ವಿಶ್ವ ಅಥ್ಲೆಟಿಕ್ಸ್‌: ಹಿಂದೆ ಸರಿದ ಕ್ರಿಶ್ಚಿಯನ್ ಕೋಲ್‌ಮ್ಯಾನ್ ದೋಹಾ: ಅಮೆರಿಕದ ವೇಗದ ಓಟಗಾರ ಕ್ರಿಸ್ಟಿಯನ್ ಕೋಲ್ಮನ್ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ನ 200 ಮೀಟರ್ಸ್ ಓಟದ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಶನಿವಾರ ನಡೆದಿದ್ದ 100 ಮೀಟರ್ಸ್ ಓಟದಲ್ಲಿ 9.76 ಸೆಕೆಂಡುಗಳ ಸಾಧನೆಯೊಂದಿಗೆ ಅವರು ಚಿನ್ನ ಗೆದ್ದಿದ್ದರು. ಭಾನುವಾರ ನೋವು ಕಾಣಿಸಿಕೊಂಡಿದ್ದ ಕಾರಣ 200 ಮೀಟರ್ಸ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳದೇ ಇರಲು ನಿರ್ಧರಿಸಿದರು. ಭಾನುವಾರ ಸಂಜೆ ನಡೆದ ಎರಡನೇ ಹೀಟ್ಸ್‌ನಲ್ಲಿ ಕೋಲ್ಮನ್ ಸ್ಪರ್ಧಿಸಬೇಕಾಗಿತ್ತು. ಆದರೆ ಆರಂಭಕ್ಕೆ ಕೆಲವು ತಾಸುಗಳ ಮೊದಲು ಬಿಡುಗಡೆ ಮಾಡಲಾದ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ. ‘ಶನಿವಾರ ರಾತ್ರಿ ವೈಯಕ್ತಿಕ ಶ್ರೇಷ್ಠ ಸಾಧನೆಯೊಂದಿಗೆ ಕೋಲ್ಮನ್ ಚಿನ್ನ ಗೆದ್ದಿದ್ದರು. ಆಗ ಅವರಿಗೆ ನೋವು ಕಾಣಿಸಿಕೊಂಡಿತ್ತು’ ಎಂದು ಮ್ಯಾನೇಜರ್ ಇಮ್ಯಾನುಯೆಲ್ ಹಡ್ಸನ್ ತಿಳಿಸಿದ್ದಾರೆ. ದ್ಯುತಿ ಚಾಂದ್, ಜಬೀರ್‌ಗೆ ನಿರಾಸೆ: ಭಾರತದ ವೇಗದ ಓಟಗಾರ್ತಿ ದ್ಯುತಿ ಚಾಂದ್ ಅವರು ಮೊದಲ ಸುತ್ತಿನಲ್ಲೇ ಹೊರಬಿದ್ದರು. 400 ಮೀಟರ್ಸ್ ಹರ್ಡಲ್ಸ್‌ನಲ್ಲಿ ಪಾಲ್ಗೊಂಡಿದ್ದ ಎಂ.ಪಿ.ಜಬೀರ್‌ ಸೆಮಿಫೈನಲ್‌ನಲ್ಲಿ ನಿರೀಕ್ಷಿತ ಸಾಧನೆ ಮಾಡದೆ ನಿರಾಸೆ ಅನುಭವಿಸಿದರು. ಮಹಿಳೆಯರ 100 ಮೀಟರ್ಸ್ ಓಟದಲ್ಲಿ ದ್ಯುತಿ ಚಾಂದ್ 11.48 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಇದು ಅವರ ವೃತ್ತಿಜೀವನದ ಅತ್ಯಂತ ಕಳಪೆ ಪ್ರದರ್ಶನವಾಗಿದೆ. ಹೀಟ್ಸ್‌ನಲ್ಲಿ ದ್ಯುತಿ ಏಳನೆಯವರಾದರು. ಒಟ್ಟು 47 ಮಂದಿ ಪೈಕಿ ಒಟ್ಟಾರೆ ಅವರಿಗೆ ದಕ್ಕಿದ್ದು 37ನೇ ಸ್ಥಾನ. ಪುರುಷರ 400 ಮೀಟರ್ಸ್ ಹರ್ಡಲ್ಸ್‌ನ ಸೆಮಿಫೈನಲ್‌ನ ಮೂರನೇ ಹೀಟ್ಸ್‌ನಲ್ಲಿ ಐದನೆಯವರಾದ ಜಬೀರ್ 24 ಸ್ಪರ್ಧಿಗಳಿದ್ದ ಸ್ಪರ್ಧೆಯಲ್ಲಿ ಒಟ್ಟಾರೆ 16ನೇ ಸ್ಥಾನ ಗಳಿಸಿದರು. 48.28 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಹಾಲಿ ಚಾಂಪಿಯನ್‌ ಕರ್ಸ್ಟನ್ ವಾರ್‌ಹಾಮ್ ಮೊದಲಿಗಾಗಿ ಫೈನಲ್ ತಲುಪಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.