ಸ್ಕ್ವಾಷ್‌: ಪ್ರೀ ಕ್ವಾರ್ಟರ್‌ಗೆ ಸೌರವ್‌ ಘೋಷಾಲ್‌ ದೋಹಾ: ಅಮೋಘ ಆಟ ಆಡಿದ ಭಾರತದ ಸೌರವ್‌ ಘೋಷಾಲ್‌, ಪುರುಷರ ವಿಶ್ವ ಸ್ಕ್ವಾಷ್‌ ಚಾಂಪಿಯನ್‌ಷಿಪ್‌ನಲ್ಲಿ ಪ್ರೀ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಭಾನುವಾರ ರಾತ್ರಿ ನಡೆದ ಸಿಂಗಲ್ಸ್‌ ವಿಭಾಗದ ಎರಡನೇ ಸುತ್ತಿನ ಹಣಾಹಣಿಯಲ್ಲಿ ಸೌರವ್‌ 11–8, 11–5, 11–5 ನೇರ ಗೇಮ್‌ಗಳಿಂದ ಫ್ರಾನ್ಸ್‌ನ ಲುಕಾಸ್‌ ಸೆರ್ಮ್‌ ಅವರನ್ನು ಪರಾಭವಗೊಳಿಸಿದರು. ಅಮೋಘ ರ‍್ಯಾಲಿ ಮತ್ತು ಸ್ಟ್ರೋಕ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ಆಟಗಾರ ಮೊದಲ ಎರಡು ಗೇಮ್‌ಗಳಲ್ಲಿ ಸುಲಭವಾಗಿ ಗೆದ್ದರು. ಮೂರನೇ ಗೇಮ್‌ನ ಶುರುವಿನಲ್ಲೂ ಸೌರವ್‌ 5–0 ಮುನ್ನಡೆ ಗಳಿಸಿದ್ದರು. ಬಳಿಕ ಇನ್ನಷ್ಟು ಚುರುಕಾಗಿ ಆಡಿದ ಅವರು ನಿರಾಯಾಸವಾಗಿ ಜಯದ ತೋರಣ ಕಟ್ಟಿದರು. ಮಂಗಳವಾರ ನಡೆಯುವ ಹದಿನಾರರ ಘಟ್ಟದ ಹಣಾಹಣಿಯಲ್ಲಿ 10ನೇ ಶ್ರೇಯಾಂಕದ ಆಟಗಾರ ಸೌರವ್‌, ಈಜಿಪ್ಟ್‌ನ ಅಗ್ರ ಶ್ರೇಯಾಂಕದ ಆಟಗಾರ ಮೊಹಮ್ಮದ್‌ ಅಲ್‌ ಶೊರ್ಬಗಿ ಎದುರು ಸೆಣಸಲಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.