ವೈಭವ್‌– ಪ್ರಕಾಶ್‌ ಎರಡನೇ ಸುತ್ತಿಗೆ ಸಾರ್‌ಬ್ರುಕನ್‌, ಜರ್ಮನಿ: ಭಾರತದ ಡಬಲ್ಸ್‌ ಆಟಗಾರರಾದ ವೈಭವ್‌ ಮತ್ತು ಪ್ರಕಾಶ್ ರಾಜ್‌, ಸಾರ್‌ಲೊರ್‌ ಲಕ್ಸ್‌ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಮೊದಲ ಸುತ್ತಿನ ಪಂದ್ಯದಲ್ಲಿ ಜಯಗಳಿಸಿ ಎರಡನೇ ಸುತ್ತಿಗೆ ಮುನ್ನಡೆದಿದ್ದಾರೆ ಅವರು ಮಲೇಷ್ಯಾದ ಅಮ್ರಿ ಅಮೀರ್ ಮತ್ತು ಮುಹಮದ್‌ ಇದಮ್‌ ಜೈನಲ್‌ ಅಬಿ ಸ್ಯಾಜ್ಮಿಲ್ ಜೋಡಿಯನ್ನು ಸೋಲಿಸಿದರು. ಬುಧವಾರ ನಡೆದ ಈ ಪಂದ್ಯದಲ್ಲಿ ಭಾರತದ ಜೋಡಿ ಮೊದಲ ಗೇಮ್‌ ಹಿನ್ನಡೆಯಿಂದ ಚೇತರಿಸಿಕೊಂಡು 16–21, 21–14, 21–16ರಲ್ಲಿ ಜಯಗಳಿಸಿತು. ಈ ಪಂದ್ಯ ಮುಕ್ಕಾಲು ಗಂಟೆ ನಡೆಯಿತು. ವೈಭವ್‌– ಪ್ರಕಾಶ್‌ ಜೋಡಿ ಮುಂದಿನ ಸುತ್ತಿನಲ್ಲಿ ನಾಲ್ಕನೇ ಶ್ರೇಯಾಂಕದ ಅಲೆಕ್ಸಾಂಡರ್‌ ಡನ್‌– ಆಡ್ಯಮ್‌ ಹಾಲ್‌ (ಸ್ಕಾಟ್ಲೆಂಡ್‌) ಜೋಡಿಯನ್ನು ಎದುರಿಸಲಿದೆ. ಲಕ್ಷ್ಯ ಸೆನ್‌– ಮಿಥುನ್‌ ಮಂಜುನಾಥ್‌ ಮೊದಲ ಸುತ್ತಿನಲ್ಲಿ ಬೈ ಪಡೆದಿದ್ದಾರೆ. ಸಿಂಗಲ್ಸ್‌ನಲ್ಲಿ ಕಿರಣ್‌ ಜಾರ್ಜ್ 21–17, 21–13ರಿಂದ ಚೀನಾದ ಲಿಯು ಹೈ ಚಾವೊ ವಿರುದ್ಧ ಗೆದ್ದಿದ್ದರು. ಬಿ.ಎಂ.ರಾಹುಲ್‌ ಭಾರದ್ವಾಜ್‌ ಅವರು 21–15, 21–9 ರಿಂದ ಬೆಲ್ಜಿಯಂನ ರೊವಾನ್‌ ಶೂರ್‌ಕೊಜೆಲ್‌ ವಿರುದ್ಧ ಜಯಗಳಿಸಿ ಎರಡನೇ ಸುತ್ತಿಗೆ ತಲುಪಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.