ಹಾಕಿ: ಕರ್ನಾಟಕ ತಂಡಕ್ಕೆ ಪ್ರಶಸ್ತಿ ಕಾನ್ಪುರ: ಆಭರಣ್‌ ಸುದೇವ್‌ ಅವರ ಹ್ಯಾಟ್ರಿಕ್‌ ಗೋಲುಗಳ ನೆರವಿನಿಂದ ಕರ್ನಾಟಕ 7–3 ಅಂತರದಿಂದ ಉತ್ತರ ಪ್ರದೇಶ ತಂಡವನ್ನು ಸೋಲಿಸಿ ಫೈವ್‌–ಎ–ಸೈಡ್‌ ಸೀನಿಯರ್‌ ರಾಷ್ಟ್ರೀಯ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು. ಆಭರಣ್ ಶುಕ್ರವಾರ ನಡೆದ ಫೈನಲ್‌ ಪಂದ್ಯದ 2, 3 ಮತ್ತು 17ನೇ ನಿಮಿಷ ಗೋಲುಗಳಿಸಿದರು. ಬಿ.ಎಂ. ಲಿಖಿತ್‌ ಎರಡು ಗೋಲು ಗಳಿಸಿದರೆ, ಮೊಹಮ್ಮದ್‌ ರಹೀಲ್‌ ಮೌಸೀನ್‌ ಮತ್ತು ಸೋಮಯ್ಯ ಕೆ.ಪಿ. ತಲಾ ಒಂದು ಗೋಲುಗಳನ್ನು ತಂದಿತ್ತರು. ಉತ್ತರ ಪ್ರದೇಶ ಪರ ನಾಯಕ ಮೊಹಮ್ಮದ್‌ ಅಮೀರ್‌ ಖಾನ್‌ ಎರಡು ಗೋಲು, ರಾಜಕುಮಾರ್‌ ಪಾಲ್‌ ಒಂದು ಗೋಲು ಗಳಿಸಿದರು. ಕಳೆದ ಬಾರಿಯೂ ವಿಜೇತರಾಗಿದ್ಹಾದ ಕರ್ನಾಟಕ ಆರಂಭದಿಂದಲೇ ಮೇಲುಗೈ ಸಾಧಿಸಿ ಮೂರು ನಿಮಿಷ ಆಗುವುದರೊಳಗೇ ಎರಡು ಗೋಲು ಗಳಿಸಿತು. ಉತ್ತರಪ್ರದೇಶ ಪ್ರತಿಹೋರಾಟ ತೋರಿ ವಿರಾಮದ ಒಳಗೇ ಮೂರು ಗೋಲುಗಳನ್ನು ಗಳಿಸಿ ಮುನ್ನಡೆ ಸಾಧಿಸಿತು.ಉತ್ತರಾರ್ಧದಲ್ಲಿ ಕರ್ನಾಟಕ ಸಂಪೂರ್ಣ ಮೇಲುಗೈ ಸಾಧಿಸಿತಲ್ಲದೇ ಐದು ಗೋಲುಗಳನ್ನು ಗಳಿಸಿತು. ಉತ್ತರಪ್ರದೇಶ ಒಮ್ಮೆಯೂ ಚೆಂಡನ್ನು ಗುರಿತಲುಪಿಸಲಾಗಲಿಲ್ಲ. ಆತಿಥೇಯ ಉತ್ತರ ಪ್ರದೇಶ ಮಹಿಳೆಯರ ವಿಭಾಗದ ಫೈನಲ್‌ನಲ್ಲೂ ಸೋಲನುಭವಿಸಿತು. ಹರಿಯಾಣ 4–2 ಗೋಲುಗಳಿಂದ ಫೈನಲ್‌ ಪಂದ್ಯ ಗೆದ್ದುಕೊಂಡಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.