ಮಹಿಳಾ ಸ್ಕ್ವಾಷ್‌ ಚಾಂಪಿಯನ್‌ಷಿಪ್‌: ಜೋಷ್ನಾ ಶುಭಾರಂಭ ಕೈರೊ: ಭಾರತದ ಜೋಷ್ನಾ ಚಿಣ್ಣಪ್ಪ ಅವರು ವಿಶ್ವ ಮಹಿಳಾ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಶುಭಾರಂಭ ಮಾಡಿದ್ದಾರೆ. ಗುರುವಾರ ರಾತ್ರಿ ನಡೆದ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನ ಪೈಪೋಟಿಯಲ್ಲಿ ಜೋಷ್ನಾ 9–11, 12–10, 8–11, 11–6, 11–6ರಲ್ಲಿ ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತಿ ಹೇಲಿ ಮೆಂಡೆಜ್‌ ಅವರನ್ನು ಪರಾಭವಗೊಳಿಸಿದರು. ಚಾಂಪಿಯನ್‌ಷಿಪ್‌ನಲ್ಲಿ 12ನೇ ಶ್ರೇಯಾಂಕ ಹೊಂದಿರುವ ಜೋಷ್ನಾ, ಮೊದಲ ಗೇಮ್‌ನಲ್ಲಿ ನಿರಾಸೆ ಕಂಡರು. ಇದರಿಂದ ಎದೆಗುಂದದ ಅವರು ಮರು ಗೇಮ್‌ನಲ್ಲಿ ತಿರುಗೇಟು ನೀಡಿ 1–1 ಸಮಬಲ ಸಾಧಿಸಿದರು. ಮೂರನೇ ಗೇಮ್‌ನಲ್ಲಿ ಗೆದ್ದ ಮೆಂಡೆಜ್‌ 2–1 ಮುನ್ನಡೆ ಪಡೆದರು. ಕೊನೆಯ ಎರಡು ಗೇಮ್‌ಗಳಲ್ಲಿ ಜೋಷ್ನಾ ಮಿಂಚಿದರು. ಚುರುಕಿನ ಡ್ರಾಪ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಅವರು ಸಂಭ್ರಮಿಸಿದರು. ಮೊದಲ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಭಾರತದ ಸುನೈನಾ ಕುರುವಿಲ್ಲಾ 11–8, 7–11, 4–11, 5–11ರಲ್ಲಿ ಬೆಲ್ಜಿಯಂ ದೇಶದ ನೆಲೆ ಗಿಲಿಸ್‌ ಎದುರು ಪರಾಭವಗೊಂಡರು. ರಮಿತ್‌ಗೆ ಸೋಲು: ಈಜಿಪ್ಟಿಯನ್‌ ಓಪನ್‌ ಪುರುಷರ ಸ್ಕ್ವಾಷ್‌ ಟೂರ್ನಿಯ ಆರಂಭಿಕ ಸುತ್ತಿನಲ್ಲಿ ಭಾರತದ ರಮಿತ್‌ ಟಂಡನ್‌ ನಿರಾಸೆ ಕಂಡರು. ಹಾಂಕಾಂಗ್‌ನ ಲಿಯೊ ಅವು 11–5, 11–7, 11–2ರಲ್ಲಿ ಭಾರತದ ಆಟಗಾರನನ್ನು ಮಣಿಸಿದರು. ಸೌರವ್‌ ಘೋಷಾಲ್‌ ಅವರಿಗೆ ಮೊದಲ ಸುತ್ತಿನಲ್ಲಿ ‘ಬೈ’ ಲಭಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.