ಅಥ್ಲೆಟಿಕ್ಸ್‌: ಕವಿತಾ, ಐಶ್ವರ್ಯಗೆ ಬೆಳ್ಳಿ ಲಖನೌ: ಕರ್ನಾಟಕದ ಕವಿತಾ ಯಾದವ್‌ ಮತ್ತು ಐಶ್ವರ್ಯ ಅವರು ರಾಷ್ಟ್ರೀಯ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿಯ ಪದಕಗಳನ್ನು ಗೆದ್ದಿದ್ದಾರೆ. ಪಿ.ಎ.ಸಿ.ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮಹಿಳೆಯರ 10,000 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಕವಿತಾ 37 ನಿಮಿಷ 03.16 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಟ್ರಿಪಲ್‌ ಜಂಪ್‌ ಸ್ಪರ್ಧೆಯಲ್ಲಿ ಕಣದಲ್ಲಿದ್ದ ಐಶ್ವರ್ಯ 12.85 ಮೀಟರ್ಸ್‌ ಸಾಮರ್ಥ್ಯ ತೋರಿದರು. 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಹರಿಯಾಣದ ಅಂಜಲಿ ದೇವಿ 51.53 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ವೈಯಕ್ತಿ ಶ್ರೇಷ್ಠ ಸಾಧನೆ ಮಾಡಿದರು. ಜೊತೆಗೆ ವಿಶ್ವ ಚಾಂಪಿಯನ್‌ಷಿಪ್‌ನ ಅರ್ಹತಾ ಸಮಯವನ್ನು ಸರಿಗಟ್ಟಿದರು. ಅವರು ಹೋದ ವರ್ಷವೇ ವಿಶ್ವ ಚಾಂಪಿಯನ್‌ಷಿಪ್‌ಗೆ ಅರ್ಹತೆ ಗಳಿಸಿದ್ದರು. ಪುರುಷರ ಹೈಜಂಪ್‌ನಲ್ಲಿ ಕಣಕ್ಕಿಳಿದಿದ್ದ ಕರ್ನಾಟಕದ ಬಿ.ಚೇತನ್‌ (2.19 ಮೀಟರ್ಸ್‌) ಕಂಚಿನ ಪದಕ ಪಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.