ವಾರಿಯರ್ಸ್‌ಗೆ ಮಣಿದ ತಲೈವಾಸ್‌ ನವದೆಹಲಿ: ರೈಡರ್‌ಗಳ ಉತ್ತಮ ಪ್ರದರ್ಶನದಿಂದ ಬೆಂಗಾಲ್‌ ವಾರಿಯರ್ಸ್‌ ತಂಡ, ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಗುರುವಾರ 35–26 ಪಾಯಿಂಟ್‌ಗಳಿಂದ ತಮಿಳು ತಲೈವಾಸ್‌ ತಂಡವನ್ನು ಸೋಲಿಸಿತು. ಇಲ್ಲಿನ ತ್ಯಾಗರಾಜ ಕ್ರೀಡಾ ಸಂಕೀರ್ಣದಲ್ಲಿ ನಡೆಯುತ್ತಿರುವ ಲೀಗ್‌ನ ಈ ಪಂದ್ಯದಲ್ಲಿ ಬೆಂಗಾಲ್‌ ವಾರಿಯರ್ಸ್‌ ವಿರಾಮದ ವೇಳೆ 15–14ರಲ್ಲಿ ಕೇವಲ ಒಂದು ಪಾಯಿಂಟ್‌ನ ಮುನ್ನಡೆ ಪಡೆದಿತ್ತು. ಆದರೆ ಉತ್ತರಾರ್ಧದ ಆರಂಭ ದಿಂದಲೇ ಮೇಲುಗೈ ಸಾಧಿಸಿ ಗೆಲುವನ್ನು ಖಚಿತಪಡಿಸಿಕೊಂಡಿತು. ಬೆಂಗಾಲ್ ತಂಡದ ಅನುಭವಿ ರೈಡರ್‌ಗಳಾದ ಕೆ.ಪ್ರಪಂಚನ್‌ 15 ಪಾಯಿಂಟ್ಸ್‌ ಕಲೆಹಾಕಿದರೆ, ಮಣೀಂದರ್‌ ಸಿಂಗ್‌ 9 ಪಾಯಿಂಟ್‌ಗಳ ಕೊಡುಗೆ ನೀಡಿದರು. ರಕ್ಷಣಾ ವಿಭಾಗದಲ್ಲಿ ಮಿಂಚಿದ ರಿಂಕು ನರ್ವಾಲ್‌ ಆರು ಪಾಯಿಂಟ್ಸ್‌ ಕಲೆಹಾಕಿದರು. ತಮಿಳು ತಲೈವಾಸ್‌ ಪರ, ರಾಷ್ಟ್ರೀಯ ತಂಡದ ಆಟಗಾರ ಅಜಯ್‌ ಠಾಕೂರ್‌ 11 ಪಾಯಿಂಟ್‌ ಗಳಿಸಿ ಮಿಂಚಿದರು. 11 ಪಂದ್ಯಗಳನ್ನಾಡಿರುವ ಬೆಂಗಾಲ್‌ ವಾರಿಯರ್ಸ್‌ಗೆ ಇದು ಆರನೇ ಜಯವಾಗಿದ್ದು, ಒಟ್ಟು 39 ಪಾಯಿಂಟ್ಸ್‌ ಸಂಗ್ರಹಿಸಿ ಎರಡನೇ ಸ್ಥಾನಕ್ಕೇರಿತು. ಇನ್ನೊಂದು ಕಡೆ ತಲೈವಾಸ್‌ 11 ಪಂದ್ಯಗಳಲ್ಲಿ ಆರನೇ ಸೋಲು ಕಂಡಿತು. ಶುಕ್ರವಾರದ ಪಂದ್ಯಗಳು: ತೆಲುಗು ಟೈಟನ್ಸ್ – ಪುಣೇರಿ ಪಲ್ಟನ್‌ (ರಾತ್ರಿ 7.30); ದಬಂಗ್‌ ಡೆಲ್ಲಿ– ಪಟ್ನಾ ಪೈರೇಟ್ಸ್‌ (8.30). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.