ಪವನ್‌ ಮಿಂಚು; ಮುಂಬಾಗೆ ತಿವಿದ ಬೆಂಗಳೂರು ಬುಲ್ಸ್‌ ಜೈಪುರ: ರೇಡಿಂಗ್‌ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಬೆಂಗಳೂರು ಬುಲ್ಸ್‌ನ ಪವನ್‌ ಶೆರಾವತ್‌, ವಿವೊ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಶುಕ್ರವಾರ ತಮ್ಮ ತಂಡ, 35–33 ರಲ್ಲಿ ‌ಎರಡು ಪಾಯಿಂಟ್‌ಗಳಿಂದ ಯು ಮುಂಬಾ ತಂಡವನ್ನು ಮಣಿಸಲು ನೆರವಾದರು. ಸವಾಯಿ ಮಾನ್‌ಸಿಂಗ್‌ ಸ್ಟೇಡಿಯಂನಲ್ಲಿ ಪವನ್‌ 11 ಪಾಯಿಂಟ್ಸ್‌ ಗಳಿಸಿದರು. 19 ಪಂದ್ಯಗಳನ್ನಾಡಿರುವ ಬೆಂಗಳೂರಿನ ತಂಡ ಈಗ 58 ಪಾಯಿಂಟ್ಸ್‌ ಸಂಗ್ರಹಿಸಿದ್ದು ನಾಲ್ಕನೇ ಸ್ಥಾನದಲ್ಲಿದೆ. ಮುಂಬಾ 18 ಪಂದ್ಯಗಳಿಂದ 54 ಪಾಯಿಂಟ್ಸ್‌ ಕಲೆಹಾಕಿ ಐದನೇ ಸ್ಥಾನದಲ್ಲಿದೆ. ಮುಂಬಾ ಪರ ಅಭಿಷೇಕ್‌ ಸಿಂಗ್‌ 10 ಪಾಯಿಂಟ್ಸ್‌ ಗಳಿಸಿದರು. ಎರಡೂ ತಂಡಗಳು ಗಾಯಾಳುಗಳ ಸಮಸ್ಯೆ ಎದುರಿಸಿದವು. ರೋಹಿತ್‌ ಕುಮಾರ್‌ ಬುಲ್ಸ್‌ ತಂಡಕ್ಕೆ ಅಲಭ್ಯರಾದರೆ, ಪ್ರತಿಭಾನ್ವಿತ ರೈಡರ್‌ ಅರ್ಜುನ್‌ ದೇಶ್ವಾಲ್‌ ಮುಂಬಾ ತಂಡಕ್ಕೆ ಆಡಲು ಆಗಲಿಲ್ಲ. ನಾಯಕತ್ವ ವಹಿಸಿದ್ದ ಪವನ್‌ ಅವರನ್ನು ತಡೆಯಲು ಮುಂಬೈ ಸ್ವಲ್ಪ ಆಕ್ರಮಣಕಾರಿ ಮನೋಭಾವ ತೋರಲು ಮುಂದಾಯಿತು. ಆದರೆ ಗುಣಮಟ್ಟದ ರೈಡರ್‌ಗಳು ಇಲ್ಲದ ಕಾರಣ ಮುಂಬಾಕ್ಕೆ ಮೇಲುಗೈ ಸಾಧಿಸಲು ಆಗಲಿಲ್ಲ. ಎದುರಾಳಿಯನ್ನು ಒಮ್ಮೆ ಆಲೌಟ್‌ ಮಾಡಿದ ಬುಲ್ಸ್‌ ವಿರಾಮದ ವೇಳೆ 17–11 ಪಾಯಿಂಟ್‌ಗಳ ಉತ್ತಮ ಮುನ್ನಡೆ ಪಡೆದಿತ್ತು. ಈ ಮುನ್ನಡೆಯಿಂದ ಉತ್ಸಾಹ ಗೊಂಡ ಬುಲ್ಸ್ ವಿರಾಮದ ನಂತರವೂ ಉತ್ತಮ ಆರಂಭ ಮಾಡಿತು. ಪವನ್‌ ಉತ್ತಮ ರೇಡ್‌ ಮುಂದುವರಿಸಿದರು. ಆದರೆ ಡಿಫೆನ್ಸ್‌ನಲ್ಲಿ ಸೌರಬ್‌ ನಂದಲ್‌ ಅವರ ಸ್ಫೂರ್ತಿಯುತ ಆಟವನ್ನು ಮರೆಯುವಂತಿರಲಿಲ್ಲ. ಇದರಿಂದಾಗಿ ಏಳನೇ ನಿಮಿಷ ಮುಂಬೈ ಆಲೌಟ್‌ ಆಗಿ ಬುಲ್ಸ್‌ಗೆ 12 ಪಾಯಿಂಟ್ಸ್‌ ಮುನ್ನಡೆ ದೊರೆಯಿತು. ಆದರೆ ಮುಂಬಾ ಹೋರಾಟ ಕೈಬಿಡಲಿಲ್ಲ. ಅಭಿಷೇಕ್‌ ಸಿಂಗ್‌ ಕೆಲವು ಅಮೋಘ ದಾಳಿಗಳ ಮೂಲಕ ತಂಡದ ಹಿನ್ನಡೆಯನ್ನು ಗಮನಾರ್ಹವಾಗಿ ತಗ್ಗಿಸಿದರು. ಕೊನೆಯ ಕ್ಷಣಗಳಲ್ಲಿ ಉತ್ತಮ ರಕ್ಷಣೆ ಬುಲ್ಸ್‌ ನೆರವಿಗೆ ಬಂತು. ಟೈಟನ್ಸ್‌ಗೆ ಗೆಲುವು: ಮತ್ತೊಂದು ಪಂದ್ಯದಲ್ಲಿ ತೆಲುಗು ಟೈಟನ್ಸ್‌ ತಂಡ 51–31ರಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಗೆಲುವು ಸಾಧಿಸಿತು. ಇಂದಿನ ಪಂದ್ಯಗಳು: ಹರಿಯಾಣ ಸ್ಟೀಲರ್ಸ್‌– ಯುಪಿ ಯೋಧಾ (ರಾತ್ರಿ 7.30), ಗುಜರಾತ್‌ ಫಾರ್ಚೂನ್‌ಜೈಂಟ್ಸ್‌– ತಮಿಳ್‌ ತಲೈವಾಸ್‌ (8.30). ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.