ಶೂಟಿಂಗ್: ಮನು ಭಾಕರ್‌ಗೆ ಚಿನ್ನ ಭೋಪಾಲ್ : ಹರಿಯಾಣದ ಮನು ಭಾಕರ್ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಚಿನ್ನ ಡಬಲ್ ಸಾಧನೆ ಮಾಡಿದರು. 17 ವರ್ಷದ ಮನು ಮಹಿಳೆಯರ ಸೀನಿಯರ್ ಮತ್ತು ಜೂನಿಯರ್‌ ವಿಭಾಗಗಳಲ್ಲಿ 10 ಮೀಟರ್ಸ್‌ ಏರ್‌ ಪಿಸ್ತೂಲ್ ಶೂಟಿಂಗ್‌ನಲ್ಲಿ ಪ್ರಥಮ ಸ್ಥಾನ ಗಳಿಸಿದರು. ಸೀನಿಯರ್ ಫೈನಲ್‌ನಲ್ಲಿ ಅವರು 243 ಪಾಯಿಂಟ್ಸ್‌ ಗಳಿಸಿದರು. ಜೂನಿಯರ್ ವಿಭಾಗದಲ್ಲಿ 241 ಅಂಕಗಳನ್ನು ತಮ್ಮದಾಗಿಸಿಕೊಂಡರು. ಯೂತ್ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿರುವ ಮನು, ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶದ ಅರ್ಹತೆಗಾಗಿ 588 ಪಾಯಿಂಟ್ಸ್‌ ಸಂಗ್ರಹಿಸಿದರು. ಸೀನಿಯರ್ ವಿಭಾಗದಲ್ಲಿ ದೇವಾಂಶಿ ಧಾಮಾ ಮತ್ತು ಯಶಸ್ವಿನಿ ಸಿಂಗ್ ದೇಶ್ವಾಲ್ ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಗಳಿಸಿದರು. ಮನು ಮತ್ತು ಯಶಸ್ವಿನಿ ಅವರು ಈಗಾಗಲೇ ಟೋಕಿಯೊ ಒಲಿಂಪಿಕ್ಸ್‌ಗಾಗಿ ಅರ್ಹತೆ ಗಿಟ್ಟಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.