ಮೆಡ್ವಡೆವ್‌ಗೆ ಸಿನ್ಸಿನಾಟಿ ಕಿರೀಟ ಸಿನ್ಸಿನಾಟಿ: ಸತತ ಎರಡು ಎಟಿಪಿ ಟೂರ್ನಿಗಳ ಫೈನಲ್ ತಲುಪಿ ನಿರಾಸೆ ಕಂಡಿದ್ದ ರಷ್ಯಾದ ಡ್ಯಾನಿಲ್‌ ಮೆಡ್ವಡೆವ್‌ ಭಾನುವಾರ ಸಿನ್ಸಿನಾಟಿ ಮಾಸ್ಟರ್ಸ್‌ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಫೈನಲ್‌ ಪಂದ್ಯದಲ್ಲಿ ಅವರು ಬೆಲ್ಜಿಯಂನ ಡೇವಿಡ್‌ ಗಫಿನ್‌ರನ್ನು 7–6, 6–4 ಸೆಟ್‌ಗಳಿಂದ ಸೋಲಿಸಿದರು. ಈ ಗೆಲುವಿನೊಂದಿಗೆ ರಷ್ಯಾ ಆಟಗಾರ ಎಟಿಪಿ‍ರ‍್ಯಾಂಕಿಂಗ್‌ನಲ್ಲಿ ಮೊದಲ ಬಾರಿ ಐದನೇ ಸ್ಥಾನಕ್ಕೆ ಜಿಗಿದರು. ಗಫಿನ್‌ ಅವರು ನಾಲ್ಕು ಸ್ಥಾನ ಏರಿಕೆ ಕಂಡು 15ನೇ ಸ್ಥಾನದಲ್ಲಿದ್ದಾರೆ. ಒಂಬತ್ತನೇ ಶ್ರೇಯಾಂಕದ ಮೆಡ್ವಡೆವ್‌ ಅವರಿಗೆ ಒಲಿದ ಮೊದಲ ಮಾಸ್ಟರ್ಸ್‌ 1000 ಟ್ರೋಫಿ ಇದು. ವಾಷಿಂಗ್ಟನ್‌ ಓಪನ್‌ ಹಾಗೂ ಮಾಂಟ್ರಿಯಲ್‌ ಟೂರ್ನಿಯಲ್ಲಿ ಫೈನಲ್‌ ತಲುಪಿದ್ದ ಅವರು ಕ್ರಮವಾಗಿ ನಿಕ್‌ ಕಿರ್ಗಿಯೋಸ್‌ ಮತ್ತು ರಫೆಲ್‌ ನಡಾಲ್‌ ವಿರುದ್ಧ ಮುಗ್ಗರಿಸಿದ್ದರು. ಸಿನ್ಸಿನಾಟಿ ಓಪನ್‌ನ ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ನೊವಾಕ್‌ ಜೊಕೊವಿಚ್‌ಗೆಮೆಡ್ವಡೆವ್‌ ಆಘಾತ ನೀಡಿದ್ದರು. ಈ ವರ್ಷ ಒಟ್ಟು 43 ಪಂದ್ಯಗಳನ್ನು ಗೆದ್ದಿರುವ ಮೆಡ್ವಡೆವ್‌ ಇದುವರೆಗೆಅತೀ ಹೆಚ್ಚು ಪಂದ್ಯ ಜಯಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ದಿಗ್ಗಜ ಆಟಗಾರರಾದ ಸ್ಪೇನ್‌ನ ರಫೆಲ್‌ ನಡಾಲ್‌ (41) ಹಾಗೂ ಸ್ವಿಟ್ಜರ್ಲೆಂಡ್‌ನ ರೋಜರ್‌ ಫೆಡರರ್‌ (39) ಅವರನ್ನು ಹಿಂದಿಕ್ಕಿದ್ದಾರೆ. ಮ್ಯಾಡಿಸನ್‌ ಕೀಸ್‌ಗೆ ಮಹಿಳಾ ಸಿಂಗಲ್ಸ್ ಗರಿ: ಅಮೆರಿಕದ ಮ್ಯಾಡಿಸನ್‌ ಕೀಸ್‌ ಮಹಿಳಾ ಸಿಂಗಲ್ಸ್ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಭಾನುವಾರ ನಡೆದ ಅಂತಿಮ ಪಂದ್ಯದಲ್ಲಿ ಅವರು ರಷ್ಯಾದ ಸ್ವೆಟ್ಲಾನಾ ಕುಜ್ನೆತ್ಸೋವಾ ಅವರನ್ನು 7–5, 7–6ರಿಂದ ಮಣಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.