ಬ್ಯಾಡ್ಮಿಂಟನ್‌: ಸೆಮಿಫೈನಲ್‌ಗೆ ಕಶ್ಯಪ್‌ ಇಂಚೇನ್‌: ಭಾರತದ ಪರುಪಳ್ಳಿ ಕಶ್ಯಪ್‌ ಅವರುವಿಶ್ವ ಎರಡನೇ ಕ್ರಮಾಂಕದ ಆಟಗಾರ ಜಾನ್‌ ಓ ಜಾರ್ಜೆನ್ಸೆನ್‌ ಅವರಿಗೆ ಆಘಾತ ನೀಡಿ ಕೊರಿಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು. ಶುಕ್ರವಾರ ನಡೆದ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ ಅವರು ಎದುರಾಳಿಯನ್ನು 24–22, 21–8ರಿಂದ ಸೋಲಿಸಿದರು. 33 ವರ್ಷದ ಹೈದ್ರಾಬಾದ್‌ ಆಟಗಾರನಿಗೆ ಜಾರ್ಜೆನ್ಸೆನ್‌ ಅವರನ್ನು ಮಣಿಸಲು 37 ನಿಮಿಷಗಳು ಸಾಕಾದವು. ಈ ಗೆಲುವಿನೊಂದಿಗೆ ಕಶ್ಯಪ್‌ ಈ ಋತುವಿನಲ್ಲಿ ಎರಡನೇ ಟೂರ್ನಿಯಲ್ಲಿ ನಾಲ್ಕರ ಘಟ್ಟ ಪ್ರವೇಶಿಸಿದರು. ಇಂಡಿಯಾ ಓಪನ್‌ ಟೂರ್ನಿಯಲ್ಲಿ ಅವರು ಸೆಮಿಗೆ ಕಾಲಿಟ್ಟಿದ್ದರು. ಮುಂದಿನ ಪಂದ್ಯದಲ್ಲಿ ಅವರು ವಿಶ್ವದ ಮೊದಲ ಕ್ರಮಾಂಕದ ಆಟಗಾರ ಜಪಾನ್‌ನ ಕೆಂಟೊ ಮೊಮೊಟಾ ಅವರನ್ನು ಎದುರಿಸುವರು. ಮೊದಲ ಗೇಮ್‌ನಲ್ಲಿ ತೀವ್ರ ಪೈಪೋಟಿ ಕಂಡುಬಂತು. 4–4, 14–14, 18–18, 20–20 ಸಮಬಲದಲ್ಲಿ ಸಾಗಿತ್ತು. ಕೊನೆಯಲ್ಲಿ ಕಶ್ಯಪ್‌ ಕೈ ಮೇಲಾಯಿತು. ಇದೊಂದೇ ಗೇಮ್‌ 22 ನಿಮಿಷ ನಡೆಯಿತು. ಎರಡನೇ ಗೇಮ್‌ ಸುಲಭವಾಗಿ ಭಾರತದ ಶಟ್ಲರ್‌ ವಶವಾಯಿತು. ಆರಂಭದಲ್ಲಿ ಭಾರೀ ಹಣಾಹಣಿ ಕಂಡರೂ ಕಶ್ಯಪ್‌ ಸಂಪೂರ್ಣ ಪಾರಮ್ಯ ಮೆರೆದರು. 21–8ರಿಂದ ಗೆದ್ದು ಮುನ್ನಡೆದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.