ಕ್ರೀಡಾಕೂಟಕ್ಕೆ ಮಳೆ ಅಡ್ಡಿ ಬೀದರ್: ಇಲ್ಲಿ ನಡೆಯುತ್ತಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಅಂತರ ಕಾಲೇಜುಗಳ ಅಥ್ಲೆಟಿಕ್ಸ್‌ ಕ್ರೀಡಾಕೂಟಕ್ಕೆ ಗುರುವಾರ ಬೆಳಗಿನ ಜಾವ ಸುರಿದ ಮಳೆ ಅಡ್ಡಿ ಉಂಟು ಮಾಡಿತು. ಗುರುನಾನಕ ದೇವ ಎಂಜಿನಿಯರಿಂಗ್‌ ಕಾಲೇಜಿನ ಕ್ರೀಡಾಂಗಣದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತ ಕಾರಣ 11 ಸ್ಪರ್ಧೆಗಳ ಪೈಕಿ ಐದು ಸ್ಪರ್ಧೆಗಳನ್ನು ಮಾತ್ರ ನಡೆಸಲಾಯಿತು. ಆರು ಸ್ಪರ್ಧೆಗಳನ್ನು ಶುಕ್ರವಾರಕ್ಕೆ ಮುಂದೂಡಲಾಯಿತು. ಸಂಜೆಯೂ ಮಳೆ ಬಂದ ಕಾರಣ ಓಟದ ಸ್ಪರ್ಧೆಯ ವಿಜೇತಗೆ ಪ್ರಮಾಣಪತ್ರ ವಿತರಿಸಲು ಸಾಧ್ಯವಾಗಲಿಲ್ಲ. ಬೀದರ್, ಬಸವಕಲ್ಯಾಣ, ಭಾಲ್ಕಿ, ಚಿಟಗುಪ್ಪ, ಹುಮನಾಬಾದ್, ಕಮಲನಗರದಲ್ಲಿ ಸಾಧಾರಣ ಮಳೆಯಾಗಿದೆ. ಬಸವಕಲ್ಯಾಣದ ಬಸ್‌ ನಿಲ್ದಾಣದಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತುಕೊಂಡಿತ್ತು. ಹುಮನಾಬಾದ್ ತಾಲ್ಲೂಕಿನ ಸೀತಾಳಗೇರಾದಲ್ಲಿ 42 ಮಿ.ಮೀ., ಹಳ್ಳಿಖೇಡದಲ್ಲಿ 24 ಮಿ.ಮೀ, ಔರಾದ್‌ ತಾಲ್ಲೂಕಿನ ಠಾಣಾಕುಶನೂರಲ್ಲಿ 22 ಮಿ.ಮೀ, ಧೂಪದಮಹಾಗಾಂವದಲ್ಲಿ 19.5 ಮಿ.ಮೀ, ಚಿಟಗುಪ್ಪದಲ್ಲಿ 17 ಮಿ.ಮೀ, ಬೀದರ್ ತಾಲ್ಲೂಕಿನಲ್ಲಿ 12.05 ಮಿ.ಮೀ ಹಾಗೂ ಔರಾದ್‌ ತಾಲ್ಲೂಕಿನ ಸೋನಾಳದಲ್ಲಿ 7 ಮಿ.ಮೀ ಮಳೆಯಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.