ಬ್ಯಾಸ್ಕೆಟ್‌ಬಾಲ್‌: ಕರ್ನಾಟಕಕ್ಕೆ ಮತ್ತೊಂದು ಜಯ ಬೆಂಗಳೂರು: ಕರ್ನಾಟಕದ ಪುರುಷರ ತಂಡದವರು ಪಂಜಾಬ್‌ನ ಲುಧಿಯಾನದಲ್ಲಿ ನಡೆಯುತ್ತಿರುವ 70ನೇ ರಾಷ್ಟ್ರೀಯ ಸೀನಿಯರ್‌ ಬ್ಯಾಸ್ಕೆಟ್‌ಬಾಲ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ. ಸೋಮವಾರ ರಾತ್ರಿ ನಡೆದ ‘ಎ’ ಗುಂಪಿನ ಹಣಾಹಣಿಯಲ್ಲಿ ಕರ್ನಾಟಕ 85–73 ಪಾಯಿಂಟ್ಸ್‌ನಿಂದ ದೆಹಲಿ ತಂಡವನ್ನು ಪರಾಭವಗೊಳಿಸಿತು. ಕರ್ನಾಟಕ ತಂಡದ ಅನಿಲ್‌ ಕುಮಾರ್‌ ಮತ್ತು ಅರವಿಂದ್‌ ಆರ್ಮುಗಂ ಅವರು ತಲಾ 17 ಪಾಯಿಂಟ್ಸ್‌ ಗಳಿಸಿದರೆ, ಐಸಾಕ್‌ ಥಾಮಸ್‌ 16 ಪಾಯಿಂಟ್ಸ್‌ ಕಲೆಹಾಕಿದರು. ದೆಹಲಿ ತಂಡದ ಸುನಿಲ್‌ 29 ಪಾಯಿಂಟ್ಸ್‌ ಗಳಿಸಿ ಸೋಲಿನ ನಡುವೆಯೂ ಗಮನ ಸೆಳೆದರು. ಮೊದಲ ಕ್ವಾರ್ಟರ್‌ನಲ್ಲಿ 22–18ರಿಂದ ಮುನ್ನಡೆ ಪಡೆದ ಕರ್ನಾಟಕ ತಂಡಕ್ಕೆ ಎರಡನೇ ಕ್ವಾರ್ಟರ್‌ನಲ್ಲಿ ದೆಹಲಿ ತಿರುಗೇಟು ನೀಡಿತು. ಇದರಿಂದ ಎದೆಗುಂದದ ರಾಜ್ಯದ ಆಟಗಾರರು ನಂತರದ ಎರಡು ಕ್ವಾರ್ಟರ್‌ಗಳಲ್ಲೂ ಮಿಂಚಿದರು. ಇದಕ್ಕೂ ಮುನ್ನ ನಡೆದಿದ್ದ ಪಂದ್ಯದಲ್ಲಿ ರಾಜ್ಯ ತಂಡದವರು 81–57 ಪಾಯಿಂಟ್ಸ್‌ನಿಂದ ಉತ್ತರಾಖಂಡವನ್ನು ಸೋಲಿಸಿದ್ದರು. ಈ ಪಂದ್ಯದಲ್ಲಿ ಅನಿಲ್‌ ಕುಮಾರ್‌ 23 ಪಾಯಿಂಟ್ಸ್‌ ಕಲೆಹಾಕಿದ್ದರು. ‘ಬಿ’ ಗುಂಪಿನ ಪಂದ್ಯದಲ್ಲಿ ತಮಿಳುನಾಡು 91–58 ಪಾಯಿಂಟ್ಸ್‌ನಿಂದ ರಾಜಸ್ಥಾನವನ್ನು ಮಣಿಸಿತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.