ಮೈಸ್ನಮ್‌, ಮಾಳವಿಕಾ ಶುಭಾರಂಭ ನವದೆಹಲಿ: ಭಾರತದ ಮೈಸ್ನಮ್‌ ಮೀರಾಬಾ ಮತ್ತು ಮಾಳವಿಕಾ ಬಾನ್ಸೋದ್‌ ಏಷ್ಯನ್‌ ಜೂನಿಯರ್‌ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಸಿಂಗಲ್ಸ್ ವಿಭಾಗದಲ್ಲಿ ಬುಧವಾರ ಗೆಲುವಿನ ಆರಂಭ ಮಾಡಿದ್ದಾರೆ. ಚೀನಾದ ಸುಜೊವ್‌ನಲ್ಲಿ ಟೂರ್ನಿ ನಡೆಯುತ್ತಿದೆ. ಜೂನಿಯರ್‌ ವಿಭಾಗದ ವಿಶ್ವ ಕ್ರಮಾಂಕದಲ್ಲಿ 14ನೇ ಸ್ಥಾನದಲ್ಲಿರುವ ಮೈಸ್ನಮ್‌, ಕಠಿಣ ಹೋರಾಟದ ಪಂದ್ಯದಲ್ಲಿ ಕೊರಿಯಾದ ಸಂಗ್‌ ಯಾಂಗ್‌ ಪಾರ್ಕ್‌ ವಿರುದ್ಧ 21–18, 17–21, 23–21ರಿಂದ ಜಯಭೇರಿ ಮೊಳಗಿಸಿದರು. ಮತ್ತೊಂದು ಪಂದ್ಯದಲ್ಲಿ 83ನೇ ಕ್ರಮಾಂಕದ ಮಾಳವಿಕಾ ಬಾನ್ಸೋದ್‌ ಅವರು 21–11, 19–21, 21–19ರಿಂದ 40ನೇ ಕ್ರಮಾಂಕದ ಆಟಗಾರ್ತಿ ವಿಯೆಟ್ನಾಂನ ಥಿ ಅನ್ ಥು ವು ಅವರನ್ನು ಮಣಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಶಂಕರ್‌ ಮುತ್ತುಸ್ವಾಮಿ ಅವರು ಬಾಂಗ್ಲಾದೇಶದ ಮೊಹಮ್ಮದ್‌ ಅಬ್ದುಲ್‌ ಹಮೀದ್‌ ಲುಕ್ಮಾನ್‌ ಅವರನ್ನು 21–1, 21–10 ಅಂತರದಿಂದ ಸೋಲಿಸಿದರೆ, ಸತೀಶ್‌ಕುಮಾರ್‌ ಕರುಣಾಕರಣ್‌ ಅವರು ಶ್ರೀಲಂಕಾದ ಲೋಚನಾ ಡಿ ಸಿಲ್ವಾ ವಿರುದ್ಧ 21–9, 21–17ರಿಂದ ಗೆದ್ದರು. ಉನ್ನತಿ ಬಿಷ್ಟ್‌ ಹಾಗೂ ಅಶಿ ರಾವತ್‌ ಕೂಡ ಸುಲಭದ ಜಯ ಸಾಧಿಸಿ ಎರಡನೇ ಸುತ್ತು ಪ್ರವೇಶಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.