ಒಂದು ಹೆಜ್ಜೆ ಮುಂದಿಡಿ, ಜಗತ್ತನ್ನೇ ಗೆಲ್ಲುವಿರಿ | ಒಲಿಂಪಿಯನ್ ಶೋಭಾ ಸಲಹೆ ಪಶುಪತಿಹಾಳ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುತ್ತಿದ್ದ ದಿನಗಳವು. ಆಗ ಶಾಲಾ ಮಟ್ಟದ ಕ್ರೀಡಾಕೂಟದ ಕೊಕ್ಕೊ, ಕಬಡ್ಡಿ, ಕುಂಟೆಬಿಲ್ಲೆ, ಓಟದ ಸ್ಪರ್ಧೆ ಹೀಗೆ ಎಲ್ಲ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದೆ. ನಮ್ಮ ಓಟದ ಸಾಮರ್ಥ್ಯ, ಸಾಧನೆ ಇವುಗಳ ಬಗ್ಗೆ ನಮ್ಮ ಪಾಲಕರಿಗೆ ಏನೂ ಗೊತ್ತೇ ಇರಲಿಲ್ಲ. ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಓದುವಾಗ ಅಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರು ಹೇಳಿಕೊಡುತ್ತಿದ್ದ ಪಾಠವೇ ನಮಗೆ ತರಬೇತಿಯಾಗಿತ್ತು. ಓಡುವಾಗ ಶೂ ಹಾಕಿಕೊಳ್ಳಬೇಕು ಎನ್ನುವುದು ಕೂಡ ಗೊತ್ತೇ ಇರದಿದ್ದ ದಿನಗಳವು. ಮಣ್ಣಿನ ರಸ್ತೆ ಮೇಲೆ ಬರಿಗಾಲಿನಲ್ಲಿ ಓಡುತ್ತಿದ್ದೆವು. ಶಾಲಾ ಹಂತದಲ್ಲಿ ಸಾಕಷ್ಟು ಪದಕಗಳನ್ನು ಗೆಲ್ಲುತ್ತಿದ್ದೆ. ನನ್ನ ಸಹೋದರಿ ಶಶಿಕಲಾ ಕೂಡ ಉತ್ತಮ ಓಟಗಾರ್ತಿ. ಆಕೆ ಹಾಗೂ ನಾನು ಪರಸ್ಪರ ಪೈಪೋಟಿಯಿಂದ ಪದಕ ಗೆಲ್ಲುತ್ತಿದ್ದೆವು. ಅದೊಮ್ಮೆ ಧಾರವಾಡದಲ್ಲಿ ಕ್ರೀಡಾ ವಸತಿ ನಿಲಯಕ್ಕೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ ನಡೆದಾಗ ಪಾಲ್ಗೊಂಡಿದ್ದೆ. ಮುಂದೆ ಕೊಡಗು ಕ್ರೀಡಾ ಹಾಸ್ಟೆಲ್‌ನಲ್ಲಿ ಅವಕಾಶ ಸಿಕ್ಕಿತು. ಅಲ್ಲಿಂದ ನನ್ನ ಬದುಕಿನ ಹಾದಿ ಬದಲಾಯಿತು. ಅಲ್ಲಿಗೆ ಹೋದ ಬಳಿಕವೇ ಓಡುವಾಗ ಶೂ ಹಾಕಿಕೊಳ್ಳಬೇಕು ಎನ್ನುವುದು ಗೊತ್ತಾಯಿತು. ಜೆರ್ಸಿ, ಟ್ರ್ಯಾಕ್ ಶೂಟ್‌ ಧರಿಸಬೇಕು ಎನ್ನುವುದು ತಿಳಿಯಿತು. ನಾನು ಏನೇ ಮಾಡಿದರೂ ಮನೆಯವರು ಬೆಂಬಲ ಕೊಡುತ್ತಿದ್ದರು. ಇದರಿಂದ ಪಶುಪತಿಹಾಳದಿಂದ ಕೊಡಗಿಗೆ ಹೋಗಿ ಅಲ್ಲಿಂದ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದ ಸ್ಪರ್ಧೆಗಳ ತನಕ ಓಟದ ಹರವು ವಿಸ್ತರಿಸಲು ಸಾಧ್ಯವಾಯಿತು. ಆದ್ದರಿಂದ ಈಗಿನ ಮಕ್ಕಳಿಗೂ ಅದೇ ಹೇಳಲು ಬಯಸುತ್ತೇನೆ. ಪಾಲಕರ ಪ್ರೀತಿ, ವಿಶ್ವಾಸ ಗಳಿಸಿ ಸಾಧನೆ ಮಾಡುವ ಕನಸು ಕಂಡು ಒಂದು ಹೆಜ್ಜೆ ಮುಂದಿಡಿ, ಜಗತ್ತೇ ನಿಮ್ಮತ್ತ ನೋಡುವಂತೆ ಮಾಡಬಹುದು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಆರಂಭಿಸಿದ ದಿನಗಳಲ್ಲಿ ನಮ್ಮ ಕಡೆ ಮೊಬೈಲ್‌ ಇರಲಿಲ್ಲ. ಈಗಿನಷ್ಟು ತಂತ್ರಜ್ಞಾನ ಮತ್ತು ಸೌಲಭ್ಯಗಳು ಇರಲಿಲ್ಲ. ಅವಕಾಶಗಳು ಕೂಡ ಕಡಿಮೆಯೇ. ಆದರೆ ಈಗಿನ ಮಕ್ಕಳಿಗೆ ಅಂಗೈಯಲ್ಲಿಯೇ ಜಗತ್ತು ನೋಡಲು ಸಾಧ್ಯವಿದೆ. ಶಾಲಾ ಹಂತದ ಟೂರ್ನಿಗಳು, ಖೇಲೊ ಇಂಡಿಯಾ ಕ್ರೀಡಾಕೂಟಗಳು, ರಾಜ್ಯ ಮಟ್ಟದ ಜೂನಿಯರ್‌ ಹಾಗೂ ಸೀನಿಯರ್‌ ಹಂತದ ಅಥ್ಲೆಟಿಕ್ಸ್‌ ಸ್ಪರ್ಧೆಗಳು ನಡೆಯುತ್ತವೆ. ಅನೇಕ ಸಂಘ, ಸಂಸ್ಥೆಗಳು ಕ್ರೀಡಾಕೂಟಗಳನ್ನು ಸಂಘಟಿಸುತ್ತವೆ. ಇವುಗಳ ಅವಕಾಶ ಪಡೆದುಕೊಳ್ಳಬೇಕು. ನಾವು ಮೊದಲು ನಮ್ಮೂರಿನಿಂದ ಒಂದು ಹೆಜ್ಜೆ ಮುಂದಿಡುವ ಧೈರ್ಯ ಮಾಡಬೇಕು. ಇಂದು ಸಣ್ಣ ನಿರ್ಧಾರವೇ ಆಗಿರಬಹುದು; ಆದರೆ ಬದುಕನ್ನು ದೊಡ್ಡ ಸಾಧನೆಯೆಡೆಗೆ ಕರೆದುಕೊಂಡು ಹೋಗುತ್ತದೆ. ನನಗೆ ಈಗಲೂ ಗ್ರಾಮೀಣ ಭಾಗದ ಮಕ್ಕಳ ಮೇಲೆ ಸಾಕಷ್ಟು ನಂಬಿಕೆ ಹಾಗೂ ಭರವಸೆಯಿದೆ. ಅವರಲ್ಲಿ ಸಾಧಿಸುವ ಛಲವಿದೆ. ಜೀವನದಲ್ಲಿ ಏನಾದರೂ ದೊಡ್ಡ ಸಾಧನೆ ಮಾಡಬೇಕು ಎನ್ನುವ ತುಡಿತವಿದೆ. ಅವರು ತಮ್ಮ ಆಸೆಯನ್ನು ಪೋಷಕರ ಮುಂದೆ ವ್ಯಕ್ತಪಡಿಸಬೇಕು. ಕೋಚ್‌ಗಳ ಸಹಾಯ ಪಡೆದು ಸೌಲಭ್ಯಗಳು ಇರುವ ಕಡೆ ಹೋಗಬೇಕು. ಆಗ ನಾವು ಅಭ್ಯಾಸ ಮಾಡುವಾಗ ಧಾರವಾಡದಲ್ಲಿ ಆರ್‌.