ಮಾಳವಿಕಾಗೆ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿ ಮಾಲೆ, ಮಾಲ್ಡೀವ್ಸ್: ಭಾರತದ ಯುವ ಶಟ್ಲರ್‌ ಮಾಳವಿಕಾ ಬನ್ಸೋಡ್‌ ಅವರು ಮಾಲ್ಡೀವ್ಸ್ ಫ್ಯೂಚರ್‌ ಸಿರೀಸ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಪ್ರಶಸ್ತಿಗೆ ಮುತ್ತಿಕ್ಕಿದ್ದಾರೆ. ಭಾನುವಾರ ತಡರಾತ್ರಿ ನಡೆದ ಮಹಿಳಾ ಸಿಂಗಲ್ಸ್ ಫೈನಲ್‌ ಪಂದ್ಯದಲ್ಲಿ ಅವರು ಮ್ಯಾನ್ಮಾರ್‌ನ ಥೆಟ್‌ ತಾರ್‌ ಥುಜರ್‌ ಎದುರು 21–13, 21–11 ಗೇಮ್‌ಗಳಿಂದ ಅವರು ಗೆದ್ದರು. ಶ್ರೇಯಾಂಕರಹಿತ ಮಾಳವಿಕಾ ಅವರಿಗೆ ಅಗ್ರಶ್ರೇಯಾಂಕದ ಆಟಗಾರ್ತಿ ಥೆಟ್‌ ಸಾಟಿಯಾಗಲೇ ಇಲ್ಲ. ಇದೇ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಕೆವಿನ್‌ ಅರೋಕಿಯಾ ವಾಲ್ಟರ್‌ ರನ್ನರ್ಸ್ ಅಪ್‌ ಸ್ಥಾನ ತಮ್ಮದಾಗಿಸಿಕೊಂಡರು. ಫೈನಲ್‌ ಹಣಾಹಣಿಯಲ್ಲಿ ಅವರು ಎರಡನೇ ಶ್ರೇಯಾಂಕದ ಥಾಯ್ಲೆಂಡ್‌ ಆಟಗಾರ ಕಂಟಾವಟ್‌ ಲೀಲಾವೆಚ್‌ಬುತರ್‌ ವಿರುದ್ಧ 13–21, 14–21ರಿಂದ ಸೋತರು. ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ವೈಭವ್‌–ಪ್ರಕಾಶ್‌ ರಾಜ್‌ ಜೋಡಿಯು ಕಿರೀಟ ಮುಡಿಗೇರಿಸಿಕೊಂಡಿತು. ಅಂತಿಮ ಹಣಾಹಣಿಯಲ್ಲಿ ಈ ಜೋಡಿಯು ಥಾಯ್ಲೆಂಡ್‌ನ ಪಕ್ಕಾಪೊನ್‌ ತೀರಾರತ್ಸಕುಲ್‌–ಪಾನಿಚ್‌ಪೊನ್‌ತೀರಾರತ್ಸಕುಲ್‌ ಎದುರು 21–16, 21–15ರಿಂದ ಗೆದ್ದಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.