ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌: ಶ್ರೀಹರಿ ಖಾತೆಗೆ ಮತ್ತೆರಡು ಚಿನ್ನ ಬೆಂಗಳೂರು: ‘ಈಜುಕೊಳದ ರಾಜ’ ಶ್ರೀಹರಿ ನಟರಾಜ್‌, ಏಷ್ಯನ್‌ ವಯೋವರ್ಗ ಈಜು ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕನೇ ದಿನವೂ ‘ಚಿನ್ನ’ದ ಪದಕಗಳನ್ನು ಬೇಟೆಯಾಡಿ ತವರಿನ ಅಭಿಮಾನಿಗಳನ್ನು ರಂಜಿಸಿದರು. ಕರ್ನಾಟಕದ ಈಜುಪ್ರಿಯರ ‘ಕಣ್ಮಣಿ’ಯಾಗಿದ್ದ 18ರ ಹರೆಯದ ಶ್ರೀಹರಿ, ನಗರದ ಹೊರವಲಯದ ಬೆಟ್ಟ ಹಲಸೂರಿನಲ್ಲಿರುವ ಪಡುಕೋಣೆ–ದ್ರಾವಿಡ್‌ ಸೆಂಟರ್‌ ಫಾರ್‌ ಸ್ಪೋರ್ಟ್ಸ್‌ ಎಕ್ಸಲೆನ್ಸ್‌ನಲ್ಲಿ ಶುಕ್ರವಾರ ನಡೆದ ಪುರುಷರ 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಮೊದಲಿಗರಾಗಿ ಗುರಿ ಕ್ರಮಿಸಿದರು. ಇದರೊಂದಿಗೆ ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ಆರು ಪದಕಗಳನ್ನು ಗೆದ್ದ ಹಿರಿಮೆಗೂ ಪಾತ್ರರಾದರು. ಫೈನಲ್‌ ಸ್ಪರ್ಧೆಯ ನಾಲ್ಕು ಸುತ್ತುಗಳಲ್ಲೂ ಆತಿಥೇಯ ಈಜುಪಟು ಪ್ರಾಬಲ್ಯ ಮೆರೆದರು. ಮೊದಲ 50 ಮೀಟರ್ಸ್‌ ಸ್ಪರ್ಧೆ ಪೂರ್ಣಗೊಳಿಸಲು 28.30 ಸೆಕೆಂಡುಗಳನ್ನು ತೆಗೆದುಕೊಂಡ ಶ್ರೀಹರಿ, ನಂತರದ 50 ಮೀಟರ್ಸ್‌ನಲ್ಲೂ ಮಿಂಚಿನ ಗತಿಯಲ್ಲಿ ಮುನ್ನುಗ್ಗಿದರು. ಬೆಂಗಳೂರಿನ ಈಜುಪಟು 150 ಮೀಟರ್ಸ್‌ ಸ್ಪರ್ಧೆಯನ್ನು 1 ನಿಮಿಷ 32.40 ಸೆಕೆಂಡುಗಳಲ್ಲಿ ಪೂರೈಸಿದಾಗ ಮತ್ತೊಂದು ಕೂಟ ದಾಖಲೆ ನಿರ್ಮಿಸಬಹುದೆಂಬ ನಿರೀಕ್ಷೆ ಗರಿಗೆದರಿತ್ತು. ಕೊನೆಯ 50 ಮೀಟರ್ಸ್‌ನಲ್ಲಿ ಅಲ್ಪ ಬಳಲಿದಂತೆ ಕಂಡ ಅವರು ಅಂತಿಮವಾಗಿ 2 ನಿಮಿಷ 04.25 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಭಾರತದವರೇ ಆದ ಎಸ್‌.ಶಿವಾ ಈ ವಿಭಾಗದ ಬೆಳ್ಳಿಯ ಪದಕಕ್ಕೆ ಕೊರಳೊಡ್ಡಿದರು. ಮೊದಲ ಮೂರು ಸುತ್ತುಗಳ (150 ಮೀಟರ್ಸ್‌) ಸ್ಪರ್ಧೆ ಮುಗಿದಾಗ ನಾಲ್ಕನೇ ಸ್ಥಾನದಲ್ಲಿದ್ದ ಶಿವಾ, ಕೊನೆಯ 50 ಮೀಟರ್ಸ್‌ನಲ್ಲಿ ಅಮೋಘ ಸಾಮರ್ಥ್ಯ ತೋರಿದರು. ಹಾಂಕಾಂಗ್‌ನ ಲಾವು ಶಿಯು ಯೂಯಿ ಅವರನ್ನು ಹಿಂದಿಕ್ಕಿದ ಅವರು ಎರಡನೇ ಸ್ಥಾನ (2:05.23ಸೆ.) ಪಡೆದರು. ಆರಂಭದಿಂದಲೂ ಎರಡನೇ ಸ್ಥಾನದಲ್ಲಿ ಸಾಗುತ್ತಿದ್ದ ಯೂಯಿ (2:07.68ಸೆ.) ಕಂಚಿನ ಪದಕಕ್ಕೆ ತೃಪ್ತಿಪಟ್ಟರು. ರಿಲೆಯಲ್ಲೂ ಚಿನ್ನ: ಶುಕ್ರವಾರ ಬೆಳಿಗ್ಗೆ ನಡೆದಿದ್ದ ಪುರುಷರ 4X200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೆಯಲ್ಲೂ ಶ್ರೀಹರಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಶ್ರೀಹರಿ, ಸಾಜನ್‌ ಪ್ರಕಾಶ್‌, ಕುಶಾಗ್ರ ರಾವತ್‌ ಮತ್ತು ಆನಂದ್‌ ಅನಿಲ್‌ಕುಮಾರ್‌ ಅವರಿದ್ದ ತಂಡ 7 ನಿಮಿಷ 41.06 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಸಂಭ್ರಮಿಸಿತು. ಖಾಡೆಗೆ ಚಿನ್ನ: ಒಲಿಂಪಿಯನ್‌ ಈಜುಪಟು ವೀರಧವಳ್‌ ಖಾಡೆ 50 ಮೀಟರ್ಸ್‌ ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನದ ಸಾಧನೆ ಮಾಡಿದರು. ಅವರು 24.22 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು. ಕರ್ನಾಟಕದ ಸ್ಪರ್ಧಿಗಳಿಗೆ ಮತ್ತೆ ನಿರಾಸೆ: ರಾಜ್ಯದ ಇತರ ಈಜುಪಟುಗಳು ನಾಲ್ಕನೇ ದಿನ ಪದಕಗಳನ್ನು ಗೆಲ್ಲಲು ವಿಫಲರಾದರು. ಮಹಿಳೆಯರ 800 ಮೀಟರ್ಸ್‌ ಫ್ರೀಸ್ಟೈಲ್‌ನಲ್ಲಿ ಕಣದಲ್ಲಿದ್ದ ಖುಷಿ ದಿನೇಶ್‌ (9:36.07ಸೆ.) ಐದನೇ ಸ್ಥಾನದೊಂದಿಗೆ ಸ್ಪರ್ಧೆ ಕೊನೆಗೊಳಿಸಿದರು. 200 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಸ್ಪರ್ಧಿಸಿದ್ದ ಎಸ್‌.ಪಿ.ಲಿಖಿತ್ (2:19.47ಸೆ.) ಕೂಡಾ ಐದನೇ ಸ್ಥಾನ ಪಡೆದರು. ಬಾಲಕಿಯರ 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಈಜುಕೊಳಕ್ಕೆ ಧುಮುಕಿದ್ದ ನೀನಾ ವೆಂಕಟೇಶ್‌ ಮತ್ತು ರಿಧಿಮಾ ವೀರೇಂದ್ರ ಕುಮಾರ್‌ ಅವರು ಆರನೇಯವರಾಗಿ ಗುರಿ ತಲುಪಿದರು. ಇಬ್ಬರೂ 1 ನಿಮಿಷ 07.07ಸೆಕೆಂಡುಗಳಲ್ಲಿ ಗುರಿ ಸೇರಿದರು. 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಸುವನ ಸಿ.ಭಾಸ್ಕರ್‌ (2:23.89ಸೆ.) ಐದನೇ ಸ್ಥಾನಕ್ಕೆ ತೃಪ್ತರಾದರು. ನಾಲ್ಕನೇ ದಿನ ಪದಕ ಗೆದ್ದ ಭಾರತದ ಸ್ಪರ್ಧಿಗಳು: ಪುರುಷರು: 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಶ್ರೀಹರಿ ನಟರಾಜ್ (2:04.25ಸೆ.)–1, ಎಸ್‌.ಶಿವಾ (2:05.23ಸೆ.)–2. 50 ಮೀ.ಬಟರ್‌ಫ್ಲೈ: ವೀರಧವಳ್ ಖಾಡೆ (24.22ಸೆ.)–1, 4X200 ಮೀ.ಫ್ರೀಸ್ಟೈಲ್‌ ರಿಲೆ: ಭಾರತ (7:41.06ಸೆ.)–1, 4X100 ಮೀ.ಮೆಡ್ಲೆ ಮಿಶ್ರ ರಿಲೆ: ಭಾರತ (4:04.15ಸೆ.)–2. ಬಾಲಕರು: ಗುಂಪು–1: ಸ್ವದೇಶ್‌ ಮಂಡಲ್‌ (2:23.43ಸೆ.)–3. ಗುಂಪು–2: ಸಾಹಿಲ್‌ ಲಸ್ಕರ್‌ (1:01.46ಸೆ.)–3, 4X100 ಮೀ.ಮೆಡ್ಲೆ ಮಿಶ್ರ ರಿಲೆ: ಭಾರತ (4:16.04)–3. ಮಹಿಳೆಯರು: 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌: ಮಾನಾ ಪಟೇಲ್‌ (2:22.87ಸೆ.)–2, ಸೌಬ್ರಿತಿ ಮಂಡಲ್‌ (2:23.99ಸೆ.)–3. 50ಮೀ. ಬಟರ್‌ಫ್ಲೈ: ದಿವ್ಯಾ ಸತಿಜಾ (28.27ಸೆ.)–3. 4X200 ಮೀ.ಫ್ರೀಸ್ಟೈಲ್‌ ರಿಲೆ: ಭಾರತ: (9:15.87ಸೆ.)–3. ಭಾರತದ ಶ್ರೇಷ್ಠ ಸಾಧನೆ ಏಷ್ಯನ್‌ ವಯೋವರ್ಗ ಚಾಂಪಿಯನ್‌ಷಿಪ್‌ನ ಈಜು ವಿಭಾಗದಲ್ಲಿ ಭಾರತವು ಈ ಬಾರಿ ಒಟ್ಟು 52 ಪದಕಗಳನ್ನು ಗೆದ್ದಿತು. ಇದು ತಂಡದ ಶ್ರೇಷ್ಠ ಸಾಧನೆ ಎನಿಸಿತು. 2017ರಲ್ಲಿ ತಾಷ್ಕೆಂಟ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ತಂಡವು ಒಟ್ಟು 40 ಪದಕಗಳನ್ನು ಗೆದ್ದಿದ್ದು ಇದುವರೆಗಿನ ಉತ್ತಮ ಸಾಧನೆಯಾಗಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.