‘ಕ್ರೀಡೆ ಪಠ್ಯೇತರ ಅಲ್ಲ ಶಿಕ್ಷಣದ ಭಾಗ’ ಬೆಂಗಳೂರು: ಕ್ರೀಡೆಯು ಪಠ್ಯೇತರ ಚಟುವಟಿಕೆಯಲ್ಲ. ಪಠ್ಯದ ಪ್ರಮುಖ ಭಾಗವಾಗಬೇಕು. ಅದರಿಂದ ಕ್ರೀಡಾ ಸಂಸ್ಕೃತಿಯು ಬೆಳೆಯುತ್ತದೆ ಎಂದು ಕೇಂದ್ರ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕಿರಣ್ ರಿಜಿಜು ಹೇಳಿದರು. ಬೆಂಗಳೂರಿಗೆ ಎರಡು ದಿನಗಳ ಭೇಟಿಗಾಗಿ ಬಂದಿರುವ ಅವರು ಶುಕ್ರವಾರ ಕೆಂಗೇರಿ ಸಮೀಪ ಒಲಿಂಪಿಯನ್ ಅಂಜು ಬಾಬಿ ಜಾರ್ಜ್ ಅವರು ನಿರ್ಮಾಣ ಮಾಡುತ್ತಿರುವ ಕ್ರೀಡಾ ಅಕಾಡೆಮಿಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ‘ನಮ್ಮ ಸರ್ಕಾರವು ಕಳೆದ ಮೂರು ವರ್ಷಗಳಿಂದ ಖೇಲೊ ಇಂಡಿಯಾ ಆಯೋಜಿಸುತ್ತಿದೆ. ಇದರಿಂದಾಗಿ ದೇಶದ ಎಲ್ಲ ರಾಜ್ಯಗಳಿಂದಲೂ ಪ್ರತಿಭಾವಂತರ ಶೋಧಕ್ಕೆ ಇದು ವೇದಿಕೆಯಾಗಿದೆ. ಇದರ ಮೂಲಕ ಪ್ರತಿಯೊಂದು ಮನೆಗೂ ಕ್ರೀಡೆಯ ತಲುಪಬೇಕು ಎಂಬುದನೇ ನಮ್ಮ ಉದ್ದೇಶ’ ಎಂದು ತಿಳಿಸಿದರು. ‘ವಸತಿ ಸಮುಚ್ಚಯ, ಕಾಲೋನಿಗಳನ್ನು ನಿರ್ಮಾಣ ಮಾಡುವಾಗ ಇಲ್ಲಿ ಈಜುಕೊಳ, ಆಟದ ಮೈದಾನ, ಕ್ರೀಡಾಂಗಣಗಳು ಇವೆ ಎಂದು ಕಟ್ಟಡ ನಿರ್ಮಾತೃಗಳು ಪ್ರಚಾರ ಮಾಡುತ್ತಾರೆ. ಅದು ಸಲ್ಲದು. ಈ ರೀತಿಯ ಸೌಲಭ್ಯಗಳನ್ನು ನೀಡುವುದು ಕಡ್ಡಾಯ’ ಎಂದರು. ‘ನಾವು ಒಲಿಂಪಿಕ್ಸ್‌ನಲ್ಲಿ ಹೆಚ್ಚು ಪದಕಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದ್ದೇವೆ. ಅದಕ್ಕೆ ತಕ್ಕಂತೆ ಬೇರುಮಟ್ಟದಿಂದಲೇ ಕ್ರೀಡಾ ಸಾಮರ್ಥ್ಯ ವೃದ್ಧಿಸುವ, ಪ್ರತಿಭಾ ಶೋಧ ಮಾಡುವ ಕೆಲಸ ಮಾಡಬೇಕಿದೆ. ಶಾಲಾಮಟ್ಟದಿಂದಲೇ ಶ್ರೀಕಾರ ಹಾಕಬೇಕು’ ಎಂದರು. ‘ಎನ್‌ಡಿಟಿಎಲ್ (ರಾಷ್ಟ್ರೀಯ ಉದ್ದೀಪನ ಮದ್ದು ಪರೀಕ್ಷೆ ಪ್ರಯೋಗಾಲಯ) ಮೇಲೆ ನಿಷೇಧವೆನೂ ಇಲ್ಲ. ಎಲ್ಲ ಸುಧಾರಣೆಗಳನ್ನೂ ಕೈಗೊಳ್ಳಲಾಗಿದೆ. ಅಲ್ಲಿಯ ಎಲ್ಲ ವಿಜ್ಞಾನಿಗಳೊಂದಿಗೆ ಮಾತನಾಡಿದ್ದೇನೆ. ವಾಡಾದಿಂದ ಬಂದಿರುವ ಸೂಚನೆಗಳ ಕುರಿತು ಚರ್ಚಿಸಿದ್ದೇವೆ. ಸ್ಯಾಂಪಲ್‌ಗಳ ‍ಪರೀಕ್ಷಾ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಸೂಚಿಸಲಾಗಿದೆ. ಈ ವರ್ಷ 12 ಸಾವಿರ ಅಥ್ಲೀಟ್‌ಗಳ ಸ್ಯಾಂಪಲ್‌ಗಳ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ’ ಎಂದು ಪ್ರತಿಕ್ರಿಯಿಸಿದರು. ‘ಇಲ್ಲಿಯ ಸಾಯ್ ಕೇಂದ್ರಕ್ಕೆ ತೆರಳಿದ್ದೆ. ಫುಟ್‌ಬಾಲ್ ಕ್ರೀಡಾಂಗಣ ಲೋಕಾರ್ಪಣೆ ಮಾಡಿದೆ. ಬಹಳಷ್ಟು ಜೂನಿಯರ್ ಕ್ರೀಡಾಪಟುಗಳು ಅಲ್ಲಿದ್ದಾರೆ. ಹಿರಿಯ–ಕಿರಿಯ ಆಟಗಾರರು, ಸಿಬ್ಬಂದಿ ಮತ್ತು ಕೋಚ್‌ಗಳೊಂದಿಗೆ ಮಾತನಾಡಿದೆ. ಬೆಂಗಳೂರು ಕೂಡ ಕ್ರೀಡಾ ಉತ್ತೇಜನ ನಗರಿಯಾಗಿದೆ’ ಎಂದು ಶ್ಲಾಘಿಸಿದರು. ‘ಅಂಜು ಬಾಬಿ ಜಾರ್ಜ್ ಅವರು ವಿಶ್ವ ಅಥ್ಲೆಟಿಕ್ಸ್‌ನಲ್ಲಿ ನಮ್ಮ ದೇಶಕ್ಕೆ ಕಂಚಿನ ಪದಕ ಗೆದ್ದುಕೊಟ್ಟ ಹೆಮ್ಮೆಯ ಕ್ರೀಡಾಪಟು. ಅವರು ಇಲ್ಲಿ ಉತ್ತಮವಾದ ಆಕಾಡೆಮಿಯನ್ನು ನಿರ್ಮಿಸುತ್ತಿದ್ದಾರೆ. ನಮ್ಮ ಸರ್ಕಾರದಿಂದಲೂ ಅವರಿಗೆ ಅಲ್ಪ ಸಹಾಯ ಮಾಡಿದ್ದೇವೆ. ದೇಶಕ್ಕೆ ಪದಕ ಗೆದ್ದು ತರುವ ಅಥ್ಲೀಟ್‌ಗಳನ್ನು ರೂಪಿಸುವುದು ಅವರ ಹೊಣೆ’ ಎಂದರು. ಸಂಜೆ ಅವರು ಪ್ರಕಾಶ್ ಪಡುಕೋಣೆ–ರಾಹುಲ್ ದ್ರಾವಿಡ್ ಕ್ರೀಡಾ ಅಕಾಡೆಮಿಗೆ ಭೇಟಿ ನೀಡಿದರು. ಅಲ್ಲಿ ನಡೆಯುತ್ತಿರುವ ಏಷ್ಯನ್ ಈಜು ಚಾಂಪಿಯನ್‌ಷಿಪ್‌ ಅನ್ನು ವೀಕ್ಷಿಸಿದರು. ರಿಜಿಜು ಅವರು ಶನಿವಾರ ಬಳ್ಳಾರಿಗೆ ತೆರಳುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.