ಅಥ್ಲೆಟಿಕ್ಸ್‌: ವಿದ್ಯಾಸಾಗರ್‌ಗೆ ಚಿನ್ನ ಲಖನೌ: ಕರ್ನಾಟಕದ ವಿದ್ಯಾಸಾಗರ್ ಇಲ್ಲಿ ನಡೆಯುತ್ತಿರುವ ಅಂತರರಾಜ್ಯ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ ಪುರುಷರ 100 ಮೀಟರ್ಸ್ ಓಟದಲ್ಲಿ ಶುಕ್ರವಾರ ಚಿನ್ನ ಗೆದ್ದರು. ಅವರು 10.59 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಹರಿಯಾಣದ ನುಜ್ರತ್ ಅಲಿ ಮತ್ತು ಪಶ್ಚಿಮ ಬಂಗಾಳದ ಶಫೀಕುಲ್ ಮೊಂಡಲ್ ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗೆದ್ದರು. ‌4x100 ಮೀಟರ್ಸ್ ರಿಲೆಯಲ್ಲೂ ಕರ್ನಾಟಕ ಚಿನ್ನ ಗೆದ್ದಿತು. ಸುಹಾಸ್ ಗೌಡ, ವಿದ್ಯಾಸಾಗರ್, ರೋಹಿತ್ ಮತ್ತು ರೋಹನ್ ಅವರನ್ನು ಒಳಗೊಂಡ ತಂಡ 41.43 ಸೆಕೆಂಡುಗಳಲ್ಲಿ ಗುರಿ ಮುಟ್ಟಿತು. ಅವಿನಾಶ್ ಸಬ್ಲೆ ಮತ್ತು ಮುರಳಿ ಶ್ರೀಶಂಕರ್ ಕ್ರಮವಾಗಿ 3000 ಮೀಟರ್ಸ್ ಸ್ಟೀಪಲ್ ಚೇಸ್ ಮತ್ತು ಲಾಂಗ್ ಜಂಪ್‌ನಲ್ಲಿ ಚಿನ್ನ ಗೆದ್ದರು. ಮಹಾರಾಷ್ಟ್ರದ ಸಬ್ಲೆ 8 ನಿಮಿಷ 33.19 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕೂಟ ದಾಖಲೆ ನಿರ್ಮಿಸಿದರು. ಆದರೆ ಅವರಿಗೆ ತಮ್ಮದೇ ಹೆಸರಿನಲ್ಲಿರುವ ರಾಷ್ಟ್ರೀಯ ದಾಖಲೆ (8 ನಿಮಿಷ 28.94 ಸೆ) ಮುರಿಯಲು ಆಗಲಿಲ್ಲ. ಕೇರಳದ ಶ್ರೀಶಂಕರ್ 7.83 ಮೀಟರ್ಸ್ ದೂರ ಜಿಗಿದು ಚಿನ್ನ ಗಳಿಸಿದರು. ಅವರ ವೈಯಕ್ತಿಕ ಗರಿಷ್ಠ ಸಾಧನೆ 8.20 ಮೀಟರ್ಸ್ ಆಗಿದೆ. ಒಡಿಶಾದ ದ್ಯುತಿ ಚಾಂದ್ ಮಹಿಳೆಯರ 100 ಮೀಟರ್ಸ್ ಓಟದಲ್ಲಿ 11.38 ಸೆಕೆಂಡುಗಳ ಸಾಧನೆ ಮಾಡಿ ಚಿನ್ನ ಗೆದ್ದರು. ಆದರೆ ಅವರಿಗೆ ವಿಶ್ವ ಚಾಂಪಿಯನ್‌ಷಿಪ್‌ಗೆ (11.24 ಸೆ) ಅರ್ಹತೆ ಗಳಿಸಲು ಆಗಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.