ಮೊದಲ ಹತ್ತರಿಂದ ನಿರ್ಗಮಿಸಿದ ಸಾತ್ವಿಕ್‌–ಚಿರಾಗ್‌ ನವದೆಹಲಿ: ಭಾರತದ ಡಬಲ್ಸ್‌ ಜೋಡಿಯಾದ ಸಾತ್ವಿಕ್‌ಸಾಯಿರಾಜ್‌ ರಣಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ, ಮಂಗಳವಾರ ಪ್ರಕಟವಾದ ಬಿಡಬ್ಲ್ಯುಎಫ್‌ ರ್‍ಯಾಂಕಿಂಗ್‌ನ ಅಗ್ರ ಹತ್ತರಿಂದ ಹೊರಬಿದಿದ್ದಾರೆ. ಭಾರತದ ಈ ಯುವ ಆಟಗಾರರ ಜೋಡಿ 13 ಟೂರ್ನಿಗಳಿಂದ 54,830 ಪಾಯಿಂಟ್‌ಗಳೊಡನೆ 13ನೇ ಸ್ಥಾನಕ್ಕೆ ಸರಿದಿದ್ದಾರೆ. ಥಾಯ್ಲೆಂಡ್‌ ಓಪನ್‌ ಸೂಪರ್ ಸರಣಿಯಲ್ಲಿ ಮೊದಲ ಬಾರಿ ಡಬಲ್ಸ್‌ ಗೆದ್ದ ಮೇಲೆ ಇವರಿಬ್ಬರು ಕಳೆದ ವಾರ 9ನೇ ಸ್ಥಾನ ಪಡೆದು ‘ಟಾಪ್‌ ಟೆನ್‌’ನಲ್ಲಿ ಪ್ರವೇಶಿಸಿದ್ದರು. ಮಹಿಳಾ ಡಬಲ್ಸ್‌ನಲ್ಲಿ, ಕಳೆದ ಭಾನುವಾರ ಹೈದರಾಬಾದ್‌ ಓಪನ್‌ ಟೂರ್ನಿಯ ರನ್ನರ್ ಅಪ್‌ ಆಗಿದ್ದ ಅಶ್ವಿನಿ ಪೊನ್ನಪ್ಪ ಮತ್ತು ಎನ್‌.ಸಿಕ್ಕಿ ರೆಡ್ಡಿ, ಆರು ಸ್ಥಾನಗಳಷ್ಟು ಮೇಲೇರಿ 17ನೇ ಸ್ಥಾನಕ್ಕೆ ಬಡ್ತಿ ಪಡೆದಿದ್ದಾರೆ. ಹೈದರಾಬಾದ್‌ ಓಪನ್‌ ಚಾಂಪಿಯನ್‌ ಸೌರಬ್‌ ವರ್ಮಾ, ಆರು ಸ್ಥಾನಗಳಷ್ಟು ಮೇಲೆ ಜಿಗಿದು 38ನೇ ಸ್ಥಾನಕ್ಕೆ ಬಂದುನಿಂತಿದ್ದಾರೆ. ಎಚ್‌.ಎಸ್‌.ಪ್ರಣಯ್‌ ಮತ್ತು ಪರುಪಳ್ಳಿ ಕಶ್ಯಪ್‌ ಕ್ರಮವಾಗಿ 30 ಮತ್ತು 31ನೇ ಸ್ಥಾನದಲ್ಲಿದ್ದಾರೆ. ಇದು ಕಳೆದ ಬಾರಿಗಿಂತ ಒಂದು ಸ್ಥಾನ ಮೇಲೆ. ಸಮೀರ್ ವರ್ಮಾ 14ನೇ ಸ್ಥಾನದಲ್ಲಿದ್ದಾರೆ. ಕಿಡಂಬಿ ಶ್ರೀಕಾಂತ್‌ ಮತ್ತು ಬಿ.ಸಾಯಿಪ್ರಣೀತ್‌ ಕ್ರಮವಾಗಿ 10 ಮತ್ತು 19ನೇ ಸ್ಥಾನದಲ್ಲಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ ಪಿ.ವಿ.ಸಿಂಧು ಮತ್ತು ಸೈನಾ ನೆಹ್ವಾಲ್‌ ಅವರು ಕ್ರಮವಾಗಿ ಐದು ಮತ್ತು ಎಂಟನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.