ತೆಲುಗು ಟೈಟನ್ಸ್‌ಗೆ ಭರ್ಜರಿ ಜಯ ಚೆನ್ನೈ: ಸಿದ್ಧಾರ್ಥ್‌ ದೇಸಾಯಿ ಅವರ ಅಮೋಘ ರೈಡಿಂಗ್ (18 ಪಾಯಿಂಟ್‌) ನೆರವಿನಿಂದ ತೆಲುಗು ಟೈಟನ್ಸ್ ತಂಡ ಹರಿಯಾಣ ಸ್ಟೀಲರ್ಸ್ ವಿರುದ್ಧ ಪ್ರೊ ಕಬಡ್ಡಿ ಪಂದ್ಯದಲ್ಲಿ 40–29 ಪಾಯಿಂಟ್ಸ್‌ ನಿಂದ ಭರ್ಜರಿ ಜಯ ಸಾಧಿಸಿತು. ಸಿದ್ಧಾರ್ಥ್‌, ಟೈಟನ್ಸ್‌ ತಂಡದ ಖಾತೆ ತೆರೆದರು. ಅವರು ಮೊದಲ ರೇಡ್‌ನಲ್ಲೇ ಮಿಂಚಿದರು. ಸ್ಟೀಲರ್ಸ್ ಪರ ವಿಕಾಸ್‌ ಖಂಡೋಲಾ ಮೊದಲ ಪಾಯಿಂಟ್‌ ಗಳಿಸಿದರು. ನಂತರ ಉಭಯ ತಂಡಗಳು ತುರುಸಿನ ಪೈಪೋಟಿ ನಡೆಸಿದವು. ರೈಡಿಂಗ್‌ನಲ್ಲಿ ಮಿಂಚಿದ ಟೈಟನ್ಸ್ ತಂಡವು 21–13ರ ಮುನ್ನಡೆ ಯೊಂದಿಗೆ ವಿರಾಮಕ್ಕೆ ಹೋಯಿತು. ಮೊದಲಾರ್ಧದಲ್ಲಿ ರೈಡಿಂಗ್‌ನಲ್ಲಿ ಮಿಂಚು ಹರಿಸಿದ್ದ ಸಿದ್ಧಾರ್ಥ್‌, ದ್ವಿತೀಯಾರ್ಧದಲ್ಲೂ ತಮ್ಮ ಅದ್ಭುತ ಆಟ ಮುಂದುವರಿಸಿದರು.ಪಂದ್ಯ ಮುಗಿಯಲು 13 ನಿಮಿಷಗಳು ಬಾಕಿ ಯಿರುವಾಗ ಅವರು ಸ್ಟೀಲರ್ಸ್‌ ತಂಡವನ್ನು ಆಲ್‌ ಔಟ್‌ ಮಾಡಿದರು. ಪಂದ್ಯ ಮುಕ್ತಾಯಕ್ಕೆ ಎರಡು ನಿಮಿಷ ಉಳಿದಿರುವಾಗ ವಿಕಾಸ್‌ ಖಂಡೋಲಾ ‘ಸೂಪರ್‌ ರೈಡ್‌’ ಮೂಲಕ ಸ್ಟೀಲರ್ಸ್ 27–39ರಿಂದ ಹಿನ್ನಡೆ ತಗ್ಗಿಸಿಕೊಂಡಿತು. ಪಂದ್ಯದಲ್ಲಿ ವಿಕಾಸ್‌ ಒಟ್ಟು ಒಂಬತ್ತು ರೈಡ್‌ ಪಾಯಿಂಟ್‌ ಗಳಿಸಿದರು. ಪ್ರೊ ಕಬಡ್ಡಿಯಲ್ಲಿ ಅವರು ಒಟ್ಟು 600 ರೈಡ್‌ ಪಾಯಿಂಟ್‌ ಗಳಿಸಿದ ಹಿರಿಮೆಗೂ ಭಾಜನರಾದರು. ಪಂದ್ಯ ಟೈ: ಪುಣೇರಿ ಪಲ್ಟನ್ಸ್ ಹಾಗೂ ತಮಿಳ್‌ ತಲೈವಾಸ್‌ ನಡುವಣ ಪಂದ್ಯ 31–31ರಿಂದ ಟೈ ಆಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.