ಪ್ರೊ ಕಬಡ್ಡಿ ಲೀಗ್: ಅಗ್ರಸ್ಥಾನಕ್ಕೆ ಮರಳಿದ ದಬಂಗ್‌ ಡೆಲ್ಲಿ ಜೈಪುರ: ಅಮೋಘ ಚೇತರಿಕೆಯ ಆಟವಾಡಿದ ದಬಂಗ್‌ ಡೆಲ್ಲಿ ವಿವೊ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ಗುರುವಾರ 43–39 ಪಾಯಿಂಟ್‌ಗಳಿಂದ ಪಟ್ನಾ ಪೈರೇಟ್ಸ್‌ ತಂಡವನ್ನು ಸೋಲಿಸಿತು. ಲೀಗ್‌ನಲ್ಲಿ 14ನೇ ಗೆಲುವಿನೊಡನೆ ಡೆಲ್ಲಿ ತಂಡ ಒಟ್ಟು 77 ಪಾಯಿಂಟ್‌ ಕಲೆಹಾಕಿದ್ದು ಲೀಗ್‌ನಲ್ಲಿ ಮರಳಿ ಅಗ್ರಸ್ಥಾನಕ್ಕೇರಿತು. ಸವಾಯಿ ಮಾನ್‌ಸಿಂಗ್‌ ಒಳಾಂಗಣ ಕ್ರೀಡಾಂಗಣದಲ್ಲಿ ನವೀನ್‌ ಕುಮಾರ್‌ (11 ಪಾಯಿಂಟ್‌) ಮತ್ತು ವಿಜಯ್‌ (13 ಪಾಯಿಂಟ್‌) ಅವರ ‘ಸೂಪರ್‌ ಟೆನ್‌’ಗಳು ಡೆಲ್ಲಿ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು. ಪಂದ್ಯದ ಹೆಚ್ಚಿನ ಅವಧಿಯಲ್ಲಿ ಮೇಲುಗೈ ಸಾಧಿಸಿದ್ದ ಪಟ್ನಾ ಈ ಸೋಲಿಗೆ ತನ್ನನ್ನು ತಾನೇ ಹಳಿದುಕೊಳ್ಳಬೇಕು. ಕೊನೆಯ ಹಂತದಲ್ಲಿ ಪಟ್ನಾದ ರಕ್ಷಣೆಯಲ್ಲಿ ಹುಳುಕು ಕಂಡುಹಿಡಿದ ವಿಜಯ್‌ ಐದು ರೇಡ್‌ ಪಾಯಿಂಟ್‌ಗಳನ್ನು ಹೆಕ್ಕಿ ತಂಡಕ್ಕೆ ಮುನ್ನಡೆ ಕೊಡಿಸಿದರು. ಪಟ್ನಾದ ಅನುಭವಿ ರೈಡರ್‌ ಪ್ರದೀಪ್‌ ನರ್ವಾಲ್‌ ಕೂಡ ಸೂಪರ್‌ ಟೆನ್‌ನೊಡನೆ (19 ಪಾಯಿಂಟ್ಸ್‌) ಮಿಂಚಿದರು. ನರ್ವಾಲ್‌ ಈ ಆವೃತ್ತಿಯಲ್ಲಿ 200 ಟಚ್‌ ಪಾಯಿಂಟ್‌ ಪೂರೈಸಿದರೆ, ನವೀನ್‌ ಪ್ರೊ ಲೀಗ್‌ನಲ್ಲಿ ಒಟ್ಟಾರೆ 300 ಟಚ್‌ ಪಾಯಿಂಟ್ಸ್‌ ಸಾಧಿಸಿದರು. ಶುಕ್ರವಾರದ ಪಂದ್ಯ: ಯು ಮುಂಬಾ– ಬೆಂಗಳೂರು ಬುಲ್ಸ್‌ (ರಾತ್ರಿ 7.30); ಜೈಪುರ ಪಿಂಕ್ ಪ್ಯಾಂಥರ್ಸ್‌– ತೆಲುಗು ಟೈಟನ್ಸ್ (8.30). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.