ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿ: ಮುಂಬಾಗೆ ಮಣಿದ ಪಲ್ಟನ್‌ ಮುಂಬೈ: ತವರಿನ ಅಭಿಮಾನಿಗಳ ಎದುರು ಮಿಂಚಿನ ಆಟ ಆಡಿದ ಯು ಮುಂಬಾ ತಂಡ, ಪ್ರೊ ಕಬಡ್ಡಿ ಲೀಗ್ (ಪಿಕೆಎಲ್‌) ಏಳನೇ ಆವೃತ್ತಿಯ ತನ್ನ ಮೂರನೇ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ. ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ನಡೆದ ‘ಮಹಾರಾಷ್ಟ್ರ ಡರ್ಬಿ’ಯಲ್ಲಿ ಮುಂಬಾ 33–23 ಪಾಯಿಂಟ್ಸ್‌ನಿಂದ ಪುಣೇರಿ ಪಲ್ಟನ್‌ ತಂಡವನ್ನು ಪರಾಭವಗೊಳಿಸಿತು. ಈ ತಂಡದ ಅಭಿಷೇಕ್‌ ಸಿಂಗ್‌, ಯಶಸ್ವಿ ರೈಡರ್‌ ಎನಿಸಿದರು. 15 ಬಾರಿ ದಾಳಿಗಿಳಿದಿದ್ದ ಅವರು ಐದು ಪಾಯಿಂಟ್ಸ್‌ ಕಲೆಹಾಕಿದರು. ರೋಹಿತ್‌ ಬಲಿಯಾನ್‌, ಸುರೀಂದರ್‌ ಸಿಂಗ್‌, ಸಂದೀಪ್‌ ನರ್ವಾಲ್‌ ಮತ್ತು ನಾಯಕ ಫಜಲ್‌ ಅತ್ರಾಚಲಿ ಅವರು ತಲಾ ನಾಲ್ಕು ಪಾಯಿಂಟ್ಸ್‌ ಹೆಕ್ಕಿದರು. ಉಭಯ ತಂಡಗಳು ಆರಂಭದಿಂದಲೇ ಜಿದ್ದಾಜಿದ್ದಿನ ಪೈಪೋಟಿ ನಡೆಸಿದ್ದರಿಂದ 2–2 ಸಮಬಲ ಕಂಡುಬಂತು. ಈ ಹಂತದಲ್ಲಿ ಯಶಸ್ವಿ ರೈಡ್‌ ಮಾಡಿದ ಶುಭಂ ಸಿಂಧೆ, ‍ಪುಣೇರಿ ತಂಡ 3–2 ಮುನ್ನಡೆ ಪಡೆಯಲು ಕಾರಣರಾದರು. ನಂತರ ಪುಣೆ ರಕ್ಷಣಾ ವಿಭಾಗದಲ್ಲಿ ಪರಿಣಾಮಕಾರಿ ಸಾಮರ್ಥ್ಯ ತೋರಿತು. ಮುಂಬಾ ತಂಡದ ಸಂದೀಪ್‌ ನರ್ವಾಲ್‌ ಮತ್ತು ಡಾಂಗ್‌ ಕಾಂಗ್‌ ಲೀ ಅವರನ್ನು ರಕ್ಷಣಾ ಬಲೆಯೊಳಗೆ ಕೆಡವಿದ ಈ ತಂಡದವರು ಮುನ್ನಡೆಯನ್ನು 5–2ಕ್ಕೆ ಹೆಚ್ಚಿಸಿಕೊಂಡರು. ನಂತರ ಮುಂಬಾ ತಿರುಗೇಟು ನೀಡಿತು. ಈ ತಂಡ ಸತತ ಮೂರು ಪಾಯಿಂಟ್ಸ್‌ ಗಳಿಸಿ 5–5 ಸಮಬಲ ಸಾಧಿಸಿತು. ನಂತರ ಆತಿಥೇಯರ ಆಟ ಇನ್ನಷ್ಟು ರಂಗೇರಿತು. ಮೊದಲಾರ್ಧದ ಆಟ ಮುಗಿಯಲು ಕೆಲವೇ ಸೆಕೆಂಡು ಬಾಕಿ ಇದ್ದಾಗ ‘ಡೂ ಆರ್‌ ಡೈ’ ರೈಡ್‌ ಮಾಡಿದ ಅಭಿಷೇಕ್‌ ಸಿಂಗ್‌ ಎದುರಾಳಿಗಳ ರಕ್ಷಣಾ ಕೋಟೆ ಭೇದಿಸಿದರು. ಹೀಗಾಗಿ ಅತ್ರಾಚಲಿ ಪಡೆ 11–9 ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು. ದ್ವಿತೀಯಾರ್ಧದ ಶುರುವಿನಲ್ಲೇ ಪುಣೇರಿ ತಂಡವನ್ನು ಆಲೌಟ್‌ ಮಾಡಿದ ಮುಂಬಾ ಆಟಗಾರರು ಮುನ್ನಡೆಯನ್ನು 15–10ಕ್ಕೆ ಹೆಚ್ಚಿಸಿಕೊಂಡರು. ನಂತರವೂ ಪರಿಣಾಮಕಾರಿ ಆಟ ಆಡಿದ ತಂಡವು 21–12, 27–17 ಹೀಗೆ ಮುನ್ನಡೆ ಕಾಪಾಡಿಕೊಂಡು ಸಾಗಿತು. ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ, ಪಂದ್ಯಕ್ಕೂ ಮುನ್ನ ರಾಷ್ಟ್ರಗೀತೆ ಹಾಡಿದರು. ದಿನದ ಇನ್ನೊಂದು ಪಂದ್ಯದಲ್ಲಿ ಜೈಪುರ ಪಿಂಕ್‌ ಪ್ಯಾಂಥರ್ಸ್‌ 27–25ರಿಂದ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿತು. ಜೈಪುರ ತಂಡದ ದೀಪಕ್‌ ಹೂಡಾ ಮತ್ತು ಸಂದೀಪ್‌ ಧುಲ್‌ ಕ್ರಮವಾಗಿ ಆರು ಮತ್ತು ಎಂಟು ಪಾಯಿಂಟ್ಸ್‌ ಕಲೆಹಾಕಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.