ಪ್ರೊ ಕಬಡ್ಡಿ ಲೀಗ್‌: ಬುಲ್ಸ್ ಪಳಗಿಸಿದ ಯೋಧಾ ಗ್ರೇಟರ್‌ ನೊಯ್ಡಾ: ವಿರಾಮದ ನಂತರ ಚೇತರಿಸಿಕೊಂಡ ಯು.ಪಿ.ಯೋಧಾ ತಂಡ ಪ್ರೊ ಕಬಡ್ಡಿ ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ 45–33 ಪಾಯಿಂಟ್‌ಗಳಿಂದ ಬೆಂಗಳೂರು ಬುಲ್ಸ್‌ ತಂಡವನ್ನು ಸೋಲಿಸಿತು. ಶಹೀದ್ ವಿಜಯ್‌ ಸಿಂಗ್‌ ಪಥಿಕ್‌ ಕ್ರೀಡಾಂಗಣದಲ್ಲಿ ವಿರಾಮದ ವೇಳೆ ಬುಲ್ಸ್ 22–20 ಪಾಯಿಂಟ್‌ಗಳಿಂದ ಮುಂದಿತ್ತು. ಯೋಧಾ ರೇಡರ್‌ಗಳಾದ ಶ್ರೀಕಾಂತ್‌ ಜಾಧವ್‌ ಮತ್ತು ಸುರೇಂದರ್‌ ಗಿಲ್‌ ತಲಾ 9 ಪಾಯಿಂಟ್‌ ಗಳಿಸಿದರು.ಪಂದ್ಯದ 14ನೇ ನಿಮಿಷ ಬೋನಸ್‌ ಪಾಯಿಂಟ್‌ ಪಡೆಯುವ ಮೂಲಕ ಶ್ರೀಕಾಂತ್‌ ಜಾಧವ್‌ ಪ್ರೊ ಕಬಡ್ಡಿಯಲ್ಲಿ 400 ಪಾಯಿಂಟ್ಸ್‌ ಪೂರೈಸಿದ ಸಾಧನೆಗೆ ಪಾತ್ರರಾದರು. ಬುಲ್ಸ್‌ ತಂಡದ ಪ್ರಮುಖ ರೈಡರ್‌ ಪವನ್‌ ಶೆರವಾತ್‌ 13 ಅಂಕ ಗಳಿಸಿದರು. ಆದರೆ ಅವರಿಗೆ ಉಳಿದವರಿಂದ ಸೂಕ್ತ ಬೆಂಬಲ ಸಿಗಲಿಲ್ಲ. ಇನ್ನೊಂದು ಪಂದ್ಯ ಟೈ: ಕೊನೆಯ ಹಂತದ ಒತ್ತಡವನ್ನು ಮೆಟ್ಟಿನಿಂತ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ ಪಂದ್ಯದಲ್ಲಿ ದಬಂಗ್‌ ಡೆಲ್ಲಿ ವಿರುದ್ಧ 37–37ರಿಂದ ಟೈ ಸಾಧಿಸಲು ಯಶಸ್ವಿಯಾಯಿತು. ಡೆಲ್ಲಿ ಪರ ‘ಸೂಪರ್‌ ನವೀನ್‌ 12 ಪಾಯಿಂಟ್‌ ಗಳಿಸಿ ದರು. ಮುಂಬಾ ತಂಡದ ಪರ ಅಂತಹದೇ ಸಾಮರ್ಥ್ಯ ತೋರಿದ ಅಭಿಷೇಕ್‌ ಸಿಂಗ್‌ 10 ಹಾಗೂ ಅರ್ಜುನ್‌ ದೇಸ್ವಾಲ್‌ 9 ಪಾಯಿಂಟ್ಸ್ ದಾಖಲಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.