ಉದ್ಯಾನ ನಗರಿಯಲ್ಲಿ ಫಿಟ್‌ನೆಸ್ ‘ಓಟ’ ಜಿನ್ಸನ್ ಜಾನ್ಸನ್... ಕಳೆದ ವರ್ಷ ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಟ್ರ್ಯಾಕ್‌ ವಿಭಾಗದಲ್ಲಿ ಭಾರತಕ್ಕೆ ಎರಡು ಪದಕಗಳನ್ನು ಗಳಿಸಿಕೊಟ್ಟ ಓಟಗಾರ. 800 ಮೀಟರ್ಸ್ ಓಟದಲ್ಲಿ ಮನ್‌ಜೀತ್ ಸಿಂಗ್ ಅವರಿಗೆ ತೀವ್ರ ಪೈಪೋಟಿ ನೀಡಿ ಕೊನೆಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡ ಕೇರಳದ ಜಿನ್ಸನ್ 1500 ಮೀಟರ್ಸ್‌ ಓಟದಲ್ಲಿ ಮನ್‌ಜೀತ್‌ಗೇ ನಿರಾಸೆ ಮೂಡಿಸಿ ಚಿನ್ನ ಗೆದ್ದು ಸಂಭ್ರಮಿಸಿದರು. ಈ ವರ್ಷದ ಮಾರ್ಚ್ ತಿಂಗಳಲ್ಲಿ ಕೇರಳದವರೇ ಆದ ಮತ್ತೊಬ್ಬ ಅಥ್ಲೀಟ್‌ ಗಮನ ಸೆಳೆದರು. ದೂರ ಅಂತರದ ಓಟಗಾರ ಗೋಪಿ ತೋಣಕ್ಕಲ್ ಅವರು ಸೋಲ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಮ್ಯಾರಥಾನ್‌ನಲ್ಲಿ 11ನೇ ಸ್ಥಾನ ಗಳಿಸಿದರು. ಈ ಮೂಲಕ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಳಿಸಿದರು. 2 ತಾಸು 13 ನಿಮಿಷ 39 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಅವರು ಈಗ ಶಿವನಾಥ್ ಸಿಂಗ್ (2 ತಾಸು 12 ನಿಮಿಷ) ಅವರ ಹೆಸರಿನಲ್ಲಿರುವ ನಾಲ್ಕು ದಶಕಗಳ ದಾಖಲೆಯನ್ನು ಮುರಿಯುವ ಹುಮ್ಮಸ್ಸಿನಲ್ಲಿದ್ದಾರೆ. ಇವರಿಬ್ಬರೂ ಈಗ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ನಿರೀಕ್ಷೆಯಲ್ಲಿದ್ದಾರೆ. ಇದಕ್ಕಾಗಿ ಬೆಂಗಳೂರಿನ ಭಾರತ ಕ್ರೀಡಾ ಪ್ರಾಧಿಕಾರದ ಆವರಣದಲ್ಲಿ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಓಟ ಎಂದರೆ ವೇಗದೊಂದಿಗೆ ದೇಹವೂ ಫಿಟ್ ಆಗಿರಬೇಕು. ಆದ್ದರಿಂದ ಫಿಟ್‌ನೆಸ್ ಕಡೆಗೂ ಗಮನ ನೀಡಿದ್ದಾರೆ. ಹೀಗಿದೆ ಅಥ್ಲೀಟ್‌ಗಳ ಫಿಟ್‌ನೆಸ್ ತಂತ್ರ–ಮಂತ್ರ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಬೇಕಾದರೆ ವೇಗ ಮತ್ತು ಕ್ಷಮತೆ ಬೇಕು. ಇದನ್ನು ಸಾಧಿಸಿಕೊಳ್ಳಲು ಸೂಕ್ತ ವ್ಯಾಯಾಮ ಬೇಕು. ಉದ್ಯಾನ ನಗರಿಯಲ್ಲಿ ಜಿನ್ಸನ್ ಮತ್ತು ಗೋಪಿಗೆ ಪೋಲೆಂಡ್‌ನ ಪೀಟರ್ ಮತ್ತು ಕೀಗಾ ಫಿಟ್‌ನೆಸ್ ತರಬೇತಿ ನೀಡುತ್ತಿದ್ದಾರೆ. ದೂರ ಅಂತರದ ಓಟಗಾರರಿಗೆ ಮಸಾಜ್ ಮಾಡಲು ಹ್ಯೂಜೀನ್ ಕೂಡ ಇದ್ದಾರೆ. ಫಿಟ್‌ನೆಸ್‌ಗೆ ಅನುಸರಿಸುವ ಮಾರ್ಗಗಳ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಜಿನ್ಸನ್ ಜಾನ್ಸನ್ ‘ವೇಗಕ್ಕೆ ಬೇಕಾದಂತೆ ದೈಹಿಕ ಕ್ಷಮತೆಯನ್ನು ಉಳಿಸಿಕೊಳ್ಳಲು ಪ್ರತ್ಯೇಕ ತರಬೇತಿ ಸಿಗುತ್ತಿದೆ. ಎಲ್ಲವನ್ನೂ ಸರಿದೂಗಿಸಿಕೊಂಡು ಹೋಗಲು ಇಲ್ಲಿನ ಹವಾಗುಣವೂ ನೆರವಾಗುತ್ತಿದೆ’ ಎಂದರು. ಮಧ್ಯಮ ದೂರ ಓಟಗಾರರಿಗೂ ದೀರ್ಘ ಅಂತರದ ಓಟಗಾರರಿಗೂ ನೀಡುವ ಫಿಟ್‌ನೆಸ್ ತರಬೇತಿಯಲ್ಲಿ ವ್ಯತ್ಯಾಸವಿದೆ.‘ಜಿಮ್‌ನಲ್ಲಿ ಹೆಚ್ಚು ವರ್ಕ್‌ಔಟ್ ಮಾಡುತ್ತೇನೆ. ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಸತತ ಅಭ್ಯಾಸ ಮಾಡುತ್ತಿದ್ದೇನೆ. ಒಮ್ಮೊಮ್ಮೆ ಊಟಿಗೂ ಹೋಗುತ್ತೇನೆ. ಬೆಂಗಳೂರು ಮತ್ತು ಊಟಿಯಲ್ಲಿ ಅಥ್ಲೆಟಿಕ್ಸ್ ಮತ್ತು ಫಿಟ್‌ನೆಸ್ ಅಭ್ಯಾಸಕ್ಕೆ ಅನುಕೂಲಕರ ಹವಾಗುಣ ಇರುವುದರಿಂದ ಭೂತಾನ್‌ನಂಥ ಪ್ರದೇಶಗಳಿಗೆ ಹೋಗುವ ಅನಿವಾರ್ಯ ಸ್ಥಿತಿ ಎದುರಾಗಲಿಲ್ಲ’ ಎಂಬುದು ಗೋಪಿ ಅವರ ವಿವರಣೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.