂಲಕ ಕನಿಷ್ಠ ಕಂಚಿನ ಪದಕ ಖಚಿತಪಡಿಸಿದರು. ಈ ವರ್ಷದ ಆರಂಭದಲ್ಲಿ ನಡೆದ ಇಂಡಿಯಾ ಓಪನ್ ಟೂರ್ನಿಯಲ್ಲಿ ಚಿನ್ನ ಜಯಿಸಿದ್ದ ಅವರು, ಮಹಿಳೆಯರ 75 ಕೆಜಿ ವಿಭಾಗದಲ್ಲಿ ವಿಯೆಟ್ನಾಂನ ಗ್ಯುಯೆನ್‌ ಹುವಾಂಗ್‌ ವಿರುದ್ಧ 5–0 ಅಂತರದ ಭರ್ಜರಿ ಜಯ ಸಾಧಿಸಿದರು. ಪುರುಷರ 69 ಕೆಜಿ ವಿಭಾಗದಲ್ಲಿ ಆಶಿಶ್‌ ಕುಮಾರ್‌ ಅವರು ಕ್ರೊವೇಷ್ಯಾದ ಪೀಟರ್‌ ಸೆಟಿನಿಕ್‌ ವಿರುದ್ಧ 5–0ಯಿಂದ ಗೆಲುವು ಕಂಡು ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದರು. ಕಾಮನ್‌ವೆಲ್ತ್‌ ಗೇಮ್ಸ್ ಕಂಚು ವಿಜೇತ ಮೊಹಮ್ಮದ್‌ ಹುಸ್ಸಾಮುದ್ದೀನ್‌ (56 ಕೆಜಿ) ಕೂಡ ಎಂಟರ ಘಟ್ಟ ಪ್ರವೇಶಿಸಿದರು. ಪ್ರಿಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಅವರು, ಬೋಟ್ಸ್‌ವಾನಾದ ಜಾರ್ಜ್‌ ಮೊಲ್ವಾಂಟ್ವಾ ಎದುರು 5–0ಯಿಂದ ಗೆಲುವಿನ ನಗೆ ಬೀರಿದರು. ಸೋಮವಾರದ ಪಂದ್ಯಗಳಲ್ಲಿ ದೀಪಕ್‌ಸಿಂಗ್‌, ನಿಖತ್‌ ಜರೀನ್‌ ಸೇರಿದಂತೆಭಾರತದ ಏಳು ಮಂದಿ ಬಾಕ್ಸರ್‌ಗಳು ಕ್ವಾರ್ಟರ್‌ಫೈನಲ್‌ ತಲುಪಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.