ಬ್ಯಾಡ್ಮಿಂಟನ್‌ ವಿಶ್ವ ಚಾಂಪಿಯನ್‌ಷಿಪ್‌: ಪ್ರಣಯ್‌, ಪ್ರಣೀತ್‌ ಶುಭಾರಂಭ ಬಾಸೆಲ್‌, ಸ್ವಿಟ್ಜರ್ಲೆಂಡ್‌: ಭಾರತದ ಸಾಯಿ ಪ್ರಣೀತ್‌ ಹಾಗೂ ಎಚ್‌.ಎಸ್‌.ಪ್ರಣಯ್‌ ಅವರು ಬಿಡಬ್ಲ್ಯುಎಫ್‌ ವಿಶ್ವಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ. ಸೋಮವಾರ ಇಲ್ಲಿ ಆರಂಭವಾದ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗ ದಲ್ಲಿ 19ನೇ ಕ್ರಮಾಂಕದ ಪ್ರಣೀತ್‌ ಅವರು ಕೆನಡಾದ ಜೇಸನ್‌ ಅಂಥೋನಿ ಹೊ ಶುಯ್‌ ಅವರನ್ನು ಮಣಿಸಿದರು. 39 ನಿಮಿಷಗಳಲ್ಲಿ ಮುಗಿದ ಪಂದ್ಯದಲ್ಲಿ 21–17, 21–16 ಗೇಮ್‌ಗಳಿಂದ ಗೆಲುವು ಕಂಡರು. ಮೊದಲ ಸುತ್ತಿನ ಮತ್ತೊಂದು ಪಂದ್ಯದಲ್ಲಿ ಮೊದಲ ಗೇಮ್‌ ಹಿನ್ನಡೆಯಿಂದ ಚೇತರಿಸಿಕೊಂಡ ಎಚ್‌.ಎಸ್‌.ಪ್ರಣಯ್‌ ಅವರು ಫಿನ್ಲೆಂಡ್‌ನ ಈಟು ಹೇನೊ ಎದುರು 17–21, 21–10, 21–11ರಿಂದ ಜಯ ತಮ್ಮದಾಗಿಸಿಕೊಂಡರು. ಮಹಿಳಾ ಡಬಲ್ಸ್‌ನಲ್ಲೂ ಭಾರತ ಜಯದ ಸಿಹಿ ಸವಿಯಿತು. ಮೇಘನಾ ಜಕ್ಕಂಪುಡಿ– ಎಸ್‌.ಪೂರ್ವಿಶಾ ರಾಮ್‌ ಜೋಡಿಯು ಡಯಾನಾ ಕಾರ್ಲೆಟೊ ಸೊಟೊ– ನಿಕ್ಟೆ ಅಲೆಜಾಂಡ್ರೊ ಸೊಟೊಮೇಯರ್‌ ವಿರುದ್ಧ 21–10, 21–18ರಿಂದ ಜಯಭೇರಿ ಮೊಳಗಿಸಿ ಎರಡನೇ ಸುತ್ತು ಪ್ರವೇಶಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.