ಬ್ಯಾಸ್ಕೆಟ್‌ಬಾಲ್‌: ಬುಲ್ಸ್‌ ರನ್ನರ್ಸ್‌ ಅಪ್‌ ಬೆಂಗಳೂರು: ಬೆಂಗಳೂರು ಬುಲ್ಸ್‌ ತಂಡವು ಫಿಬಾ 3X3 ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್‌ ಅಪ್‌ ಆಗಿದೆ. ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಬುಲ್ಸ್‌ 13–21 ಪಾಯಿಂಟ್ಸ್‌ನಿಂದ ಪಂಜಾಬ್‌ ಸ್ಟೀಲರ್ಸ್‌ಗೆ ಮಣಿಯಿತು. ಮಂಗಳೂರಿನ ಸೌಕಿನ್‌ ಶೆಟ್ಟಿ ನೇತೃತ್ವದ ಬುಲ್ಸ್‌ ತಂಡವು ಸೆಮಿಫೈನಲ್‌ನಲ್ಲಿ 19–16ರಿಂದ ಡೆಲ್ಲಿ ವಾರಿಯರ್ಸ್‌ ವಿರುದ್ಧ ಗೆದ್ದಿತ್ತು. ಇದಕ್ಕೂ ಮೊದಲು ನಡೆದಿದ್ದ ಕ್ವಾರ್ಟರ್‌ ಫೈನಲ್‌ನಲ್ಲಿ ಸೌಕಿನ್‌ ‍ಪಡೆ 21–13ರಿಂದ ಆಂಧ್ರ ರೋವರ್ಸ್‌ ತಂಡವನ್ನು ಸೋಲಿಸಿತ್ತು. ಚಾಂಪಿಯನ್‌ ಆದ ಪಂಜಾಬ್‌ ತಂಡ ₹ 75,000 ನಗದು ಮತ್ತು ಟ್ರೋಫಿ ಪಡೆಯಿತು. ಬುಲ್ಸ್ ತಂಡಕ್ಕೆ ₹ 50,000 ನಗದು ಲಭಿಸಿತು. ಮಹಿಳಾ ವಿಭಾಗದಲ್ಲಿ ಕಣದಲ್ಲಿದ್ದ ಬೆಂಗಳೂರು ವಿಂಗ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ 15–16ರಿಂದ ಮರಾಠ ಯೋಧಾಸ್‌ ಎದುರು ನಿರಾಸೆ ಕಂಡಿತು. ಈ ವಿಭಾಗದಲ್ಲಿ ಕೊಚ್ಚಿ ಸ್ಟಾರ್ಸ್‌ ಪ್ರಶಸ್ತಿ ಗೆದ್ದಿತು. ಫೈನಲ್‌ನಲ್ಲಿ ಕೊಚ್ಚಿ 21–13ರಲ್ಲಿ ಮರಾಠ ಯೋಧಾಸ್‌ ಎದುರು ವಿಜಯಿಯಾಯಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.