400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ದಲಿಲಾ ಮೊಹಮ್ಮದ್‌ ದಾಖಲೆ ಡೆಸ್‌ ಮೊಯಿನ್ಸ್, ಅಮೆರಿಕ: ಒಲಿಂಪಿಕ್‌ ಚಾಂಪಿಯನ್‌ ಅಮೆರಿಕದ ದಲಿಲಾ ಮೊಹಮ್ಮದ್‌ ಅವರು ಮಹಿಳೆಯರ 400 ಮೀ. ಹರ್ಡಲ್ಸ್‌ನಲ್ಲಿ ಭಾನುವಾರ ವಿಶ್ವದಾಖಲೆ ನಿರ್ಮಿಸಿದ್ದಾರೆ. ಸುಮಾರು 16 ವರ್ಷಗಳ ಹಿಂದಿನ ದಾಖಲೆಯನ್ನು ಅಮೆರಿಕ ಚಾಂಪಿಯನ್‌ಷಿಪ್‌ನಲ್ಲಿ ಭಾನುವಾರ ಅಳಿಸಿ ಹಾಕಿದ್ದಾರೆ. ಮಳೆಯಿಂದ ಒದ್ದೆಯಾಗಿದ್ದ ಇಲ್ಲಿನ ಡ್ರೇಕ್‌ ಕ್ರೀಡಾಂಗಣದ ಟ್ರ್ಯಾಕ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ 52.20 ಸೆಕೆಂಡುಗಳಲ್ಲಿ ಅವರು ಗುರಿ ತಲುಪಿದರು. 2003ರಲ್ಲಿ ರಷ್ಯಾದ ಯೂಲಿಯಾ ಪೆಚೊಂಕಿನಾ 52.34 ಸೆಕೆಂಡುಗಳಲ್ಲಿ ಗುರಿಮುಟ್ಟಿ ದಾಖಲೆ ನಿರ್ಮಿಸಿದ್ದರು. 2016ರ ರಿಯೊ ಒಲಿಂಪಿಕ್ಸ್‌ನ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ದಲಿಲಾ ಚಿನ್ನ ಗೆದ್ದಿದ್ದರು. ಈ ಸಾಧನೆ ಮಾಡಿದ ಅಮೆರಿಕದ ಮೊದಲ ಅಥ್ಲೀಟ್‌ ಎಂಬ ಗೌರವ ಪಡೆದಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.