400 ಮೀ. ಹರ್ಡಲ್ಸ್‌: ಸೆಮಿಗೆ ಜಬೀರ್‌ ದೋಹಾ: ಪುರುಷರ 400 ಮೀ. ಹರ್ಡಲ್ಸ್‌ ಓಟದಲ್ಲಿ ಎಂ.ಬಿ.ಜಬೀರ್‌ ಸೆಮಿಫೈನಲ್‌ ತಲುಪಿದ್ದು ಮಾತ್ರ ಭಾರತದ ಪಾಲಿಗೆ ವಿಶ್ಲ ಅಥ್ಲೆಟಿಕ್ ಕೂಟದ ಮೊದಲ ದಿನ ಸಮಾಧಾನ ಮೂಡಿಸಿದ ವಿಷಯ. ಅವರು ಮೊದಲನೇ ಹೀಟ್ಸ್‌ನಲ್ಲಿ 49.62 ಸೆ. ತೆಗೆದುಕೊಂಡು ಮೂರನೇ ಸ್ಥಾನ ಪಡೆದರು. ಇದು ಈ ವರ್ಷದ ಅವರ ಅತ್ಯುತ್ತಮ ಸಾಧನೆಗಿಂತ (49.13 ಸೆ.) ಚೂರು ಕಡಿಮೆ. ಈ ಓಟದಲ್ಲಿ ರಾಷ್ಟ್ರೀಯ ದಾಖಲೆ ಹೊಂದಿರುವ ಧರುಣ್‌ ಅಯ್ಯಸಾಮಿ, ಕೊನೆಯ ಹರ್ಡಲ್‌ ದಾಟಲು ಇರುವಾಗ ಎಡವಿದ ಪರಿಣಾಮ ಸೆಮಿಫೈನಲ್ ತಲುಪಲು ವಿಫಲರಾದರು. ಐದನೇ ನಂಬರ್‌ ಹೀಟ್ಸ್‌ನಲ್ಲಿ 50.55 ಸೆ. ತೆಗೆದುಕೊಂಡು ಅವರು ಆರನೇ ಸ್ಥಾನದಲ್ಲಿ ಮುಗಿಸಿದರು. ಒಟ್ಟಾರೆ 27ನೇ ಸ್ಥಾನಕ್ಕೆ ಸರಿದರು. ಅಯ್ಯಸಾಮಿ ಅವರ ಅತ್ಯುತ್ತಮ ಸಾಧನೆ 48.80 ಸೆ. ಆಗಿದೆ. ಐದು ಹೀಟ್ಸ್‌ಗಳಲ್ಲಿ ಮೊದಲ ನಾಲ್ಕು ಸ್ಥಾನ ಗಳಿಸಿದವರು ಮತ್ತು ಅವರ ನಂತರದ ನಾಲ್ಕು ಉತ್ತಮ ಅವಧಿಯಲ್ಲಿ ಗುರಿಮುಟ್ಟಿದವ ನಾಲ್ವರು ಸೆಮಿಫೈನಲ್‌ಗೆ ಅರ್ಹತೆ ಪಡೆಯುತ್ತಾರೆ. ಶ್ರೀಶಂಕರ್‌ಗೆ ನಿರಾಸೆ:ಎಂ. ಶ್ರೀಶಂಕರ್‌, ಲಾಂಗ್‌ಜಂಪ್‌ನಲ್ಲಿ ಫೈನಲ್‌ ತಲುಪಲು ವಿಫಲರಾಗಿ ನಿರಾಸೆ ಮೂಡಿಸಿದರು. ಅವರು ಮೂರು ಯತ್ನಗಳ ಪೈಕಿ ಎರಡನೇ ಯತ್ನದಲ್ಲಿ 7.62 ಮೀ. ದೂರ ಜಿಗಿದಿದ್ದು ಅತ್ಯುತ್ತಮ ಎನಿಸಿತು. ಅವರು ಅರ್ತಹಾ ಸುತ್ತಿನಲ್ಲಿ ಒಟ್ಟಾರೆ 22ನೇ ಸ್ಥಾನ ಪಡೆದರು. ರಾಷ್ಟ್ರೀಯ ದಾಖಲೆ (8.20 ಮೀ) ಅವರ ಹೆಸರಿನಲ್ಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.