ಎನ್‌. ಶೆಟ್ಟಿ ಕ್ರೀಡಾಂಗಣದಲ್ಲಿ ಮಾತ್ರ ಸಿಂಥೆಟಿಕ್‌ ಟ್ರ್ಯಾಕ್‌ ಇತ್ತು. ಈಗಲೂ ಇಡೀ ಜಿಲ್ಲೆಯ ಕ್ರೀಡಾಪಟುಗಳಿಗೆ ಅದೊಂದೇ ಟ್ರ್ಯಾಕ್‌. ಜಿಲ್ಲೆಯ ಎಲ್ಲ ತಾಲ್ಲೂಕು ಕ್ರೀಡಾಂಗಣಗಳಲ್ಲಿ ಟ್ರ್ಯಾಕ್‌ ಇದ್ದರೆ ಸ್ಥಳೀಯರು ಹೊರಗಡೆ ಹೋಗುವುದನ್ನು ತಡೆಯಬಹುದು. ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು, ಕ್ರೀಡಾ ಇಲಾಖೆಯ ಅಧಿಕಾರಿಗಳು ತುರ್ತಾಗಿ ಗಮನಹರಿಸುವ ಅಗತ್ಯವಿದೆ. ನಮ್ಮೂರ ‌ಹೆಮ್ಮೆ ಶೋಭಾ ಕುಂದಗೋಳ ತಾಲ್ಲೂಕಿನ ಪಶುಪತಿಹಾಳ ಗ್ರಾಮದ ಜೆ.ಜೆ. (ಜಾವೂರು ಜಗದೀಶಪ್ಪ) ಶೋಭಾ, ಧಾರವಾಡ ಜಿಲ್ಲೆಯ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಳಗಿಸಿದ್ದಾರೆ. ಶೋಭಾ 2004ರಲ್ಲಿ ಅಥೆನ್ಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು. 2002ರ ಬೂಸಾನ್‌ ಹಾಗೂ 2006ರ ದೋಹಾ ಏಷ್ಯನ್‌ ಕ್ರೀಡಾಕೂಟದಲ್ಲಿ ಕಂಚಿನ ಪದಕ, 2003ರಲ್ಲಿ ಹೈದರಾಬಾದ್‌ನಲ್ಲಿ ಜರುಗಿದ್ದ ಅಫ್ರೋ ಏಷ್ಯನ್‌ ಕ್ರೀಡಾಕೂಟ, 2002 ಮತ್ತು 2007ರ ಏಷ್ಯನ್‌ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ. ಪಶುಪತಿಹಾಳ ಎಂಬ ಸಣ್ಣ ಗ್ರಾಮದಲ್ಲಿ ಹುಟ್ಟಿದ ಶೋಭಾ ವಿಶ್ವವೇದಿಕೆಯಲ್ಲಿ ದೇಶದ ಘನತೆ ಎತ್ತಿ ಹಿಡಿದು ಎಲ್ಲರಿಗೂ ಪ್ರೇರಣೆಯಾಗಿದ್ದಾರೆ. ಈಗ ರೈಲ್ವೆ ಇಲಾಖೆಯಲ್ಲಿ ಸಿಕಂದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ನಿರೂಪಣೆ: ಪ್ರಮೋದ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.