ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ : ಕರುಣಾ, ಸುಜನ್‌ಗೆ ಪ್ರಶಸ್ತಿ ಹೊಸಪೇಟೆ: ಬಳ್ಳಾರಿ ಜಿಲ್ಲಾ ಟೇಬಲ್‌ ಟೆನಿಸ್‌ ಅಸೋಸಿಯೇಶನ್‌ನಿಂದ ಇಲ್ಲಿನ ತುಂಗಭದ್ರಾ ರಿಕ್ರಿಯೇಷನ್‌ ಕ್ಲಬ್‌ನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಜ್ಯ ರ್‍ಯಾಂಕಿಂಗ್‌ ಟೇಬಲ್‌ ಟೆನಿಸ್‌ ಪಂದ್ಯಾವಳಿಯ ಯುತ್‌ ಬಾಲಕಿಯರ ವಿಭಾಗದಲ್ಲಿ ಬೆಂಗಳೂರಿನ ಕರುಣಾ ಗಜೇಂದ್ರನ್‌, ಬಾಲಕರ ವಿಭಾಗದಲ್ಲಿ ಸುಜನ್‌ ಆರ್‌. ಭಾರದ್ವಾಜ್‌ ಪ್ರಶಸ್ತಿ ಜಯಿಸಿದ್ದಾರೆ. ಪ್ರಶಸ್ತಿಗಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಕರುಣಾ ಅವರು ಬೆಂಗಳೂರಿನವರೇ ಆದ ಸುಶ್ಮಿತಾ ಆರ್‌. ಬಿದ್ರಿ ಅವರನ್ನು 4–2ರಿಂದ ಮಣಿಸಿದರು. 11–7, 11–8, 9–11, 11–7, 6–11, 11–5 ಸೆಟ್‌ಗಳಿಂದ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡರು. ಬಾಲಕರ ವಿಭಾಗದ ಅಂತಿಮ ಪಂದ್ಯದಲ್ಲಿ ಸುಜನ್‌ ಅವರು ಬೆಂಗಳೂರಿನ ಕೌಸ್ತುಭ್‌ ಮಿಲಿಂದ್‌ ಕುಲಕರ್ಣಿ ಅವರನ್ನು 4–1ರಿಂದ ಪರಾಭವಗೊಳಿಸಿದರು. ಮೊದಲ ಸುತ್ತಿನಲ್ಲಿ ಸುಜನ್‌ ಜಯಿಸಿದರೆ, ಎರಡನೇ ಸುತ್ತಿನಲ್ಲಿ ಕೌಸ್ತುಭ್‌ ಜಯ ಸಾಧಿಸಿ ಸಮಬಲ ಸಾಧಿಸಿದರು. ಆದರೆ, ನಂತರದ ಮೂರು ಸುತ್ತುಗಳಲ್ಲಿ ಸುಜನ್‌ ಪಾರಮ್ಯ ಮೆರೆದು ಪ್ರಶಸ್ತಿ ಗೆದ್ದರು. 11–5, 8–11, 11–2, 12–10, 11–9 ಸೆಟ್‌ಗಳಿಂದ ಸೋಲಿಸಿ ಸುಜನ್‌ ಗೆಲುವಿನ ದಡ ಸೇರಿದರು. ಇದಕ್ಕೂ ಮುನ್ನ ನಡೆದ ಬಾಲಕಿಯರ ವಿಭಾಗದ ಸೆಮಿಫೈನಲ್‌ನಲ್ಲಿ ಕರುಣಾ ಅವರು ಬೆಂಗಳೂರಿನ ಕೌಮುದಿ ಪಟ್ನಾಕರ್‌ ಅವರನ್ನು 4–1ರಿಂದ ಸೋಲಿಸಿದರು. 11–4, 7–11, 11–6, 11–5, 11–7 ಸೆಟ್‌ಗಳಿಂದ ಪರಾಭವಗೊಳಿಸಿ, ಅಂತಿಮ ಘಟಕ್ಕೆ ಪ್ರವೇಶಿಸಿದರು. ಇನ್ನೊಂದು ಸೆಮಿಫೈನಲ್‌ನಲ್ಲಿ ಸುಶ್ಮಿತಾ ಹಾಗೂ ಬೆಂಗಳೂರಿನ ವಿ. ಖುಷಿ ನಡುವೆ ಪ್ರಶಸ್ತಿಗಾಗಿ ತೀವ್ರ ಸೆಣಸಾಟ ನಡೆಯಿತು. ಸುಶ್ಮಿತಾ ಅವರು ಅಂತಿಮವಾಗಿ 4–3ರಿಂದ ಮಣಿಸಿದರು. 9–11, 11–9, 3–11, 11–9, 11–7, 6–11, 11–8 ಸೆಟ್‌ಗಳಿಂದ ಸೋಲಿಸಿದರು. ಬಾಲಕರ ವಿಭಾಗದ ಮೊದಲ ಸೆಮಿಫೈನಲ್‌ನಲ್ಲಿ ಸುಜನ್‌ ಅವರು ಬೆಂಗಳೂರಿನ ರೋಹನ್‌ ಎಸ್‌. ಜಮದಗ್ನಿ ಅವರನ್ನು 4–2ರಿಂದ ಸೋಲಿಸಿದರು. ಮೊದಲ ಎರಡು ಸೆಟ್‌ಗಳಲ್ಲಿ ರೋಹನ್‌ ವಿರುದ್ಧ ಸೋಲು ಅನುಭವಿಸಿದ ಸುಜನ್‌, ನಂತರ ಪುಟಿದೆದ್ದು, ಸತತ ನಾಲ್ಕು ಸೆಟ್‌ಗಳಲ್ಲಿ ಜಯಿಸಿ ಅಂತಿಮ ಘಟಕ್ಕೆ ತಲುಪಿದರು. ಫಲಿತಾಂಶ ಹೀಗಿದೆ. 4–11, 5–11, 13–11, 11–8, 15–13, 11–8. ಇನ್ನೊಂದು ಸೆಮಿಫೈನಲ್‌ನಲ್ಲಿ ಕೌಸ್ತುಭ್‌ ಅವರು, ಬೆಂಗಳೂರಿನ ನೀರಜ್‌ ರಾಜ್‌ ಅವರನ್ನು 4–2ರಿಂದ ಸೋಲಿಸಿದರು. 7–11, 11–6, 14–12, 11–9, 5–11, 11–5 ಸೆಟ್‌ಗಳಿಂದ ಮಣಿಸಿ ಅಂತಿಮ ಘಟ್ಟಕ್ಕೆ ಕೌಸ್ತುಭ್‌ ಪದಾರ್ಪಣ ಮಾಡಿದರು. ಜೂನಿಯರ್‌ ಬಾಲಕ/ಬಾಲಕಿಯರ ವಿಭಾಗ, ಸಬ್‌ ಜೂನಿಯರ್‌ ಬಾಲಕ/ಬಾಲಕಿಯರ ವಿಭಾಗ, ಕೆಡೆಟ್‌ ಬಾಲಕ/ಬಾಲಕಿಯರ ವಿಭಾಗದ ಪಂದ್ಯಗಳು ಶನಿವಾರ ನಡೆಯಲಿವೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.