ವಿಶ್ವ ಮಹಿಳಾ ಬಾಕ್ಸಿಂಗ್‌: ಪ್ರೀ ಕ್ವಾರ್ಟರ್‌ಗೆ ಜಮುನಾ ಉಲಾನ್‌ ಉದೆ, ರಷ್ಯಾ: ಭಾರತದ ಜಮುನಾ ಬೋರೊ ಅವರು ವಿಶ್ವ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಶುಕ್ರವಾರ ನಡೆದ 54 ಕೆ.ಜಿ. ವಿಭಾಗದ ಮೊದಲ ಸುತ್ತಿನ ಹಣಾಹಣಿಯಲ್ಲಿ ಜಮುನಾ 5–0 ಪಾಯಿಂಟ್ಸ್‌ನಿಂದ ಮಂಗೋಲಿಯಾದ ಮಿಚಿದ್ಮಾ ಎರ್ಡೆನೆಡಲಾಯ್‌ ಎದುರು ಗೆದ್ದರು. 22ರ ಹರೆಯದ ಜಮುನಾ, ಕೊನೆಯ ಮೂರು ನಿಮಿಷಗಳಲ್ಲಿ ಎದುರಾಳಿಯ ಮೇಲೆ ಪ್ರಹಾರ ನಡೆಸಿ ಪಾಯಿಂಟ್ಸ್‌ ಕಲೆಹಾಕಿದರು. ಮುಂದಿನ ಸುತ್ತಿನಲ್ಲಿ ಭಾರತದ ಬಾಕ್ಸರ್‌ಗೆ ಅಲ್ಜೀರಿಯಾದ ಒಯುದಾದ್‌ ಸಫೌಹ್‌ ಅವರ ಸವಾಲು ಎದುರಾಗಲಿದೆ. ಇಲ್ಲಿ ಐದನೇ ಶ್ರೇಯಾಂಕ ಪಡೆದಿರುವ ಒಯುದಾದ್‌, 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಮೊದಲ ಸುತ್ತಿನಲ್ಲಿ ಅವರಿಗೆ ‘ಬೈ’ ಸಿಕ್ಕಿದೆ. ಶನಿವಾರ ನಡೆಯುವ ಪಂದ್ಯಗಳಲ್ಲಿ ನೀರಜಾ (57 ಕೆ.ಜಿ) ಮತ್ತು ಸವೀತಿ ಬೂರಾ (75 ಕೆ.ಜಿ) ಅವರು ರಿಂಗ್‌ಗೆ ಇಳಿಯಲಿದ್ದಾರೆ. ನೀರಜಾ ಅವರು ಚೀನಾದ ಕ್ವಿಯಾವೊ ಜಿಯೆರು ಎದುರೂ, ಸವೀತಿ ಅವರು ಮಂಗೋಲಿಯಾದ ಮ್ಯಾಗ್‌ ಮರ್ಜರ್‌ಗಲ್‌ ಮುಂಕ್‌ಬತ್‌ ವಿರುದ್ಧವೂ ಪೈಪೋಟಿ ನಡೆಸಲಿದ್ದಾರೆ. ಚಾಂಪಿಯನ್‌ಷಿಪ್‌ನಲ್ಲಿ 57 ದೇಶಗಳ ಒಟ್ಟು 224 ಬಾಕ್ಸರ್‌ಗಳು ಭಾಗವಹಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.